ADVERTISEMENT

ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ಎಂದು...?

ಪ್ರಮೀಳಾ ಹುನಗುಂದ
Published 27 ನವೆಂಬರ್ 2017, 7:29 IST
Last Updated 27 ನವೆಂಬರ್ 2017, 7:29 IST

ಬ್ಯಾಡಗಿ: ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿಯ ಅಭಿವೃದ್ಧಿಯ ಕಾರ್ಯ ಕಳೆದ 2015ರ ಜೂನ್‌ 12ರಲ್ಲಿ ಪ್ರಾರಂಭವಾಗಿ, ಈ ವರೆಗೂ ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿದೆ.

ರಸ್ತೆಯ ಅಭಿವೃದ್ಧಿ ಕಾರ್ಯಾಚರಣೆಗೆ ಕೈ ಹಾಕಿದ್ದ ತಾಲ್ಲೂಕು ಆಡಳಿತ ಚರಂಡಿ ವರೆಗಿನ ಸರ್ಕಾರಿ ಜಾಗೆಯನ್ನು ಮಾತ್ರ ತೆರವುಗೊಳಿಸಿತು. ರಸ್ತೆ ಅಗಲೀಕರಣಕ್ಕೆ ಮಾಲ್ಕಿ ಜಾಗೆಯನ್ನು ನೀಡಲು ವರ್ತಕರು ಹಾಗೂ ಕಟ್ಟಡ ಮಾಲೀಕರು ವಿರೋಧ ವ್ಯಕ್ತಪಡಿಸಿ ಕೋರ್ಟ್‌ ಮೆಟ್ಟಿಲೇರಿದರು.

ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಭೂಮಾಲೀಕರಿಗೆ ಪರಿಹಾರ ಒದಗಿಸಿ ಭೂಸ್ವಾಧೀನ ಪ್ರಕ್ರಿಯೆ ನಡೆಸುವಂತೆ ಕೋರ್ಟ್‌ ತಹಶೀಲ್ದಾರ್‌ಗೆ ನಿರ್ದೇಶನ ನೀಡಿತು. ಅಂದಿನಿಂದ ಇಂದಿನ ವರೆಗೆ ಅದಕ್ಕೆ ಸಂಬಂಧಪಟ್ಟ ಕಡತಗಳ ಕಚೇರಿಯಿಂದ ಕಚೇರಿಗೆ ಸ್ಥಳಾಂತ ವಾಗುತ್ತಲೇ ಇವೆ. ಹೀಗಾಗಿ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ.

ADVERTISEMENT

ಭೂಸ್ವಾಧೀನಕ್ಕೆ ₹ 11ಕೋಟಿ ಹಾಗೂ ರಸ್ತೆ ಅಭಿವೃದ್ಧಿಗೆ ₹ 13ಕೋಟಿ ಸೇರಿದಂತೆ ಒಟ್ಟು ₹ 24 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿರುವ ತಾಲ್ಲೂಕು ಆಡಳಿತ ಭೂಸ್ವಾಧೀನಕ್ಕೆ ಸಿದ್ಧತೆ ಮಾಡಿಕೊಂಡಿದೆ.

ಚರಂಡಿಗಳಿಲ್ಲದೆ ತೊಂದರೆ: 2015ರಲ್ಲಿ ಕಾರ್ಯಾಚರಣೆ ನಡೆಸಿದ ಬಳಿಕ ಕಟ್ಟಡ ಮಾಲೀಕರು ಹಾಗೂ ವರ್ತಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕಟ್ಟಡದ ಮುಂದಿನ ಭಾಗವನ್ನು ಒಡೆದು ಹಾಕಲಾಗಿದೆ. ಹೀಗಾಗಿ ಅಂಗಡಿಗಳ ದುರಸ್ತಿ ಕಾರ್ಯ ನಡೆಯದೇ ವ್ಯಾಪಾರಕ್ಕೆ ದಕ್ಕೆಯಾಗಿದೆ.

ಕೆಲವರು ತಾತ್ಕಾಲಿಕ ದುರಸ್ತಿ ಕಾರ್ಯ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದರೆ, ಇನ್ನುಳಿದವರು ಮುಂದೇನಾಗಬಹುದು ಎನ್ನುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.ಚರಂಡಿ ಕಿತ್ತು ಹಾಕಿದ್ದರಿಂದ ರಸ್ತೆ ದಾಟಲು ಅಂಗಡಿಗಳ ಎದುರಿಗೆ ಮಣ್ಣು ಹಾಕಿಸಿಕೊಳ್ಳಲಾಗಿದೆ. ಹೀಗಾಗಿ, ಮಣ್ಣು ರಸ್ತೆಗೆ ಬಿದ್ದಿದ್ದು ಯಾದೇವು ವಾಹನ ಹೋದರೂ ದೂಳು ಏಳುತ್ತಿದೆ.

‘ಮುಖ್ಯ ರಸ್ತೆಯಲ್ಲಿ ಸಾಕಷ್ಟು ಹಳೆಯ ಕಟ್ಟಡಗಳಿದ್ದು ಯಾವ ಸಂದರ್ಭದಲ್ಲಿ ಬೀಳುತ್ತವೆ ಎನ್ನುವ ಆತಂಕ ಎದುರಾಗಿದೆ. ಮುಖ್ಯ ರಸ್ತೆಗೆ ಪಕ್ಕದ ಆರೇರ ಓಣಿಯ ಶೌಚಾಲಯದ ನೀರು ಹರಿದು ಬರುತ್ತಿದೆ. ಪುರಸಭೆ ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸೊಳ್ಳೆಗಳು ಹೆಚ್ಚುತ್ತಿವೆ. ಹೀಗಾಗಿ, ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುವುದು ದುಸ್ತರವಾಗಿದೆ’ ಎಂದು ಸ್ಥಳೀಯರು ದೂರುತ್ತಿದ್ದಾರೆ.

‘ಸ್ವಚ್ಛತೆಯ ಹೆಸರಿನಲ್ಲಿ ಸಾರ್ವಜನಿಕರ ಸಾಕಷ್ಟು ಹಣ ಪೋಲಾಗುತ್ತಿದೆ. ಸಾರ್ವಜನಿಕರು ಹಾಗೂ ಕಟ್ಟಡ ಮಾಲೀಕರು ಅನುಭವಿಸುವ ಈ ನೋವಿಗೆ ಕೊನೆ ಹಾಡಬೇಕು ಹಾಗೂ ಕೂಡಲೆ ರಸ್ತೆ ಅಭಿವೃದ್ಧಿ ಕೈಗೊಳ್ಳುವಂತೆ’ ಎಂದು ಸ್ಥಳೀಯ ನಿವಾಸಿ ಬಸವರಾಜ ಕುಬಸದ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.