ADVERTISEMENT

ಭಾನುವಾರ ಸಂತೆಗೆ ಹೊಸ ರೂಪ

ಬಸವೇಶ್ವರ ನಗರ: ಭರದಿಂದ ಸಾಗಿದೆ ಇಂಟರ್‌ಲಾಕ್ ಪೇವರ್ಸ್,ಸಿ.ಸಿ. ಸ್ಲ್ಯಾಬ್ ಅಳವಡಿಕೆ ಕಾರ್ಯ

ಹರ್ಷವರ್ಧನ ಪಿ.ಆರ್.
Published 9 ಜನವರಿ 2017, 8:55 IST
Last Updated 9 ಜನವರಿ 2017, 8:55 IST
ಹಾವೇರಿ: ನಗರದ ಪ್ರತಿಷ್ಠಿತ ಬಡಾವಣೆಯಾದ ಬಸವೇಶ್ವರ ನಗರದ ಭಾನುವಾರ ಸಂತೆ ಸ್ಥಳವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಒತ್ತುವರಿ ತೆರವು, ರಸ್ತೆಯ ಎರಡೂ ಬದಿಗೆ ಇಂಟರ್‌ಲಾಕ್ ಪೇವರ್ಸ್ ಹಾಗೂ ಚರಂಡಿಗೆ ಚಪ್ಪಡಿ (ಸಿ.ಸಿ. ಸ್ಲ್ಯಾಬ್) ಹಾಕುವ  ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. 
 
ಭಾನುವಾರ ಸಂತೆ:  ಪ್ರತಿ ನಗರ, ಪಟ್ಟಣ, ಗ್ರಾಮಗಳಲ್ಲಿ ವಾರಕ್ಕೊಂದು ದಿನ ಸಂತೆ ಹಾಗೂ ಸಂತೆಗೊಂದು ಸ್ಥಳ (ಸಂತೆ ಮೈದಾನ) ಇರುತ್ತದೆ. ಆದರೆ, ಕೃಷಿ ಪ್ರಧಾನ ಜಿಲ್ಲೆಯ ಕೇಂದ್ರವಾದ ಹಾವೇರಿಯಲ್ಲಿ ಮಾತ್ರ ಸಂತೆಯೇ ದಿನಕ್ಕೊಂದು ಬಡಾವಣೆಗೆ ಹೋಗುತ್ತದೆ. ಈ ಪೈಕಿ ಬಸವೇಶ್ವರ ನಗರದ ರೈತ ಸಂತೆ ಎಲ್ಲರಿಗೂ ಅಚ್ಚುಮೆಚ್ಚು.  
 
ನಾಗೇಂದ್ರನಮಟ್ಟಿ, ಅಶ್ವಿನಿನಗರ ಎಲ್.ಬಿ.ಎಸ್. ಮಾರುಕಟ್ಟೆ ಮತ್ತಿತರೆಡೆ ವಾರದ ಒಂದು ದಿನ ಸಂತೆ ನಡೆಯುತ್ತದೆ. ಬಸವೇಶ್ವರ ನಗರದಲ್ಲಿ ‘ಭಾನುವಾರ’ ಸಂತೆ ನಡೆಯುವ ಕಾರಣ ಜನಪ್ರಿಯಗೊಂಡಿದೆ. ಬಸವೇಶ್ವರ ನಗರ ಹಾಗೂ ಸುತ್ತಲ ಬಡಾವಣೆಗಳಲ್ಲಿ ಉದ್ಯೋಗಿಗಳು, ಉದ್ಯಮಿಗಳು, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಪ್ರಮುಖರೇ ಹೆಚ್ಚಿದ್ದಾರೆ. ಇವರಿಗೆ ಭಾನುವಾರ ರಜಾ ದಿನವಾದ ಕಾರಣ ಕುಟುಂಬ ಸಮೇತ ಸಂತೆ ಮಾಡುತ್ತಾರೆ. ನಗರದ ಬಹುತೇಕ ಜನತೆ ಭಾನುವಾರದ ಸ್ವಲ್ಪ ಸಮಯವನ್ನು ಸಂತೆಗೆಂದೇ ಮೀಸಲಿಟ್ಟಿದ್ದಾರೆ.  
 
ಈ ಹಿಂದೆ: ಇಲ್ಲಿನ ರಸ್ತೆ ಬದಿಯಲ್ಲೇ ರೈತರು ಬಂದು ತರಕಾರಿ, ದಿನಸಿ, ಹಣ್ಣ ಹಂಪಲು, ಸೊಪ್ಪು, ಪ್ಲಾಸ್ಟಿಕ್, ತಿನಿಸುಗಳು ಸೇರಿದಂತೆ ವೈವಿಧ್ಯಮಯ ವಸ್ತುಗಳ ವ್ಯಾಪಾರವನ್ನು ಮಾಡುತ್ತಿದ್ದರು. ಬೇಸಿಗೆಯಲ್ಲಿ ದೂಳು ಹೆಚ್ಚಾದರೆ, ಮಳೆಗಾಲದಲ್ಲಿ ಸಂತೆ ಅಸ್ತವ್ಯಸ್ತಗೊಳ್ಳುತ್ತಿತ್ತು. ಮಳೆ ಬಂದಾಗ ಗ್ರಾಹಕರಿಗಿಂತಲೂ ಹೆಚ್ಚಾಗಿ ಸೊಪ್ಪು–ತರಕಾರಿಯನ್ನು ಹಳ್ಳಿಯಿಂದ ತಂದ ರೈತರು ಪರದಾಡುತ್ತಿದ್ದರು. ಮಳೆಗಾಲದಲ್ಲಿ  ಈ ರಸ್ತೆ ಕೆಸರುಮಯಗೊಂಡು ಹಂದಿ, ಆಕಳು, ನಾಯಿಗಳ ವಿಹಾರ ತಾಣವಾಗುತ್ತಿತ್ತು. ಸದ್ಯ ಇಂಟರ್ ಲಾಕ್ ಪೇವರ್ಸ್‌ನಿಂದ ಸಮಸ್ಯೆಗೆ ಮುಕ್ತಿ ಸಿಗಲಿದೆ. 
 
‘ರಸ್ತೆಯ ಎರಡೂ ಬದಿಗಳಿಗೆ ಇಂಟರ್‌ಲಾಕ್ ಪೇವರ್ಸ್‌ ಹಾಕಿರುವುದು ಉತ್ತಮವಾಗಿದೆ. ಇಲ್ಲದಿದ್ದರೆ, ಸೊಪ್ಪು, ತರಕಾರಿಗೆ ದೂಳು ತಗಲುತ್ತಿತ್ತು. ಮಣ್ಣಿನಲ್ಲೇ ಕುಳಿತು ವ್ಯಾಪಾರ ಮಾಡಬೇಕಿತ್ತು. ಈಗ ಹಾಗಿಲ್ಲ, ಸ್ವಚ್ಛವಾಗಿರುತ್ತದೆ’ ಎಂದು ಸಂತೆ ವ್ಯಾಪಾರ ಮಾಡಲು ಬಂದ ರೈತ ಕದರಮಂಡಲಗಿಯ ಕಾಂತೇಶ ಪ್ರತಿಕ್ರಿಯಿಸಿದರು. 
 
‘ನಾವು ಸಂತೆಗಳಿಗೆ ಹೋಗಿ ವ್ಯಾಪಾರ ಮಾಡುತ್ತೇವೆ. ನಮ್ಮ ಬೆಳೆಗಳಿಗೆ ಮಳೆ ಬೇಕು. ಆದರೆ, ಮಳೆಗಾಲ ಬಂದರೆ ಸಂತೆ ವ್ಯಾಪಾರಕ್ಕೆ ಹೋಗಲು ಬೇಸರ ಉಂಟಾಗುತ್ತದೆ. ಎಲ್ಲೆಡೆ ರಾಡಿ ಎದ್ದಿರುತ್ತದೆ. ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಪೇವರ್ಸ್‌ ಹಾಕುವುದು ಅನುಕೂಲ ಆಗಲಿದೆ. ಇದೇ ರೀತಿಯಲ್ಲಿ ನಗರದ ಎಲ್ಲ ಸಂತೆ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಬೇಕು. ರಸ್ತೆಯ ಇಕ್ಕೆಲೆಗಳ ಒತ್ತುವರಿ ತೆರವುಗೊಳಿಸಿ, ಪೇವರ್ಸ್ ಹಾಕಬೇಕು’ ಎಂದು ಹಾವೇರಿಯ ವ್ಯಾಪಾರಿ ಪಿ.ಕೆ. ಗೌಳಿ ಒತ್ತಾಯಿಸುತ್ತಾರೆ. 
 
‘ಮುಖ್ಯಮಂತ್ರಿ ವಿಶೇಷ ಅನುದಾನದ ₹50 ಕೋಟಿಯಲ್ಲಿ ₹1.5 ಕೋಟಿಯನ್ನು ಬಸವೇಶ್ವರ ನಗರ ಮುಖ್ಯರಸ್ತೆ ಅಭಿವೃದ್ಧಿ ಮೀಸಲಿಟ್ಟಿದ್ದೇವೆ. ಕೆಲವೆಡೆ ಒತ್ತುವರಿ ತೆರವುಗೊಳಿಸಬೇಕಾಗಿದೆ. ಹೀಗಾಗಿ ಕೆಲಸ ಸ್ವಲ್ಪ ವಿಳಂಬವಾಗಿದೆ. ಆದರೆ, ಒತ್ತುವರಿ ತೆರವುಗೊಳಿಸಿ, ಮಾದರಿ ರಸ್ತೆಯಾಗಿ ಮಾಡುತ್ತೇವೆ’ ಎನ್ನುತ್ತಾರೆ ಈ ವಾರ್ಡ್‌ ಸದಸ್ಯ ಹಾಗೂ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವ ಕುಮಾರ್ ನೀರಲಗಿ.     
 
‘ಮಾದರಿಯಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಂಡಿದ್ದೇವೆ’ ಎನ್ನುತ್ತಾರೆ ನಗರಸಭೆ ಅಧ್ಯಕ್ಷೆ ಪಾರ್ವತೆವ್ವ ಹಲಗಣ್ಣನವರ. ‘ಡಾಲರ್ಸ್‌ ಕಾಲೋನಿ’ ಮಾದರಿಯಲ್ಲಿ ಪ್ರಮುಖರೇ ಇರುವ ಒಂದು ಬಡಾವಣೆ ಅಭಿವೃದ್ಧಿ ಪಡಿಸಿದರೆ ಸಾಲದು. ಅತಿ ಹಿಂದುಳಿದ ಹೊಸ ಬಡಾವಣೆಗಳನ್ನು ಅಭಿವೃದ್ಧಿ ಪಡಿಸುವ ಸಮಗ್ರ ಹಾವೇರಿ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು’ ಎಂದು ನಗರಸಭೆ ಸದಸ್ಯ ಶಿವಬಸವ ವನ್ನಳ್ಳಿ ಮತ್ತಿತರ ಸದಸ್ಯರು ಒತ್ತಾಯಿಸುತ್ತಾರೆ.
 
***
ಕೆಲವೆಡೆ ರಸ್ತೆ ಒತ್ತುವರಿಯಾಗಿದೆ. ಅದನ್ನು ತೆರವು ಮಾಡಿಸುಮಾರು ₹1.5 ಕೋಟಿ ವೆಚ್ಚದಲ್ಲಿ ಮಾದರಿ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುವುದು
-ಸಂಜೀವಕುಮಾರ್ ನೀರಲಗಿ,
ಅಧ್ಯಕ್ಷ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.