ADVERTISEMENT

ಗಾಯಗೊಂಡು ಕಾಡು ಸೇರಿದ ಜಿಂಕೆ

ನೀರು ಅರಸಿ ನಾಡಿಗೆ ಬಂದು ನಾಯಿಗಳ ದಾಳಿಗೆ ತುತ್ತಾಗಿದ್ದ ವನ್ಯಮೃಗ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:56 IST
Last Updated 31 ಜನವರಿ 2017, 5:56 IST
ಹಾನಗಲ್‌ ತಾಲ್ಲೂಕಿನ ಮಾವಕೊಪ್ಪ ಅರಣ್ಯಕ್ಕೆ ಹೊಂದಿಕೊಂಡ ಅಡಿಕೆ ತೋಟದಲ್ಲಿ ಸೋಮವಾರ ನಾಯಿಗಳ ದಾಳಿಗೆ ತುತ್ತಾದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿದರು
ಹಾನಗಲ್‌ ತಾಲ್ಲೂಕಿನ ಮಾವಕೊಪ್ಪ ಅರಣ್ಯಕ್ಕೆ ಹೊಂದಿಕೊಂಡ ಅಡಿಕೆ ತೋಟದಲ್ಲಿ ಸೋಮವಾರ ನಾಯಿಗಳ ದಾಳಿಗೆ ತುತ್ತಾದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿದರು   

ಹಾನಗಲ್: ನೀರು ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯು ನಾಯಿಗಳ ದಾಳಿಗೆ ತುತ್ತಾಗುವುದನ್ನು ತಡೆದು ಮರಳಿ ಕಾಡಿಗೆ ಸುರಕ್ಷಿತವಾಗಿ ಸೇರಿಸಿದ ಘಟನೆಯು ಸೋಮವಾರ ನಸುಕಿನ ಜಾವದಲ್ಲಿ ತಾಲ್ಲೂಕಿನ ಮಾವಕೊಪ್ಪ ಸಮೀಪ ನಡೆದಿದೆ.

ಮಾವಕೊಪ್ಪ ಸಮೀಪದ ಭೂತೇಶ್ವರ ದೇವಸ್ಥಾನದ ಬಳಿಯಲ್ಲಿ ಜಿಂಕೆಯನ್ನು ಕಂಡ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿವೆ. ಜಿಂಕೆಯ ಕಾಲುಗಳನ್ನು ಕಚ್ಚಿ ಗಾಯಗೊಳಿಸಿವೆ.

ತಪ್ಪಿಸಿಕೊಂಡು ಹೋಗುವ ಭರದಲ್ಲಿ ಜಿಂಕೆಯು ದೇವಸ್ಥಾನದ ಎದುರಿನ ಅಡಿಕೆ ತೋಟದಲ್ಲಿ ನಾಲ್ಕೈದು ದಿನಗಳಿಂದ ಬೀಡು ಬಿಟ್ಟಿದ್ದ ಕುರಿಗಾಹಿಗಳು ಕುರಿಗಳ ರಕ್ಷಣೆಗಾಗಿ ಹಾಕಿದ್ದ ತಾತ್ಕಾಲಿಕ ಬಲೆಯಲ್ಲಿ ಸಿಕ್ಕಿಕೊಂಡಿದೆ. ಈ ವೇಳೆ ಕುರಿಗಾಹಿಗಳ ನಾಯಿಗಳೂ ಜಿಂಕೆಯ ಮೇಲೆರೆಗಿವೆ.

ಇದನ್ನು ಗಮನಿಸಿದ ಕುರಿಗಾಹಿಗಳು ಮತ್ತು ದೇವಸ್ಥಾನ ಸಮೀಪದ ವ್ಯಾಪಾರಿ ಗಳು ನಾಯಿಗಳಿಂದ ಜಿಂಕೆಯನ್ನು ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೀವ ಭಯದಿಂದ ಗಾಬರಿಗೊಂಡಿದ್ದ ಜಿಂಕೆಯ ಕಾಲುಗಳನ್ನು ಕಟ್ಟಿ ಉಪಚರಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಎಸ್‌.ಶಿವರಾತ್ರೇಶ್ವರಸ್ವಾಮಿ ಮತ್ತು ಉಪ ವಲಯ ಅರಣ್ಯಾಧಿಕಾರಿಗಳಾದ ಬಿ.ಎನ್‌.ಹೊಸೂ ರ, ಎಚ್‌.ಕೆ.ರಾಥೋಡ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತರಚು ಗಾಯ ಗಳಾಗಿದ್ದ ಜಿಂಕೆ ಆರೋಗ್ಯ ಪರಿಶೀಲಿಸಿ ಬಳಿಕ ಕಾಡಿಗೆ ಬಿಟ್ಟಿದ್ದಾರೆ.

ನೀರಿನ ಕೊರತೆ?: ‘ಜಿಂಕೆ ಬಂದಿರುವುದು ಕಾಡಿನಲ್ಲಿ ಪ್ರಾಣಿಗಳಿಗೆ ನೀರು ಸಿಗುತ್ತಿಲ್ಲ ಎಂಬುದರ ಸಂಕೇತ’ ಎಂದು ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ ಅರ್ಥೈಸುತ್ತಾರೆ.

ಕಳೆದ ವರ್ಷ ಬೇಸಿಗೆಯಲ್ಲಿ ಕಾಡು ಪ್ರಾಣಿಗಳ ಸಾಂದ್ರತೆ ಹೆಚ್ಚಿರುವ ಪ್ರದೇಶ ದಲ್ಲಿ ಅಲ್ಲಲ್ಲಿ ಸಣ್ಣ ಗುಂಡಿ ತೋಡಿ ಅದ ರಲ್ಲಿ ಪ್ಲಾಸ್ಟಿಕ್‌ ತಾಡಪಾಲು ಹಾಕಿ ನೀರು ತುಂಬಿಸುವ ವ್ಯವಸ್ಥೆ ಮಾಡಿದ್ದರು.

‘ಕಳೆದ ಬಾರಿ ಒಟ್ಟು 300 ಗುಂಡಿ ಗಳನ್ನು ತೋಡಲಾಗಿದೆ, ಅವೆಲ್ಲವೂ ಈಗ ನೀರಿಲ್ಲದಂತಾಗಿವೆ. ಅಗತ್ಯವಿದ್ದೆಡೆ ಗುಂಡಿಗಳಿಗೆ ನೀರು ತುಂಬಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.