ADVERTISEMENT

ಸಮ್ಮೇಳನದ ಯಶಸ್ಸಿಗೆ ಕೈ ಜೋಡಿಸಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 9:57 IST
Last Updated 2 ಡಿಸೆಂಬರ್ 2017, 9:57 IST

ಅಕ್ಕಿಆಲೂರ: ಕನ್ನಡದ ತವರೂರು ಎನ್ನುವ ಹಿರಿಮೆಗೆ ಪಾತ್ರವಾಗಿರುವ ಅಕ್ಕಿಆಲೂರಿಗೆ ಹತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವ ಭಾಗ್ಯ ಲಭಿಸಿದೆ. ಡಿಸೆಂಬರ್ 16 ಮತ್ತು 17ರಂದು ನಡೆಯುವ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು. ಇಲ್ಲಿಯ ವಿರಕ್ತಮಠದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹಾನಗಲ್ಲ ತಾಲ್ಲೂಕಿನಲ್ಲಿ ಎರಡನೇ ಸಲ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಪ್ರತಿವರ್ಷವೂ ‘ಕನ್ನಡ ನುಡಿ ಸಂಭ್ರಮ’ ವಿಶೇಷ ಸಮಾರಂಭದ ಮೂಲಕ, ಕನ್ನಡ ಕಟ್ಟುವ ಕಾರ್ಯವನ್ನು ಇಲ್ಲಿಯ ದುಂಡಿಬಸವೇಶ್ವರ ಜನಪದ ಕಲಾಸಂಘ ಯಶಸ್ವಿಯಾಗಿ ಮಾಡುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಸಾಹಿತಿಗಳು ಮತ್ತು ಕಲಾವಿದರು ಸಮ್ಮೇಳನಕ್ಕೆ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಜವಾಬ್ದಾರಿಯನ್ನು ನಾವೆಲ್ಲರೂ ಅಚ್ಚುಕಟ್ಟಾಗಿ ನಿಭಾಯಿಸಲು ಸಜ್ಜಾಗೋಣ ಎಂದು ನುಡಿದರು.

ADVERTISEMENT

ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ, ಅಕ್ಕಿಆಲೂರಿನ ವಿರಕ್ತಮಠ ಹಾಗೂ ಮುತ್ತಿನಕಂತಿಮಠ ಮೊದಲಿನಿಂದಲೂ ಧಾರ್ಮಿಕ ಮಾತ್ರವಲ್ಲದೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆಸರೆಯಾಗಿವೆ ಎಂದರು.

ಸಮ್ಮೇಳನ ಇಡೀ ಜಿಲ್ಲೆಯ ಕನ್ನಡದ ಹಬ್ಬವಾಗಿರುವುದರಿಂದ ಮನೆ ಮನೆಯ ಹಬ್ಬದಂತೆ ಆಚರಿಸಲು ನಾವು ಸಂಕಲ್ಪ ಮಾಡಬೇಕಿದೆ. ಸಮ್ಮೇಳನದ ಲಾಂಛನ ವಿನ್ಯಾಸ ಚನ್ನಾಗಿದ್ದು, ಭಾವೈಕ್ಯತೆ ಮೇಳೈಸಿದೆ. ಜಿಲ್ಲೆಯ ಹಿರಿಮೆ–ಗರಿಮೆಯ ಸೊಗಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕಾ ಘಟಕದ ಅಧ್ಯಕ್ಷ ನಾಗರಾಜ್ ಅಡಿಗ,  ಸಮ್ಮೇಳನದ ಹಿನ್ನೆಲೆಯಲ್ಲಿ ಹಲವು ಪೂರ್ವಭಾವಿ ಸಭೆ ನಡೆಸಿ, ಸಾಹಿತ್ಯಾಸಕ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಸಮ್ಮೇಳನದ ಯಶಸ್ಸಿಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ಧತೆಗಳನ್ನು ಚುರುಕುಗೊಳಿಸಲಾಗುವುದು ಎಂದರು.

ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ, ಸಾಹಿತಿಗಳಾದ ಉದಯ ನಾಸಿಕ, ಶಿವಾನಂದ ಕ್ಯಾಲಕೊಂಡ, ನಿರಂಜನ ಗುಡಿ, ಎಸ್.ಎಸ್. ಮೂರಮಟ್ಟಿ, ಶಿವಕುಮಾರ ದೇಶಮುಖ, ಅಜೀಜ್‌ ಮಲ್ಲೂರ, ಮಾರ್ತಾಂಡಪ್ಪ ಬಾರ್ಕಿ, ಎಂ.ಎಸ್.ಬಡಿಗೇರ, ಎಸ್.ಪಿ.ಹುಲ್ಮನಿ, ಪ್ರೊ.ವಿ.ಜಿ.ಶಾಂತಪೂರಮಠ, ಸದಾಶಿವ ಕಂಬಾಳಿ ಹಾಗೂ ಮಂಜುನಾಥ ಕರ್ಜಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.