ADVERTISEMENT

ಶಿಶುವಿನಹಾಳದಲ್ಲಿ ‘ತತ್ವರಸಾನುಭವ’ 7ಕ್ಕೆ

ಗುರು ಗೋವಿಂದ ಭಟ್ಟರು ಮತ್ತು ಸಂತ ಶಿಶುನಾಳ ಶರೀಫರ ಸ್ಮರಣೆ ಕಾರ್ಯಕ್ರಮ: ಡಾ. ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 5:07 IST
Last Updated 2 ಮಾರ್ಚ್ 2017, 5:07 IST

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುವಿನಹಾಳದ ಶರೀಫಗಿರಿಯ ಶ್ರೀ ಶರೀಫ ಶಿವಯೋಗೀಶ್ವರ ಪ್ರೌಢಶಾಲಾ ಆವರಣದಲ್ಲಿ ಇದೇ 7ರಂದು ಸಂಜೆ 7ರಿಂದ ಕಳಸದ ಗುರು ಗೋವಿಂದ ಭಟ್ಟರು ಮತ್ತು ಸಂತ ಶಿಶುನಾಳ ಶರೀಫರ ಸ್ಮರಣಾರ್ಥ ಸಂಗೀತ ಮತ್ತು ನೃತ್ಯದ ‘ತತ್ವರಸಾನುಭವ’ ಕಾರ್ಯಕ್ರಮ ನಡೆಯಲಿದೆ.

ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ದೂರ ದರ್ಶನದ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ ಜೋಶಿ, ‘ಬೆಂಗಳೂರು ದೂರದರ್ಶನ ಕೇಂದ್ರವು ಸ್ಥಳೀಯ ಶ್ರೀ ಶರೀಫ ಶಿವಯೋಗಿ ಮತ್ತು ಗುರು ಗೋವಿಂದ ಶಿವಯೋಗಿ ಪಂಚಾಗ್ನಿ ಮಠ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ವಿಶ್ರಾಂತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಉದ್ಘಾಟಿಸುವರು.

ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕೊಳದ ಮಠದ ಶಾಂತವೀರ ಸ್ವಾಮೀಜಿ, ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನದ ಫಕೀರ ಸಿದ್ದರಾಮ ಸ್ವಾಮೀಜಿ, ಯಲ್ಲಾಪುರದ ಸೂಫಿ ಬುರಾನುದ್ದೀನ್ ಶಾ ಖಾದ್ರಿ ಮತ್ತಿತರರು ಸಾನಿಧ್ಯ ವಹಿಸುವರು. ವಿಶ್ರಾಂತ ನ್ಯಾಯಮೂರ್ತಿಗಳಾದ ಶಿವರಾಜ ವಿ. ಪಾಟೀಲ್, ವಿ. ಗೋಪಾಗೌಡ, ಎಸ್. ಆರ್. ಬನ್ನೂರ್‌ಮಠ, ಎನ್‌.ಕುಮಾರ್, ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಖುಂಟಿಆ ಮತ್ತಿತರ ಪ್ರಮುಖರು ಪಾಲ್ಗೊಳ್ಳುವರು’ ಎಂದರು.

‘ಸಂಜೆ 7ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಆದರೆ, ಯಾವುದೇ ವೇದಿಕೆ (ಭಾಷಣ) ಕಾರ್ಯಕ್ರಮಗಳು ಇರುವುದಿಲ್ಲ. ಬದಲಾಗಿ ತತ್ವಪದಗಳ ಪರಿಚಯ, ಇತಿಹಾಸವನ್ನು ಪರಿಚಯಿಸುತ್ತಾ ಹಾಡು, ನೃತ್ಯಗಳು ನಡೆಯಲಿವೆ. ನಡುವೆ ಮುಖ್ಯ ಅತಿಥಿಗಳು ಒಂದೆರಡು ನಿಮಿಷ ಸಂದೇಶ ನೀಡುತ್ತಾರೆ. ಸುಮಾರು 5 ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ’ ಎಂದು ವಿವರಿಸಿದರು.

‘ಗುರು ಗೋವಿಂದ ಭಟ್ಟರು ಹಾಗೂ ಸಂತ ಶಿಶುನಾಳ ಶರೀಫರ ಬಗ್ಗೆ ಪವಾಡಗಳೇ ಹೆಚ್ಚು ಪ್ರಚಾರಗೊಂಡಿವೆ. ಆದರೆ, ಅವರ ಸಾಹಿತ್ಯ, ಅಧ್ಯಾತ್ಮ, ಹಾಡುಗಳ ಬಗ್ಗೆ ಸಾಮಾನ್ಯ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಅಂತಹ ಸಾಹಿತ್ಯವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ಇದ್ದರು.

ಹಾವೇರಿಯಲ್ಲೇ ಅಧಿಕ
ಹಾವೇರಿ:
‘ಬೆಂಗಳೂರು ದೂರದರ್ಶನ ‘ಚಂದನ’ದ ಕಾರ್ಯಕ್ರಮಗಳು ಹಾವೇರಿ ಜಿಲ್ಲೆಯಲ್ಲೆ ಹೆಚ್ಚು ನಡೆದಿವೆ. ಕಾಗಿನೆಲೆ, ಬೊಮ್ಮನಹಳ್ಳಿ ಮತ್ತಿತರೆಡೆಗಳಲ್ಲಿ ‘ಮಧುರ ಮಧುರವೀ ಮಂಜುಳಗಾನ’ ಸೇರಿದಂತೆ ‘ಚಂದನ’ದ ಹಲವು ಕಾರ್ಯಕ್ರಮಗಳಿಗೆ ಹಾವೇರಿ ಜಿಲ್ಲೆ ಸಾಕ್ಷಿಯಾಗಿದೆ. ಇದು ನನ್ನ ಹುಟ್ಟೂರು. ಅದಕ್ಕಾಗಿ ಇಲ್ಲಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ’ ಎಂದು ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT