ADVERTISEMENT

ಮೊಲ ಮಹಾರಾಷ್ಟ್ರಕ್ಕೆ, ಇಲಿ ಚೆನ್ನೈಗೆ...

ಮಾರುತಿ ಪೇಟಕರ
Published 30 ಆಗಸ್ಟ್ 2017, 6:09 IST
Last Updated 30 ಆಗಸ್ಟ್ 2017, 6:09 IST
ಹಾನಗಲ್‌ ತಾಲ್ಲೂಕಿನ ಬೈಚವಳ್ಳಿ ಗ್ರಾಮದ ರೈತ ರಾಜೀವ ದಾನಪ್ಪನವರ ಅವರ ಫಾರ್ಮ್‌ನ ನೋಟ
ಹಾನಗಲ್‌ ತಾಲ್ಲೂಕಿನ ಬೈಚವಳ್ಳಿ ಗ್ರಾಮದ ರೈತ ರಾಜೀವ ದಾನಪ್ಪನವರ ಅವರ ಫಾರ್ಮ್‌ನ ನೋಟ   

ಹಾನಗಲ್: ಬರ ಸಾಮಾನ್ಯ ಎನಿಸುತ್ತಿರುವ ಈ ದಿನಗಳಲ್ಲಿ ಕೃಷಿಯಲ್ಲಿ ಉಪ ಕಸುಬುಗಳೇ ಆರ್ಥಿಕ ಸದೃಢ ಕಾಯ್ದುಕೊಳ್ಳಲು ಅತ್ಯುತ್ತಮ ದಾರಿ. ತಾಲ್ಲೂಕಿನ ಬೈಚವಳ್ಳಿ ಗ್ರಾಮದ ಕೃಷಿಕ ರಾಜೀವ ದಾನಪ್ಪನವರ ಅದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ.

ಡಿಪ್ಲೊಮಾ ಮೆಕ್ಯಾನಿಕ್‌ ಓದಿ ನೌಕರಿ ಹಂಗು ರಾಜೀವ ಅವರು ಕೃಷಿ ಅಪ್ಪಿಕೊಂಡು ಒಂದೂವರೆ ದಶಕವಾಯಿತು. ತಮ್ಮ 8 ಎಕರೆ ಜಮೀನಿನಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಸ್ಥಿರ ಆದಾಯ ಬರುವಂತೆ ಅವರು ಬೆವರು ಹರಿಸುತ್ತಿದ್ದಾರೆ.

ಸಮಗ್ರ ಕೃಷಿ ಪದ್ಧತಿ ಅಳವಡಿಕೊಂಡು ಒಂದು ಎಕರೆಯಲ್ಲಿ ತೊಗರಿ, ಅಲಸಂದಿ, ಸಾವೆ, ನವಣೆ ಬೆಳೆಯುತ್ತಿದ್ದಾರೆ. ಎರೆಹುಳು ಘಟಕವನ್ನೂ ಮಾಡಿಕೊಂಡಿದ್ದಾರೆ.
3 ಎಕರೆ ಭೂಮಿಯಲ್ಲಿನ ಮಾವಿನ ತೋಟವಿದೆ. ಅದರಲ್ಲಿಯೇ ಒಂದಿಷ್ಟು ಜಾಗದಲ್ಲಿ ‘ಕೃಷಿ ಲಕ್ಷ್ಮಿ ಫಾರ್ಮ್‌’ ನಿರ್ಮಿಸಿಕೊಂಡಿದ್ದಾರೆ. 32 ಅಡಿ ಅಗಲ, 43 ಅಡಿ ಉದ್ದದ ಈ ಫಾರ್ಮ್‌, ನೆಲದಿಂದ 4 ಅಡಿಗಳಷ್ಟು ಎತ್ತರ ಸ್ಥಾಪಿಸಲಾಗಿದೆ. ಅದರಲ್ಲಿ ಮೊಲ, ಕುರಿ, ಇಲಿ ಸಾಕಣೆ ಮಾಡುತ್ತಿದ್ದಾರೆ.

ADVERTISEMENT

‘ಈ ಫಾರ್ಮ್‌ನಲ್ಲಿ 50 ಮೊಲಗಳಿವೆ. ವಿದೇಶಿ ತಳಿಯ 10 ಇಲಿಗಳಿವೆ. ಇದರೊಂದಿಗೆ 65 ಕುರಿಗಳನ್ನೂ ಸಾಕಲಾಗಿದೆ’ ಎನ್ನುತ್ತಾರೆ ರಾಜೀವ್. ‘ಕುರಿಗಳನ್ನು ಹುಬ್ಬಳ್ಳಿಯ ಮಾಂಸ ಉದ್ಯಮಕ್ಕೆ ಮಾರಾಟ ಮಾಡುತ್ತೇನೆ. ಮೊಲಗಳನ್ನು ಮಹಾರಾಷ್ಟ್ರದ ಪುಣೆಯ ಪ್ರಯೋಗಾಲಯದವರು ಕೊಳ್ಳುತ್ತಾರೆ. ವಿದೇಶಿ ಇಲಿ(ಗಿನಿಯಾ ಪಿಗ್) ಚೆನ್ನೈನ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಒಪ್ಪಂದ ಪ್ರಕಾರ ರವಾನೆ ಮಾಡಲಾಗುತ್ತದೆ’ ಎಂದು ಅವರು ವಿವರಿಸಿದರು.

ಸುತ್ತಲಿನ ರೈತರು ಭೇಟಿ ರಾಜೀವ್ ಅವರ ಉಪಕಸುಬು ವ್ಯವಸ್ಥೆಯನ್ನು ನೋಡಿ, ಅಗತ್ಯದ ಮಾಹಿತಿಯನ್ನೂ ಪಡೆದು  ಹೋಗುತ್ತಾರೆ. ‘ಹೈನುಗಾರಿಕೆಯತ್ತ ಆಸಕ್ತಿ ವಹಿಸಿದ್ದ ನನಗೆ ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನೀಡಿದ ಉಪಯುಕ್ತ ಮಾಹಿತಿ ಕುರಿ, ಮೊಲ, ಇಲಿ ಸಾಕಾಣಿಕೆಗೆ ಉತ್ತೇಜನ ನೀಡಿತು. ಉಪ ಕುಸುಬು ಕೃಷಿಗೆ ಆಧಾರ ಎಂಬ ನಂಬಿಕೆ ನನ್ನ ಜೀವನದಲ್ಲಿ ನಿಜವಾಗಿದೆ’ ಎಂದು ರಾಜೀವ್‌ ಹೇಳುತ್ತಾರೆ.

ಮೊಲ ಸಾಕಣೆ...: ‘ಮೊಲ ಸಾಕಣೆ ತುಂಬಾ ಲಾಭದಾಯಕ. ಎರಡು ಮೂರು ಬಗೆಯ ಮೊಲಗಳಿವೆ. ನನ್ನ ಬಳಿಗೆ ನ್ಯೂಜಿಲೆಂಡ್ ವೈಟ್, ಸೋಯಿಟ್‌, ಜಿಂಜಿಲಾ ವಿದೇಶಿ ತಳಿಗಳಿವೆ. ಮೊಲ ವರ್ಷದಲ್ಲಿ 6 ಬಾರಿ ಗರ್ಭ ಧರಿಸಿ, ಮರಿ ಹಾಕುತ್ತದೆ.  ಒಂದು ಬಾರಿ 6 ರಿಂದ 10 ಮರಿಗಳಿಗೆ ಜನ್ಮ ನೀಡುತ್ತದೆ. 3 ತಿಂಗಳ ನಂತರ ಮೊಲ ಮಾರಾಟಕ್ಕೆ ಸಜ್ಜಾಗುತ್ತದೆ.  ಈ ಅವಧಿಯಲ್ಲಿ ಒಂದೊಂದು ಮೊಲವು ಒಂದೂವರೆಯಿಂದ ಎರಡು ಕೆ.ಜಿ. ತೂಗುತ್ತವೆ. ಪ್ರತಿ ಕೆ.ಜಿಗೆ ₹250ನಂತೆ ಮಾರುತ್ತೇನೆ’ ಎಂದು ರಾಜೀವ್ ಹೇಳಿದರು.

‘ನಾನು ಮೊಲಗಳನ್ನು ಪುಣೆಗೆ ಮಾರಾಟ ಮಾಡುತ್ತೇನೆ. ಅವರು ಮಾಂಸ ಹಾಗೂ ತಳಿ ಅಭಿವೃದ್ಧಿ ಉದ್ದೇಶಗಳಿಗೆ ಬಳಸುತ್ತಾರೆ’ ಎಂದರು. ‘ಇನ್ನು ಗಿನಿಯಾ ಪಿಗ್‌ ಇಲಿಗಳನ್ನು ಕೋಲ್ಕತ್ತದಿಂದ ತರಿಸಲಾಗಿದೆ. 10 ಇಲಿಗಳ ಒಂದು ಯೂನಿಟ್‌ಗೆ ₹18 ಸಾವಿರ ವೆಚ್ಚವಾಗಿತ್ತು. ಇಲಿಗಳು ವರ್ಷದಲ್ಲಿ ನಾಲ್ಕು ಸಲ ಮರಿ ಹಾಕುತ್ತವೆ. ಪ್ರತಿ ಸಲ ಒಂದು ಜೋಡಿಯಿಂದ ಸರಾಸರಿ ನಾಲ್ಕು ಮರಿಗಳು ಸಿಗುತ್ತವೆ. ಇವನ್ನೂ 3 ತಿಂಗಳ ಬಳಿಕ ಮಾರುತ್ತೇನೆ’ ಎಂದು ಎನ್ನುತ್ತಾರೆ ಅವರು.

‘ಇಲಿಗಳನ್ನು ಚೆನ್ನೈ ಹಾಗೂ ಕೋಲ್ಕತ್ತದವರು ಒಯ್ಯುತ್ತಾರೆ.ಅವರು ಒಂದು ಇಲಿಗೆ ₹300 ಕೊಡುತ್ತಾರೆ. ನಾವು ಒಂದಿಷ್ಟು ರೈತರು ಅವರನ್ನು ಸಂಪರ್ಕಿಸಿದರೆ, ಅವರೇ ಬಂದು ಒಯ್ಯುತ್ತಾರೆ. ಇನ್ನುಳಿದಂತೆ ಹಕ್ಕಿ–ಪಿಕ್ಕಿಗಳನ್ನು ಸಾಕುವವರೂ ಇವುಗಳನ್ನು ಮನೆಯಲ್ಲಿ ಸಾಕುತ್ತಾರೆ. ಅವರಿಗೆ ನಾವು ಒಂದು ಜೋಡಿಗೆ ₹1000ದಂತೆ ಮಾರಾಟ ಮಾಡುತ್ತೇನೆ’ ಎಂದು ಅವರು ವಿವರಿಸಿದರು.

‘ಮೊಲಗಳಿಗೆ ನಿತ್ಯ ಬೆಳಿಗ್ಗೆ ರೆಡಿಮೆಡ್‌ ಫುಡ್‌, ಮಧ್ಯಾಹ್ನ ಹಾಗೂ ಸಂಜೆ ಹುಲ್ಲು ಕೊಡುತ್ತೇವೆ. ಆದರೆ, ಇಲಿಗಳದ್ದು ಶ್ಯೂನ ನಿರ್ವಹಣೆ. ದಿನಕ್ಕೆರಡು ಬಾರಿ ಹುಲ್ಲು ಕೊಟ್ಟರೂ ಸಾಕು’ ಎನ್ನುತ್ತಾರೆ ರಾಜೀವ್.

ಬೇಕಿದೆ ಮಾರ್ಗದರ್ಶನ...: ‘ಅತೀವೃಷ್ಟಿ, ಅನಾವೃಷ್ಟಿ ನಡುವೆ ನಲುಗಿರುವ ಕೃಷಿಗೆ ಉಪ ಕಸುಬುಗಳೇ ಆಧಾರ. ಇಂತಹ ಪ್ರಯತ್ನಗಳು ಪ್ರತಿ ಗ್ರಾಮಗಳಲ್ಲೂ ನಡೆಯಬೇಕು. ಆದರೆ ಮಾರ್ಗದರ್ಶನ ನೀಡಬೇಕಾದ ಪಶು ಸಂಗೋಪನಾ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಇದೆ’ ಎನ್ನುತ್ತಾರೆ ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ.

₹2 ಲಕ್ಷ ಆದಾಯ
‘ಮೊಲ, ಇಲಿ, ಕುರಿ ಸಾಕಣೆ ನನಗೆ ಸುಲಭ ಎನಿಸಿದೆ. ಹೆಚ್ಚಿನ ಶ್ರಮವಿಲ್ಲದೇ ಕೃಷಿಯ ಕೆಲಸಗಳ ನಡುವೆ ಸಲಿಸಾಗಿ ನಡೆಯುವ ಈ ಉಪ ಕಸುಬು ಮಾಡಬಹುದು. ಇವುಗಳಿಂದ ವರ್ಷಕ್ಕೆ ₹2 ಲಕ್ಷ ನಿಶ್ಚಿತ ಆದಾಯ ಪಡೆಯಬಹುದು’ ಎನ್ನುತ್ತಾರೆ ರಾಜೀವ್(98444 34184) .

* * 

ಸದ್ಯದ ಪರಿಸ್ಥಿತಿಯಲ್ಲಿ ಕೃಷಿಗೆ ಉಪ ಕುಸುಬು ಅತ್ಯವಶ್ಯ. ಕೃಷಿಯೊಂದಿಗೆ ಲಾಭದಾಯಕ ಕಸುಬುಗಳನ್ನು ಅಳವಡಿಸಿಕೊಳ್ಳುವ ಮನಸ್ಥಿತಿ ರೈತರಲ್ಲಿ ಬೆಳೆಯಬೇಕಿದೆ
ರಾಜೀವ ದಾನಪ್ಪನವರ
ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.