ADVERTISEMENT

ಜಿಲ್ಲೆಯಾದ್ಯಂತ ಆಲಿಕಲ್ಲು ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 7:15 IST
Last Updated 29 ಏಪ್ರಿಲ್ 2017, 7:15 IST

ಹಾವೇರಿ: ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ ಸುಮಾರು ಮುಕ್ಕಾಲು ತಾಸು ಮಳೆಯಾಗಿದೆ. ವಿವಿಧೆಡೆ ಗಾಳಿ, ಗುಡುಗು, ಸಿಡಿಲಿನ ಜೊತೆ ಆಲಿಕಲ್ಲು ಮಳೆಯಾಗಿದೆ. ಬಹುದಿನಗಳಿಂದ ‘ಬರ’ದ ಬೇಗೆಗೆ ಬೆಂದಿದ್ದ ಮೈ ಮನಸ್ಸುಗಳಿಗೆ ತಂಪು ನೀಡಿತು. ರೈತರ ಮೊಗದಲ್ಲಿ ನಿರೀಕ್ಷೆಯ ಹರ್ಷ ಮೂಡಿಸಿತು. ತಾಲ್ಲೂಕಿನ ಗುತ್ತಲ ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ. ಉಳಿದಂತೆ ನಗರ ಸೇರಿದಂತೆ ವಿವಿಧೆಡೆ ಸುಮಾರು 7.30ರಿಂದ ಅರ್ಧ ತಾಸಿಗೂ ಅಧಿಕ ಮಳೆ ಸುರಿಯಿತು. ಜಿಲ್ಲಾ ಕೇಂದ್ರದಲ್ಲಿ ಮೊದಲ ಬಾರಿಗೆ ಧಾರಾಕಾರವಾಗಿ ಸುರಿದ ಮಳೆಗೆ ಜನ ಸಂಭ್ರಮಿಸಿದರು. ಬಿಸಿಲ ಬೇಗೆಯಿಂದ ನೊಂದ ಜನ ಮಣ್ಣಿನ ಸೊಗಡಿನ ಕಂಪು ಆಸ್ವಾದಿಸಿದರು. ಕೆಲವೆಡೆ ರಸ್ತೆ ಮೇಲೆಯೇ ನೀರು ನಿಂತಿತ್ತು.

ರಾಣೆಬೆನ್ನೂರು, ಬ್ಯಾಡಗಿ ಸವಣೂರು, ಹಾನಗಲ್, ಶಿಗ್ಗಾವಿ, ಹಿರೇಕೆರೂರ ಮತ್ತಿತರೆಡೆ ಮಳೆಯಾಗಿದೆ.ರಾಣೆಬೆನ್ನೂರು ವರದಿ: ತಾಲ್ಲೂಕಿನಾದ್ಯಂತ ಭಾರಿ ಗುಡುಗು, ಸಿಡಿಲು, ಮಿಂಚು, ಆಲಿಕಲ್ಲು ಸಹಿತ ಸಂಜೆ 5.30ಕ್ಕೆ ಮಳೆ ಆರಂಭಗೊಂಡಿತು. ಸುಮಾರು 7.30ರ ತನಕ ಮಳೆ ಸುರಿಯಿತು. ತಾಲ್ಲೂಕಿನ ಹಳೇ ಹುಲಿಹಳ್ಳಿ, ಹೊಸ ಹುಲಿಹಳ್ಳಿ, ಅಸುಂಡಿ, ಹಲಗೇರಿ, ರಾಣೆಬೆನ್ನೂರು ನಗರ ಪ್ರದೇಶದಲ್ಲಿ  ಒಂದು ತಾಸಿಗೂ ಹೆಚ್ಚು ಕಾಲ ಆಲಿಕಲ್ಲಿನ ಮಳೆಸುರಿಯಿತು.

‘ಆಲಿಕಲ್ಲಿನ ಸಹಿತ ಉತ್ತಮವಾಗಿ ಸುರಿದ ಮಳೆ ಆನಂದ ನೀಡಿತು’ ಎಂದು ಹುಲಿಹಳ್ಳಿಯ ವೀರೇಶ ರೆಡ್ಡಿ ಮೈದೂರ ತಿಳಿಸಿದರು.ನಗರದಲ್ಲಿ ಮಕ್ಕಳು, ಮಹಿಳೆಯರು ಮಳೆಯಲ್ಲಿ ಬಟ್ಟಲಲ್ಲಿ ಆಲಿಕಲ್ಲು ಸಂಗ್ರಹಿಸಿ ಸಂಭ್ರಮಿಸಿದರು. ಕುಣಿದು ಕುಪ್ಪಳಿಸಿ ರಜಾ ಮಜಾ ಅನುಭವಿಸಿದರು. ಜೋಯಿಸರಹರಳಳ್ಳಿ, ಸುಣಕಲ್ಲಬಿದರಿ, ಬೆನಕನಕೊಂಡ, ಉಕ್ಕುಂದ, ಸರ್ವಂದ, ಇಟಗಿ ಹಾಗೂ ರಾಣೆಬೆನ್ನೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. 

ADVERTISEMENT

ಬ್ಯಾಡಗಿ ವರದಿ:  ಶುಕ್ರವಾರ ಸಂಜೆ 7.30ಕ್ಕೆ ಆರಂಭವಾದ ಮಳೆ ಸುಮಾರು 45 ನಿಮಿಷ ಸುರಿಯುವ ಮೂಲಕ ತಂಪೆರೆಯಿತು.ಸಂಜೆ 5 ಗಂಟೆಗೆ ಕೆಲ ಹೊತ್ತು ಗುಡುಗು ಸಹಿತ ಗಾಳಿ ಬೀಸಿದ್ದು, ತುಂತುರು ಮಳೆಯಾಯಿತು.  ಮತ್ತೆ ಸಂಜೆ 7.30ಕ್ಕೆ ಬಂದ ಮಳೆ, ಬ್ಯಾಡಗಿ ಪಟ್ಟಣ, ಮೋಟೆಬೆನ್ನೂರ, ಗುಂಡೇನಹಳ್ಳಿ, ಕದಮನಹಳ್ಳಿ, ಖುರ್ಧಕೋಡಿಹಳ್ಳಿ, ಕದರಮಂಡಲಗಿ ಮುಂತಾದ ಭಾಗದಲ್ಲಿ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.