ADVERTISEMENT

‘ವರದಾ ಗೋಲ್ಡ್‌’ ಘಮಲಿಗೆ ಭರ್ಜರಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 7:32 IST
Last Updated 17 ಮೇ 2017, 7:32 IST

ಹಾವೇರಿ: ಮನಸೆಳೆಯುವ ಬಣ್ಣ, ಸ್ವಾದಿಷ್ಟ ರುಚಿ, ಎಲ್ಲೆಲ್ಲೂ ಘಮಲು... ನೋಟದಲ್ಲಿಯೇ ತಿನ್ನುವಂತೆ ಸೆಳೆಯುವ ತರಹೇವಾರಿ ಮಾವುಗಳು. ಈ ಹಣ್ಣಿನ ರಾಜರ ನಡುವೆ ‘ವರದಾ ಗೋಲ್ಡ್‌’ ಮಹಾರಾಜ. 

ಇಲ್ಲಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯ ಆವರಣದಲ್ಲಿ ಮಂಗಳವಾರ ಆರಂಭಗೊಂಡ ಜಿಲ್ಲೆಯ ಚೊಚ್ಚಲ ‘ಮಾವು ಪ್ರದರ್ಶನ ಮತ್ತು ಮಾರಾಟ ಮೇಳ’ದ ಚಿತ್ರಣ.

ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ‘ಮಾವು ಬೆಳೆಗಾರರಿಂದ ನೇರ ಗ್ರಾಹಕರಿಗೆ’ ಧ್ಯೇಯದೊಂದಿಗೆ ರೈತರು ಬೆಳೆದ ನೈಸರ್ಗಿಕ (ಕಾರ್ಬೈಡ್‌ ಮುಕ್ತ), ತಾಜಾ ಹಣ್ಣುಗಳ ಮಾರಾಟ ಮತ್ತು 250ಕ್ಕೂ ಹೆಚ್ಚು ಬಗೆಯ ಮಾವುಗಳ ಪ್ರದರ್ಶನ ನಡೆಯಿತು.

ADVERTISEMENT

‘ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಆಕರ್ಷಕ ದರದಲ್ಲಿ ನೈಸರ್ಗಿಕ, ಸ್ವಾದಿಷ್ಟ, ತಾಜಾ ಹಣ್ಣುಗಳನ್ನು ಒದಗಿಸುವ ಜೊತೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗಿದೆ. ಗ್ರಾಹಕರಿಗೂ ಉತ್ತಮ ಗುಣಮಟ್ಟದ ಮಾವು ದೊರೆತರೆ, ರೈತರಿ ಲಾಭವಾಗುತ್ತಿದೆ’ ಎಂದು ಹಿರೇಕೆರೂರ ತಾಲ್ಲೂಕಿನ ಮಾವು ಬೆಳೆಗಾರ ಪಂಚಯ್ಯ ಚಂದ್ರಗೌಡ ತಿಳಿಸಿದರು.

‘ನೈಸರ್ಗಿಕವಾಗಿ ಮಾಗಿದ 5 ಕ್ವಿಂಟಲ್‌ ಮಾವು ತಂದ್ದಿದೆವು. ಕೆಲ ಗಂಟೆಗಳಲ್ಲೇ ಮಾರಾಟವಾಯಿತು.  ಪ್ರತಿ ವರ್ಷ ‘ಮಾವು ಮೇಳ’ವನ್ನು ಆಯೋಜಿಸಿದರೆ,  ಲಾಭ ಪಡೆಯಬಹುದು’ ಎಂದು ತಾಲ್ಲೂಕಿನ ಬಸಾಪುರ ಗ್ರಾಮದ ಮಾವು ಬೆಳೆಗಾರ ಮಲ್ಲೇಶ ನಾಗಪ್ಪ ಮುದ್ದಿ ತಿಳಿಸಿದರು.

‘ಇಷ್ಟೊಂದು ಬಗೆಯ ಮಾವಿನ ಹಣ್ಣಿನ ತಳಿಗಳನ್ನು ಎಲ್ಲಿಯೂ ನೋಡಿರಲ್ಲಿಲ್ಲ. ತುಂಬ ಸಂತೋಷವಾಯಿತು’ ಎಂದು ಮೇಳಕ್ಕೆ ಬಂದ ಬಾಲಕ ಚಂದು ಬಾವಿಕಟ್ಟಿ ತಿಳಿಸಿದರು.
‘ಧಾರವಾಡ ಕೃಷಿ ಮೇಳ ಬಿಟ್ಟರೆ, ನಮಗೆ ವೈವಿಧ್ಯಮಯ ಮಾವಿನ ಹಣ್ಣುಗಳು ನೋಡಲು ಸಿಗುವುದಿಲ್ಲ.  ಪತ್ರಿಕೆಯಲ್ಲಿ ಮಾಹಿತಿ ನೋಡಿ ಬಂದಿದ್ದೇನೆ. ಸುಮಾರು 250ಕ್ಕೂ ಹೆಚ್ಚು ಬಗೆಯ ಮಾವುಗಳನ್ನು ನೋಡಿ, ಮಾಹಿತಿ ಪಡೆದುಕೊಂಡಿದ್ದೇನೆ’ ಎಂದು ಗದಗದ ಸೂರ್ಯಕಾಂತ ಎಂ, ತಿಳಿಸಿದರು.

ಉದ್ಘಾಟನೆ: ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಜಿಲ್ಲೆಯ ಮಾವಿಗೆ ‘ವರದಾ ಗೋಲ್ಡ್‌’ ಬ್ರಾಂಡ್‌ ನೀಡಿದ್ದು, ಹುಬ್ಬಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆರಂಭದ ಬಳಿಕ ರಫ್ತಿಗೂ ಅವಕಾಶ ಹೆಚ್ಚಿದೆ’ ಎಂದರು.

‘ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನೀರು ಬಳಸಿಕೊಂಡು ತೋಟಗಾರಿಕಾ ಕ್ಷೇತ್ರ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದ ಅವರು, ‘ಮಾವು ಸಂಸ್ಕರಣಾ ಘಟಕಕ್ಕೆ ಧಾರವಾಡದಲ್ಲಿ ಜಾಗ ಗುರುತಿಸಲಾಗಿದೆ’ ಎಂದರು.

ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್‌. ಗೋಪಾಲಕೃಷ್ಣ ಮಾತನಾಡಿ, ‘ರಾಜ್ಯದ ಶೇ 40ರಷ್ಟು ಮಾವು ತೋಟ ಪುನಶ್ಚೇತನವಿಲ್ಲದೇ ಸೊರಗಿದೆ. ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಅವರಿಗೆ ನೀಡಬೇಕಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ನಾಲ್ಕು ಬಗೆಯ ಮಾವಿನ ತಳಿ ಮಾತ್ರ ಗೊತ್ತಿತ್ತು. ಮೇಳವು ಹೊಸ ಅನುಭವ ನೀಡಿತು’ ಎಂದರು.
ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಶಿಕಲಾ ಕವಲಿ ಮಾತನಾಡಿ, ‘ರಾಜ್ಯದಲ್ಲಿ ಕೆಲವು ಸಾಂಬಾರು ಪದಾರ್ಥಗಳ ಮೇಲಿದ್ದ ‘ಸೆಸ್‌’ ಅನ್ನು ರದ್ದು ಪಡಿಸಲಾಗುವುದು’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಉಪಾಧ್ಯಕ್ಷೆ ನಾಗಮ್ಮ ಬಂಕಾಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಅಂಜನಪ್ಪ, ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ನಿರ್ದೇಶಕ ಡಾ.ಕದಿರೇಗೌಡ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಸ್‌.ಪಿ.ಭೋಗಿ, ಹಿರಿಯ ಸಹಾಯಕ ನಿರ್ದೇಶಕ ಬಿ.ಎನ್‌.ಬರೇಗರ, ಪದ್ಮ ಪ್ರಕಾಶ, ಜಿ.ಎಸ್‌.ಗೌಡರ್‌, ಡಾ.ಬಿ.ಜೆ.ಅಳ್ಳಳ್ಳಿ ಇದ್ದರು.

ಬ್ರ್ಯಾಂಡ್‌ನಿಂದ ಬೇಡಿಕೆ...

‘ವಿಶ್ವಕ್ಕೆ ಮಾವಿನ ಹಣ್ಣನ್ನು ಭಾರತೀಯರೇ ಪರಿಚಯಿಸಿದ್ದಾರೆ. ಹೀಗಾಗಿ ಲ್ಯಾಟೀನ್‌ ಭಾಷೆಯಲ್ಲಿ ‘ಮ್ಯಾಂಗಿಫೆರಾ ಇಂಡಿಕಾ’ ಎನ್ನುತ್ತಾರೆ. ಜಿಲ್ಲೆಯ ಮಾವಿನ ಹಣ್ಣನ್ನು ‘ವರದಾ ಗೋಲ್ಡ್‌’ ಹೆಸರಿನಲ್ಲಿ ಬ್ರ್ಯಾಂಡ್ ಮಾಡಿರುವ ಕಾರಣ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್. ಎಂ.ವಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.