ADVERTISEMENT

ಮುಂಗಾರು ಬಿತ್ತನಗೆ ಅಣಿಯಾದ ರೈತ

ಅನ್ನದಾತನ ಮೊಗದಲ್ಲಿ ಮಂದಹಾಸ ತಂದ ಮಳೆ; ಬಿತ್ತನೆ ಬೀಜ ವಿತರಣೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 22 ಮೇ 2018, 11:39 IST
Last Updated 22 ಮೇ 2018, 11:39 IST
ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿ ಮುಂಗಾರು ಬಿತ್ತನೆಗೆ ಹೊಲಗದ್ದೆಗಳನ್ನು ಹದಗೊಳಿಸುವಲ್ಲಿ ರೈತರು ನಿರತರಾಗಿದ್ದರು
ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿ ಮುಂಗಾರು ಬಿತ್ತನೆಗೆ ಹೊಲಗದ್ದೆಗಳನ್ನು ಹದಗೊಳಿಸುವಲ್ಲಿ ರೈತರು ನಿರತರಾಗಿದ್ದರು   

ಶಿಗ್ಗಾವಿ: ಮೂರ್ನಾಲ್ಕು ವರ್ಷದಿಂದ ಮಳೆ ಕೊರತೆಯಿಂದ ಕಂಗಾಲಾಗಿದ್ದ ರೈತರಿಗೆ, ಇತ್ತೀಚೆಗೆ ಸುರಿದ ಮುಂಗಾರು ಪೂರ್ವ ಮಳೆ ಖುಷಿ ತಂದಿದೆ.

ಇದರ ಬೆನ್ನಲ್ಲೇ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಯಾವ ಹೊಲಗಳಿಗೆ ಯಾವ ಬೀಜ ಬಿತ್ತನೆ ಮಾಡಬೇಕು. ಎಷ್ಟು ಬೀಜ ಮತ್ತು ಗೊಬ್ಬರ ಖರೀದಿಸಬೇಕು. ಪ್ರಸಕ್ತ ವರ್ಷ ಎಷ್ಟು ಬೆಳೆ ತೆಗೆಯಬಹುದು. ಎಷ್ಟು ಮಳೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ರೈತರು ಮುಳುಗಿದ್ದಾರೆ.

ಮಳೆಯಿಂದ ಭೂಮಿ ಹದಗೊಳ್ಳುತ್ತಲೇ ರೈತರು ಹೊಲ ಗದ್ದೆಗಳಲ್ಲಿ ಕಸ, ಕಡ್ಡಿಯನ್ನು ತೆಗೆದು, ಗಳೆ ಮತ್ತು ಗುಂಟೆ ಹೊಡೆದು ಇಡೀ ಭೂಮಿಯನ್ನು ಬಿತ್ತನೆಗೆ ಸಜ್ಜುಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 37,870 ಹೆಕ್ಟೇರ್ ಕೃಷಿ ಭೂಮಿ ಇದೆ. ಅದರಲ್ಲಿ 2,500 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಿದೆ. ಉಳಿದ 35,015 ಹೆಕ್ಟೇರ್ ಪ್ರದೇಶ ಒಣ ಬೇಸಾಯಿ (ಮಳೆಯಾಶ್ರಿತ) ಭೂಮಿಯಾಗಿದೆ. ಹೀಗಾಗಿ, ಮಳೆ ನಂಬಿ ಬಿತ್ತನೆ ಮಾಡುವ ರೈತರ ಸಂಖ್ಯೆ ಹೆಚ್ಚಾಗಿದೆ.

ಮುಂಗಾರು ಪ್ರಮುಖ ಬೆಳೆಗಳಾದ ಸೋಯಾಬಿನ್‌ ಸುಮಾರು 3,750 ಹೆಕ್ಟೇರ್‌, ಶೇಂಗಾ 5,575 ಹೆಕ್ಟೇರ್‌, ಭತ್ತದ ಬೆಳೆ 8,300 ಹೆಕ್ಟೇರ್‌, ಗೋವಿನ ಜೋಳದ ಬೆಳೆ ಸುಮಾರು 10,700 ಹೆಕ್ಷೇರ್‌, ಹತ್ತಿ ಬೆಳೆ 8,790 ಹೆಕ್ಟೇರ್‌, ಜೋಳದ ಬೆಳೆ 733 ಹೆಕ್ಟೇರ್‌ ಹಾಗೂ ಮೆಣಸಿನಕಾಯಿ ಬೆಳೆ ಸುಮಾರು 500 ಹೆಕ್ಟೇರ್‌ ಪ್ರದೇಶ ಸೇರಿದಂತೆ, ಉಳಿದ ಸುಮಾರು 4,146 ಹೆಕ್ಟೇರ್ ಭೂಮಿಯಲ್ಲಿ ತೊಗರಿ, ಸೂರ್ಯಕಾಂತಿ, ಹತ್ತಿ ಸೇರಿದಂತೆ, ಇತರೆ ಬೆಳೆಗಳನ್ನು ಬೆಳೆಯುವ ನಿರೀಕ್ಷೆ ಇದೆ.

ಬಿತ್ತನೆ ಬೀಜ ವಿತರಣೆಗಾಗಿ ಶಿಗ್ಗಾವಿ, ಹುಲಗೂರ, ಬಂಕಾಪುರ, ದುಂಡಸಿ, ತಡಸ ಹಾಗೂ ಚಂದಾಪುರದಲ್ಲಿ ಕೇಂದ್ರಗಳನ್ನು ಸದ್ಯದಲ್ಲೇ ತೆರೆಯಲಾಗುವುದು. ಪ್ರಸಕ್ತ ವರ್ಷದಲ್ಲಿ ಭತ್ತ, ಗೋವಿನಜೋಳ, ಸೋಯಾಬೀನ್‌ ಮತ್ತು ಶೇಂಗಾ ಬೀಜ ಹಾಗೂ ಗೊಬ್ಬರದ ಪೈಕಿ ಯೂರಿಯಾ, ಡಿಎಪಿ, ಎಂಓಪಿ ಹಾಗೂ ಕಾಂ‍ಪ್ಲೆಕ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ವಿಜಯಕುಮಾರ ಕುಂಕೂರ ‘ಪ್ರಜಾವಾಣಿ’ಗೆ ತಿಳಿಸಿದರು.

**
ಮೂರ್ನಾಲ್ಕು ವರ್ಷಗಳಿಂದ ಮಳೆಬೆಳೆ ಸಂಪೂರ್ಣ ಕೈಕೊಟ್ಟಿದ್ದು, ಈ ಬಾರಿ ಮುಂಗಾರಿ ಮಳೆ ಹೆಚ್ಚಿನ ನಿರೀಕ್ಷೆಯಲ್ಲಿ ಹೊಲಗದ್ದೆಗಳನ್ನು ಹದಗೊಳಿಸುತ್ತಿದ್ದೇವೆ
ಸಿದ್ದನಗೌಡ ಪಾಟೀಲ, ರೈತ, ಶಿಗ್ಗಾವಿ 

ಎಂ.ವಿ. ಗಾಡದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.