ADVERTISEMENT

ಮೆಕ್ಕೆಜೋಳ: ಇಳುವರಿ ಕುಸಿತ, ಬೆಲೆಯೂ ಇಳಿಕೆ

ಮುಕ್ತೇಶ ಕೂರಗುಂದಮಠ
Published 17 ನವೆಂಬರ್ 2017, 10:21 IST
Last Updated 17 ನವೆಂಬರ್ 2017, 10:21 IST
ರಾಣೆಬೆನ್ನೂರು ನಗರದ ಕೃಷಿ ಉತ್ಪನ ಮಾರುಕಟ್ಟೆಯಲ್ಲಿ ರೈತ ಗೋವಿನ ಜೋಳ ಒಣಗಿಸುತ್ತಿರುವುದು
ರಾಣೆಬೆನ್ನೂರು ನಗರದ ಕೃಷಿ ಉತ್ಪನ ಮಾರುಕಟ್ಟೆಯಲ್ಲಿ ರೈತ ಗೋವಿನ ಜೋಳ ಒಣಗಿಸುತ್ತಿರುವುದು   

ರಾಣೆಬೆನ್ನೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ ವರ್ಷ ಗೋವಿನಜೋಳದ ಕಣಜವೇ ಇತ್ತು. ನಗರದ ಸರ್ವಿಸ್‌ ರಸ್ತೆ, ಬೈಪಾಸ್‌ ರಸ್ತೆಗಳು ಮೆಕ್ಕೆಜೋಳ ಕಣಗಳಾಗಿ ಬದಲಾಗಿದ್ದವು. ಆದರೆ, ಈಬಾರಿ ಅವೆಲ್ಲ ಬಿಕೋ ಎನ್ನುತ್ತಿವೆ.ತಾಲ್ಲೂಕಿನಾದ್ಯಂತ ಸೈನಿಕ ಹುಳು ಬಾಧೆ ಹಾಗೂ ಅತಿವೃಷ್ಟಿ ಅದಕ್ಕೆ ಕಾರಣ.

‘ಸತತ ಮೂರು ವರ್ಷ ಬರಗಾಲದಿಂದ ಬೆಳೆ ಕೈಸೇರಿರಲಿಲ್ಲ. ಈ ಬಾರಿ ಸೈನಿಕ ಹುಳು ಬಾಧೆ ಮತ್ತು ಅನಾವೃಷ್ಟಿಯಿಂದ ಗೋವಿನ ಜೋಳದ ಇಳುವರಿ ಕಡಿಮೆಯಾಗಿದೆ. ಈ ಸಲ 2 ಎಕರೆ 15 ಗಂಟೆ ಜಮೀನಿನಲ್ಲಿ ಬರೀ 8 ಕ್ವಿಂಟಲ್‌ ಇಳುವರಿ ಬಂದಿದೆ. ಕಡಿಮೆ ಎಂದರೂ 15 ರಿಂದ 20 ಕ್ವಿಂಟಲ್‌ ಇಳುವರಿ ಬರಬೇಕಾಗಿತ್ತು’ ಎಂದು ತಾಲ್ಲೂಕಿನ ಕುದರಿಹಾಳ ಗ್ರಾಮದ ರೈತ ಶಾಂತಪ್ಪ ಕುದ್ರಿಹಾಳ ಹೇಳಿದರು.

‘ಮಳೆ ಹೆಚ್ಚಾಗಿದ್ದರಿಂದ ಹೊಲಗಳಲ್ಲಿ ಇನ್ನೂ ತೇವಾಂಶ ಇದೆ. ಮಳೆಗೆ ಸಿಲುಕಿದ ಪರಿಣಾಮ ಗೋವಿನಜೋಳದ ಗುಣಮಟ್ಟ ಕಡಿಮೆಯಾಗಿತ್ತು. ಅದರಿಂದ ಉತ್ತಮ ದರವೂ ಸಿಗಲಿಲ್ಲ. ಒಟ್ಟಾರೇ, ಬೀಜ ಗೊಬ್ಬರದ ಖರ್ಚೂ ಈಸಲ ಕೈಸೇರಿಲ್ಲ’ಎಂದು ಅವರು ಅಳಲು ತೋಡಿಕೊಂಡರು.

ADVERTISEMENT

ತಗ್ಗಿದ ಆವಕ: ‘ಕಳೆದ ಬಾರಿ ಒಟ್ಟು 20 ಲಕ್ಷ ಕ್ವಿಂಟಲ್‌ ಗೋವಿನಜೋಳ ಆವಕವಾಗಿತ್ತು. ದರ ಕೂಡ ಹೆಚ್ಚಿತ್ತು. ನವೆಂಬರ್‌ ಮೊದಲವಾರ ಸೇರಿದಂತೆ ಈ ಸಲ ಒಟ್ಟು 1.60 ಲಕ್ಷ ಕ್ವಿಂಟಲ್‌ ಗೋವಿನಜೋಳ ಮಾತ್ರವೇ ಮಾರುಕಟ್ಟೆಗೆ ಬಂದಿದೆ. 2018ರ ಮಾರ್ಚ್‌ ಅಂತ್ಯದ ತನಕ 8ರಿಂದ 10 ಲಕ್ಷ ಕ್ವಿಂಟಲ್‌ ಗೋವಿನಜೋಳ ಮಾರುಕಟ್ಟೆಗೆ ಬರುವ ನಿರೀಕ್ಷೆಗಳಿವೆ’ ಎನ್ನುತ್ತಾರೆ ಎಪಿಎಂಸಿ ಅಧಿಕಾರಿ ಪರಮೇಶ್ವರ ನಾಯಕ.

ದರ ಇಳಿಕೆ, ಖರೀದಿಯೂ ಮಂದ: ‘ಕಳೆದ ವರ್ಷ ನಗರದ ವ್ಯಾಪಾರಸ್ಥರು ಖರೀದಿಸಿದ ಲಕ್ಷಾಂತರ ಕ್ವಿಂಟಲ್‌ ಗೋವಿನಜೋಳ ಗೋದಾಮುಗಳಲ್ಲಿ ಇನ್ನು ಸಂಗ್ರಹವಿದೆ. ಆದ್ದರಿಂದ, ಈ ಬಾರಿ ಗೋವಿನಜೋಳ ಖರೀದಿಗೆ ಅವರು ಮುಂದೆ ಬರುತ್ತಿಲ್ಲ. ಈ ಬಾರಿ ಇಳುವರಿಯೂ ಕೂಡಾ ಕಡಿಮೆಯೇ ಇದೆ ಎನ್ನುತ್ತಾರೆ ವರ್ತಕರ ಸಂಘದ ಅಧ್ಯಕ್ಷ ವೀರೇಶ ಮೋಟಗಿ.

‘ಪ್ರಸ್ತುತ ಉತ್ತಮ ಗುಣಮಟ್ಟದ ಒಂದು ಕ್ವಿಂಟಲ್‌ ಗೋವಿನಜೋಳಕ್ಕೆ ₹ 1,240, ಹಸಿ ಗೋವಿನಜೋಳಕ್ಕೆ ₹ 1,100 ಇದೆ. ಪ್ರತಿ ವರ್ಷ ಗೋವಿನಜೋಳ ಕೊಯ್ಲು ಸಂದರ್ಭದಲ್ಲಿ ಸೋಮವಾರ ಮತ್ತು ಗುರುವಾರ ಹೆಚ್ಚು ಆವಕ ಆಗುತ್ತಿತ್ತು. ಆದರೆ, ಈ ಬಾರಿ ಆವಕ ಕಡಿಮೆಯಾಗಿದೆ’ ಎಂದು ಅವರು ಹೇಳಿದರು.

‘ಕಳೆದ ವರ್ಷ ಗುಣಮಟ್ಟದ ಗೋವಿನಜೋಳಕ್ಕೆ ₹1,400 ರಿಂದ ₹1,800 ವರೆಗೆ ದರ ಇತ್ತು. ಆದರೆ, ಈ ಬಾರಿ ಬೆಲೆ ತುಂಬ ಕಡಿಮೆಯಾಗಿದೆ. ನಗರದ ಮಾರುಕಟ್ಟೆಗೆ ಶಿಕಾರಿಪುರ, ಹಡಗಲಿ, ಹಾವೇರಿ, ಬ್ಯಾಡಗಿ, ಹಿರೇಕೆರೂರ, ಹರಿಹರ, ಹರಪನಹಳ್ಳಿ ತಾಲ್ಲೂಕುಗಳಿಂದ ರೈತರು ಗೋವಿನ ಜೋಳವನ್ನು ತರುತ್ತಿದ್ದರು.ಈ ಬಾರಿ ಆವಕವೇ ಇಲ್ಲವಾಗಿದೆ’ ಎಂದೂ ಅವರು ವಿವರಿಸಿದರು.

ವರದಿ ಸಿಕ್ಕಿಲ್ಲ...
ಕಳೆದ ಸಾಲಿನಲ್ಲಿ ತಾಲ್ಲೂಕಿನಾದ್ಯಂತ 33,663 ಹೆಕ್ಟೇರ್‌ ಗೋವಿನಜೋಳ ಬಿತ್ತನೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ 24,433 ಹೆಕ್ಟೇರ್‌ ಗೋವಿನ ಜೋಳ ಬಿತ್ತನೆಯಾಗಿದೆ. ಕೆಲ ಕಡೆ ಕಾಳುಕಟ್ಟುವ ಹಂತದಲ್ಲಿ ಲದ್ದಿ ಹುಳುಗಳ ಕಾಟ ಮತ್ತು ಬಾರಿ ಮಳೆಯಿಂದ ತೇವಾಂಶ ಹೆಚ್ಚಾಗಿತ್ತು. ಕಂದಾಯ, ಕೃಷಿ ಇಲಾಖೆ ಜಂಟಿಯಾಗಿ ಮುಂಗಾರು ಹಂಗಾಮಿನ ಎಲ್ಲ ಬೆಳೆಗಳ ಹಾನಿ ಸಮೀಕ್ಷೆ ಕಾರ್ಯಾಚರಣೆ ನಡೆದಿದೆ. ಇಳುವರಿ ಕಡಿಮೆಯಾದ ಬಗ್ಗೆ ಇನ್ನು ವರದಿಯಾಗಿಲ್ಲ’ ಎಂದು ರಾಣೆಬೆನ್ನೂರು ಕೃಷಿ ಉಪ ನಿರ್ದೇಶಕ ಮಂಜುನಾಥ ಅಂತರವಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.