ADVERTISEMENT

ಪಶುಗಳಿಗೂ ನೀರು: ಮಾನವೀಯತೆ ಮೆರೆದ ರೈತ

ಎಲೆಮರೆಯ ಕಾಯಿಯಂತೆ ರೈತ ಅಶೋಕ ಕಬನೂರ ಸೇವೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 19:30 IST
Last Updated 13 ಮಾರ್ಚ್ 2017, 19:30 IST
ಶಿಗ್ಗಾವಿಯ ರೈತ ಅಶೋಕ ಕಬನೂರ ಅವರ ಹೊಲದಲ್ಲಿ ತೋಡಿರುವ ಹೊಂಡದಲ್ಲಿ ಮೇಕೆಗಳು ನೀರು ಕುಡಿಯುತ್ತಿರುವುದು
ಶಿಗ್ಗಾವಿಯ ರೈತ ಅಶೋಕ ಕಬನೂರ ಅವರ ಹೊಲದಲ್ಲಿ ತೋಡಿರುವ ಹೊಂಡದಲ್ಲಿ ಮೇಕೆಗಳು ನೀರು ಕುಡಿಯುತ್ತಿರುವುದು   

ಶಿಗ್ಗಾವಿ : ಬೇಸಿಗೆಯ ಬವಣೆಯಿಂದ ಜನ–ಜಾನುವಾರು ತತ್ತರಿಸಿ ಹೋಗುತ್ತಿರುವ ಸಂದರ್ಭದಲ್ಲಿ ರೈತರೊಬ್ಬರು ಪಶು, ಪಕ್ಷಿಗಳಿಗೂ ಹೊಲದಲ್ಲಿ ಕುಡಿಯುವ ನೀರು ಮತ್ತು ಆಹಾರದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಶೋಕ ಸಹದೇವಪ್ಪ ಕಬನೂರ ಅವರು ತಮ್ಮ ಹೊಲದಲ್ಲಿ ಹೊಂಡ ತೋಡಿಸಿ, ಟ್ಯಾಂಕರ್‌ ಮೂಲಕ ನೀರು ತುಂಬಿಸಿ, ಪಶು–ಪಕ್ಷಿಗಳ ಬಾಯಾರಿಕೆ ತಣಿಸುತ್ತಿದ್ದಾರೆ.

ಇವರ ಹೊಲದ ಪಕ್ಕದಲ್ಲಿರುವ ಹಿರೇಕೆರೆ ಮತ್ತು ಚನ್ನಗೇರಿ ಕೆರೆ ಸಂಪೂರ್ಣ ಬತ್ತಿ ಹೋಗಿವೆ. ಇದರಿಂದಾಗಿ ಪಶು–ಪಕ್ಷಿಗಳಿಗೆ  ಕುಡಿಯಲು ನೀರಿಲ್ಲದೆ ಕಂಗಾಲಾಗಿವೆ. ಇದನ್ನು ಅರಿತ ಅವರು ತಮ್ಮ ಹೊಲದಲ್ಲಿ ಸುಮಾರು ₹ 5 ಸಾವಿರ ಖರ್ಚು ಮಾಡಿ ಹೊಂಡ ತೆಗೆಯಿಸಿದ್ದಾರೆ.
ನೀರು ಇಂಗದಂತೆ ಅದರಲ್ಲಿ ತಾಡಪತ್ರಿ ಹಾಕಿಸಿದ್ದು, ಅದಕ್ಕೆ ಟ್ಯಾಂಕರ್‌ನಲ್ಲಿ ನೀರು ತರಿಸಿ ತುಂಬಿಸುತ್ತಾರೆ. ಈ ಮೂಲಕ ನೀರು ಅರಸಿ ಕಾಡಿನಿಂದ ನಾಡಿಗೆ ಬರುವ ಜಿಂಕೆ, ನರಿ, ವಿವಿಧ ಪಕ್ಷಿಗಳ ಬಾಯಾರಿಕೆ ನೀಗಿಸುತ್ತಿದ್ದಾರೆ. ಇದಲ್ಲದೇ, ಸುತ್ತಮುತ್ತಲಿನ ಪ್ರದೇಶದಲ್ಲಿ ಮೇಯಿಸುವ ಆಡು, ಕುರಿ, ದನಗಳಿಗೂ ಇಲ್ಲಿ ನೀರು ದೊರೆಯುತ್ತಿದೆ.

ADVERTISEMENT

‘ಮಕ್ಕಳ ಬದುಕಿಗೆ ಆಸರೆಯಾಗುವುದು, ಪಾಲನೆ–ಪೋಷಣೆ ಮಾಡುವುದು ಸಹಜ. ಅದರಂತೆ ಪ್ರಾಣಿ–ಪಕ್ಷಿಗಳ ಬದುಕಿಗೆ ಸ್ವಲ್ಪ ಆಸರೆಯಾದರೆ ಮನುಷ್ಯನ ಬದುಕು ಸಾರ್ಥಕವಾಗುತ್ತದೆ’ ಎಂದು ರೈತ ಅಶೋಕ ಕಬನೂರ ಹೇಳುತ್ತಾರೆ. ಇದಲ್ಲದೇ ಅವರು ಪಕ್ಷಿಗಳಿಗೆ ಆಹಾರದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಮಡಿಕೆ–ಪಾತ್ರೆಗಳಲ್ಲಿ ಜೋಳ, ರಾಗಿ, ಗೋಧಿ, ಗೋವಿನಜೋಳವನ್ನು ಈ ಹೊಂಡದ ಸುತ್ತಲು ಇಟ್ಟಿದ್ದಾರೆ. ಪಕ್ಷಿಗಳು ಬಂದು ಕಾಳು ತಿಂದು, ನೀರು ಕುಡಿದು ಹೋಗುತ್ತವೆ. ಅವರ ಮನೆಯ ಅಂಗಳದಲ್ಲಿ, ಹಿತ್ತಲಲ್ಲಿ, ಕಾಂಪೌಂಡ್‌ ಮೇಲೆ, ಮನೆ ಚಾವಣಿ ಮೇಲೆ ನೀರಿನ ಮತ್ತು ಆಹಾರ ಧಾನ್ಯಗಳ ಮಡಿಕೆ –ಪಾತ್ರೆಗಳನ್ನು ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.