ADVERTISEMENT

ಶಿಗ್ಗಾವಿ: ದೆಹಲಿ ಅಂಗಣಕ್ಕೆ ಟಿಕೆಟ್ ಸಮರ

ನಾಯಕರ ನಡುವೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 11:10 IST
Last Updated 11 ಏಪ್ರಿಲ್ 2018, 11:10 IST

ಹಾವೇರಿ: ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯು ದೆಹಲಿಯ ಎಐಸಿಸಿ ಅಂಗಣಕ್ಕೆ ತಲುಪಿದ್ದು, ಆಕಾಂಕ್ಷಿಗಳೂ ಅಲ್ಲಿಗೆ ದೌಡಾಯಿಸಿದ್ದಾರೆ.

ಮಾಜಿ ಸಂಸದ ಮಂಜುನಾಥ ಕುನ್ನೂರ ಅಥವಾ ರಾಜು ಕುನ್ನೂರ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಪಾಟೀಲ್ ಮಧ್ಯೆ ಟಿಕೆಟ್ ಪೈಪೋಟಿ ತೀವ್ರಗೊಂಡಿದೆ. ಈ ಮೂವರು ಮುಖಂಡರು ಟಿಕೆಟ್ ಖಾತ್ರಿಗಾಗಿ ತಮ್ಮ ನಾಯಕರನ್ನೂ ದೆಹಲಿಗೆ ಕರೆದೊಯ್ದಿದ್ದು, ಬೀಡು ಬಿಟ್ಟಿದ್ದಾರೆ.

ಟಿಕೆಟ್ ಅಂತಿಮಗೊಳಿಸುವ ಬಗ್ಗೆ ಬೆಂಗಳೂರಿನಲ್ಲಿ ಈಚೆಗೆ ‘ಸ್ಕ್ರೀನಿಂಗ್ ಸಮಿತಿ’ ಸಭೆ ನಡೆದಿತ್ತು. ಅದು ಅಂತಿಮ ನಿರ್ಣಯಕ್ಕೆ ಬಾರದ ಕಾರಣ, ದೆಹಲಿಯಲ್ಲಿ ಸಭೆ ಮುಂದುವರಿದಿದೆ. ಮೊದಲ ಹಂತದಲ್ಲಿ ಹಾಲಿ ಶಾಸಕರ ಕ್ಷೇತ್ರದ ಟಿಕೆಟ್‌ ಘೋಷಣೆಯಾಗಬಹುದು. ಎರಡನೇ ಹಂತದಲ್ಲಿ ಉಳಿದ ಕ್ಷೇತ್ರಗಳ ಬಗ್ಗೆ ನಿರ್ಣಯಿಸುವ ಸಾಧ್ಯತೆ ಇದೆ ಎಂದು ಟಿಕೆಟ್‌ ಆಕಾಂಕ್ಷಿ ರಾಜೇಶ್ವರಿ ಪಾಟೀಲ್‌ (ಮಾಮಲೇ ದೇಸಾಯಿ) ದೆಹಲಿಯಿಂದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಶಿಗ್ಗಾವಿ ಕ್ಷೇತ್ರವನ್ನು ಗೆಲ್ಲಲೇಬೇಕು’ ಎಂಬ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಮಧ್ಯೆ ಹೊಂದಾಣಿಕೆ ಮಾತುಕತೆ ನಡೆಸುವ ಕುರಿತ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಒಬ್ಬರಿಗೆ ಟಿಕೆಟ್‌ ನೀಡಿ, ಇನ್ನಿಬ್ಬರಿಗೆ ಕ್ರಮವಾಗಿ ವಿಧಾನ ಪರಿಷತ್ ಸದಸ್ಯತ್ವ ಮತ್ತು ನಿಗಮ ಮಂಡಳಿ ಅಧ್ಯಕ್ಷತೆ ನೀಡುವ ಕುರಿತ ಚಿಂತನೆಯನ್ನು ಕೆಲವು ಹಿರಿಯ ನಾಯಕರು ತೋರಿದ್ದಾರೆ ಎನ್ನಲಾಗಿದೆ.

ಇತ್ತ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಣಿ ಅವರೂ ದೆಹಲಿಗೆ ದೌಡಾಯಿಸಿದ್ದು, ಟಿಕೆಟ್ ಘೋಷಣೆ ವಿಚಾರವು ಇನ್ನಷ್ಟು ಕುತೂಹಲ ಮೂಡಿಸಿದೆ.

4 ಕ್ಷೇತ್ರದ ಟಿಕೆಟ್ ಬಹುತೇಕ ಅಂತಿಮ!

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು ಮತ್ತು ಹಿರೇಕೆರೂರ ಕ್ಷೇತ್ರಗಳ ಕಾಂಗ್ರೆಸ್‌ ಟಿಕೆಟ್‌ಗಳು ಬಹುತೇಕ ಅಂತಿಮಗೊಂಡಿವೆ. ಹಾನಗಲ್ ಹಾಗೂ ಶಿಗ್ಗಾವಿ ಕ್ಷೇತ್ರಗಳು ಅಂತಿಮಗೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.