ADVERTISEMENT

ವ್ಯವಸ್ಥೆ ವಿರುದ್ಧ ಅಧಿಕಾರಿಗಳಿಂದಲೇ ಅಪಸ್ವರ

ಪಡಿತರ ವಿತರಣೆಯಲ್ಲಿ ಲೋಪದೋಷ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 7:52 IST
Last Updated 1 ನವೆಂಬರ್ 2014, 7:52 IST

ಸವಣೂರ: ಪಡಿತರ ವಿತರಣೆ ವ್ಯವಸ್ಥೆಯಲ್ಲಿ ದಿನಕ್ಕೊಂದು ನಿಯಮಾವಳಿಗಳನ್ನು ಸರ್ಕಾರ ಜಾರಿಗೊಳಿಸುತ್ತಿರುವ ಬಗ್ಗೆ ಆಹಾರ ಇಲಾಖೆಯ ಅಧಿಕಾರಿ ವರ್ಗದಿಂದಲೇ ಅಪಸ್ವರ ವ್ಯಕ್ತವಾಗಿದೆ.

ಸವಣೂರಿನ ತಾ.ಪಂ. ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ, ತಾಲ್ಲೂಕಿನ  ಪಡಿತರ ವಿತರಣೆಯಲ್ಲಿನ ನ್ಯೂನತೆಗಳನ್ನು ಸದಸ್ಯರು ಪ್ರಸ್ತಾಪಿಸಿದ್ದು, ಅಧಿಕಾರಿಗಳಲ್ಲಿ ಅಸಹನೆಯನ್ನು ಹೆಚ್ಚಿಸಿತು.

ಪ್ರತಿ ಕೆ.ಜಿಗೆ ಒಂದು ರೂಪಾಯಿ ದರದಲ್ಲಿ ಅಕ್ಕಿ ವಿತರಣೆ ಆರಂಭಗೊಂಡ ಬಳಿಕ ದಿನಕ್ಕೊಂದು ಹೊಸ ಹೊಸ ಕಾಯ್ದೆಗಳು ಜಾರಿಯಾಗುತ್ತಿದೆ. ಇದು ಅಧಿಕಾರಿಗಳನ್ನೂ ಪೇಚಾಟಕ್ಕೆ ಸಿಲುಕಿಸುತ್ತಿದೆ. ಪ್ರತಿಯೊಂದು ಕುಟುಂಬಗಳೂ ಎಸ್.ಎಂ.ಎಸ್ (ಕಿರು ಸಂದೇಶ) ಕಳುಹಿಸಬೇಕಾದ ಹಿನ್ನಲೆಯಲ್ಲಿ ತಾಂತ್ರಿಕ ತೊಂದರೆ ಉದ್ಭವಿಸಿದೆ.  ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಆಹಾರ ಇಲಾಖೆಯ ಮುಖ್ಯಸ್ಥರು ತಿಳಿಸಿದರು. ಸೀಮೆ ಎಣ್ಣೆ ವಿತರಕರು ಗ್ರಾಹಕರಿಗೆ ಖಡ್ಡಾಯವಾಗಿ ರಸೀದಿ ನೀಡುವಂತೆ ಸೂಚನೆ ನೀಡಲಾಗುತ್ತದೆ  ಎಂಬ ಭರವಸೆಯನ್ನು ಅವರು ನೀಡಿದರು.  

ಹಿಂದಿನ ಸಭೆಯಲ್ಲಿ ಕೇಳಿದ ಮಾಹಿತಿಗಳು, ಅನುಪಾಲನಾ ವರದಿ ಸೇರಿದಂತೆ ಯಾವುದೇ ಸ್ಪಂದನೆ ತೋರದ ವಿವಿಧ ಇಲಾಖಾ ಅಧಿಕಾರಿಗಳ ವರ್ತನೆಯ ಬಗ್ಗೆ ಸದಸ್ಯರಲ್ಲಿ ಅಸಮಾಧಾನ ವ್ಯಕ್ತವಾಯಿತು. ಸುದೀರ್ಘವಾದ ಅವಧಿಯವರೆಗೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯ ಚಿದಾನಂದ ಬಡಿಗೇರ ಹಾಗೂ ರಾಜು ಮಾದರ, ಸಭೆಯನ್ನೇ ಮುಂದೂಡುವಂತೆ ಪಟ್ಟು ಹಿಡಿದರು. ಸ್ವಪಕ್ಷೀಯ ಸದಸ್ಯರಿಂದ ಭಿನ್ನಾಭಿಪ್ರಾಯವೂ ವ್ಯಕ್ತವಾಯಿತು. ಅಂತಿಮವಾಗಿ ಉಪಾಧ್ಯಕ್ಷೆ ನೀಲಮ್ಮ ಭಜಂತ್ರಿ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡುವ ಮೂಲಕ ಸಭೆಯನ್ನು ಮುಂದುವರಿಸಿದರು. 

ಅರಣ್ಯ ಇಲಾಖೆಯ ವತಿಯಿಂದ ತಾಲ್ಲೂಕಿನ 20 ಗ್ರಾ.ಪಂ ವ್ಯಾಪ್ತಿಯಲ್ಲಿ ನೆಡಲಾಗಿರುವ ಸಸಿಗಳ ಬಗ್ಗೆ ಸಮಗ್ರ ವಿವರಗಳನ್ನು ಸದಸ್ಯರು ಅಪೇಕ್ಷಿಸಿದರು. ಶೇ 25 ರ ಮೀಸಲು ಅನುದಾನದ ಸದ್ಬಳಕೆಯ ಬಗ್ಗೆ  ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿಶೇಷ ಮಾಹಿತಿಗಳನ್ನು ಗ್ರಾ.ಪಂ ಅಧಿಕಾರಿಗಳಿಗೆ ನೀಡಲಾಗುತ್ತದೆ ಎಂದು ಸಭೆಗೆ ತಿಳಿಸಲಾಯಿತು.

ತಾಲ್ಲೂಕಿನ ವಿವಿಧ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯ ಬಗ್ಗೆ ಸಭೆಯಲ್ಲಿ  ಪ್ರಸ್ತಾಪಗೊಂಡಿತು. ಒಟ್ಟು  80 ಶಿಕ್ಷಕರ ಕೊರತೆಯಿಂದ ಉನ್ನತೀಕರಿಸಲಾಗಿರುವ ಪ್ರಾಥಮಿಕ ಶಾಲೆಗಳು ನೆಪಮಾತ್ರಕ್ಕೆ ಆಗಿದೆ ಎಂಬ ಅಂಶ ಅಧಿಕಾರಿಗಳಿಂದಲೇ ಬಯಲಿಗೆ ಬಂದಿತು. ದಿನಕ್ಕೆ 100 ರೂಪಾಯಿಗಳ  ಗೌರವಧನದ ಲೆಕ್ಕದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಯೋಜನೆ ರೂಪಿಸಲಾಗಿರುವ ಬಗ್ಗೆ  ಶಿಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು.

ಅಕ್ಷರ ದಾಸೋಹ ಯೋಜನೆಯ ಅಡಿ ಮಕ್ಕಳ ಹಾಜರಾತಿಗೆ ತಕ್ಕಂತೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಅಡುಗೆ ಅನಿಲದ ಸಮಸ್ಯೆ ಪರಿಹರಿಸುವಂತೆ ಹಾಗೂ ಪ್ರತಿನಿತ್ಯ ಬಿಸಿ ಊಟದ ವಿತರಣೆಗೆ ವ್ಯತ್ಯಯ ಆಗದಂತೆ ಜಾಗ್ರತೆ ವಹಿಸಲು ಸಭೆ ಸೂಚಿಸಿತು. 

ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಪ್ರಗತಿಯನ್ನು ವಿವರಿಸಿದರು. ತಾ.ಪಂ. ಅಧ್ಯಕ್ಷೆ ಅಕ್ಕಮ್ಮ ಸೂರಣಗಿ ಅಧ್ಯಕ್ಷತೆ ವಹಿಸಿದ್ದರು.  ತಾ.ಪಂ. ಉಪಾಧ್ಯಕ್ಷೆ ನೀಲಮ್ಮ ಭಜಂತ್ರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಿದಾನಂದ ಬಡಿಗೇರ, ಸದಸ್ಯರಾದ ಮಾಲತೇಶ ಬಿಜ್ಜೂರ, ರಮೇಶ ಅರಗೋಳ, ಪಾರ್ವತೆವ್ವ ದೊಡ್ಡಗೌಡ್ರ, ಪ್ರೇಮಾ ಶಿಗ್ಲಿ, ರತ್ನವ್ವ ಡವಗಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.