ADVERTISEMENT

ರೈತರ ರಕ್ಷಣೆಗೆ ನೀತಿಯೇ ಇಲ್ಲ: ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 9:05 IST
Last Updated 4 ಡಿಸೆಂಬರ್ 2017, 9:05 IST

ಹಾವೇರಿ: ಅಧಿಕಾರಿಗಳ ವೇತನಕ್ಕೆ ಆಯೋಗ ಇದೆ. ಶಾಸಕರು, ಐಎಎಸ್ ಅಧಿಕಾರಿಗಳು ನಿವೃತ್ತರಾದರೆ ತಿಂಗಳಿಗೆ ₹40ರಿಂದ ₹90 ಸಾವಿರ ಪಿಂಚಣಿ ಇದೆ. ಆದರೆ, ಈ ದೇಶದಲ್ಲಿ ರೈತರ ರಕ್ಷಣೆಗೆ ಇನ್ನೂ ಒಂದು ನೀತಿ ಇಲ್ಲ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು. ನಗರದ ಹೊಸಮಠದಲ್ಲಿ ಭಾನುವಾರ ‘ಶರಣ ಸಂಸ್ಕೃತಿ ಉತ್ಸವ’ದಲ್ಲಿ ಡಾ.ಶಿಮುಶ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಉದ್ಯಮಿ ಅಥವಾ ರಾಜಕಾರಣಿಯ ₹100 ಕೋಟಿಯ ಆದಾಯವನ್ನು ಹೆಂಡತಿ ಮಕ್ಕಳು ತಿನ್ನುತ್ತಾರೆ. ಆದರೆ, ರೈತ ಬೆಳೆದರೆ ಸಾವಿರಾರು ಜನ ತಿನ್ನುತ್ತಾರೆ. ಅಂತಹ ರೈತನಿಗೇ ರಕ್ಷಣೆ ಇಲ್ಲ. ರೈತರ ಸಾವಿನ ಬಗ್ಗೆಯೂ ಯಾರೂ ಮಾತನಾಡುತ್ತಿಲ್ಲ ಎಂದರು.

ಪ್ರತಿ ವ್ಯಕ್ತಿಯು ಸಮಾಜಕ್ಕೆ ನಾನೇನು ಮಾಡಿದ್ದೇನೆ ಎಂದು ಚಿಂತನೆ ಮಾಡಬೇಕು. 20 ಸಾವಿರ ಹೂಗಳನ್ನು ಸ್ಪರ್ಶಿಸಿ ಜೇನು ತಯಾರು ಮಾಡವು ಜೇನಿಗೆ ಬೆಂಕಿ ಇಡುತ್ತಾರೆ. ರೈತರ ಬದುಕೂ ಹಾಗೆಯೇ ಆಗಿದೆ ಎಂದರು.

ADVERTISEMENT

30 ನಿಮಿಷಕ್ಕೊಬ್ಬ ರೈತ ಸಾಯುತ್ತಿದ್ದಾನೆ. ತಮಿಳುನಾಡಿನಲ್ಲಿ 12 ಜನ ರೈತರು, ಒಂದೇ ಬಾರಿ ಆತ್ಮಹತ್ಯೆ ಮಾಡಿಕೊಂಡರು. ಯಾರೂ ಕೇಳಲಿಲ್ಲ. ಕೋರ್ಟ್ ಇದೆಯಾ? ದೇವರು ಇದ್ದಾರಾ? ಎಂದು ರೈತನೊಬ್ಬ ಪ್ರಶ್ನಿಸಿದ ದೃಶ್ಯ ಕರುಳು ಹಿಸುಕಿ ಬಂತು ಎಂದರು.

ಮನಮೋಹನ್ ಸಿಂಗ್ ರೈತರ ಸಾಲವನ್ನಾದರೂ ಮನ್ನಾ ಮಾಡಿದ್ದಾರೆ. ಆದರೆ, ಉದ್ಯಮಿಗಳ ಸಾಲ ಮನ್ನಾ ಮಾಡುವ ಪ್ರಧಾನಿ ನರೇಂದ್ರ ಮೋದಿಗೆ ರೈತರು ಕಾಣುತ್ತಲೇ ಇಲ್ಲ’ ಎಂದ ಅವರು, ಎಲ್ಲರಿಗೂ ಸಮಾನ ವೇತನ ಜಾರಿ ಮಾಡಿದರೆ ಮಾತ್ರ ಸಮಾನತೆ ಬರಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.