ADVERTISEMENT

ಸರ್ಕಾರಿ ಆಸ್ಪತ್ರೆಗೆ ಸಚಿವರ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:50 IST
Last Updated 19 ಏಪ್ರಿಲ್ 2017, 4:50 IST

ಹಾವೇರಿ: ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವರ ಜೊತೆ ಅಳಲು ತೋಡಿಕೊಂಡ ಹಾನಗಲ್‌ ತಾಲ್ಲೂಕಿನ ಚಿಕ್ಕಹುಳ್ಳಾಳ ಗ್ರಾಮದ ಕುರಿಗಾಹಿ ರೇವಣ್ಣಪ್ಪ ಉಡಚ್ಚಪ್ಪ ಬೇವಿನಹಳ್ಳಿ, ‘ಕುರಿಗಳು ಜಮೀನುಗಳಿಗೆ ನುಗ್ಗಿವೆ ಎಂಬ ಕಾರಣಕ್ಕೆ ನನ್ನ ಮೇಲೆ ಹಲ್ಲೆ ಮಾಡಲಾಗಿದೆ.

ಅಲ್ಲದೇ ರಾತ್ರಿ ಬಂದು, ತಾಯಿ ಹುಲಿಗೆಮ್ಮ ಹಾಗೂ ದೊಡ್ಡಪ್ಪ ಯಲ್ಲಪ್ಪನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ತಾಯಿ ಮತ್ತು ದೊಡ್ಡಪ್ಪನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಡೂರ ಠಾಣೆಯ ಪೊಲೀಸರು 14 ದಿನಗಳಿಂದ ಈ ಬಗ್ಗೆ ದೂರು ದಾಖಲಿಸಿಕೊಳ್ಳುತ್ತಿಲ್ಲ’ ಎಂದನು.

ತಕ್ಷಣವೇ ಸಚಿವರು ಆಡೂರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿ, ದೂರು ದಾಖಲಿಸಿ­ಕೊಳ್ಳುವಂತೆ ಸೂಚಿಸಿದರು.‘ಗೊಬ್ಬರ ಮತ್ತು ಬೀಜ ಖರೀದಿ­ಗಾಗಿ ನೀಡಿದ್ದ ಸಾಲವನ್ನು ಮರುಪಾವತಿ­ಸಿಲ್ಲ ಎಂಬ ಕಾರಣಕ್ಕೆ ಗುತ್ತಲದ ಅಂಗಡಿ ಮಾಲೀಕನೊಬ್ಬ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಸಾಲ ವಸೂಲಾತಿಗಾಗಿ ಮಾನ­ಸಿಕ ಕಿರುಕುಳ ಮಾತ್ರವಲ್ಲದೇ, ಹಲ್ಲೆ ನಡೆಸುತ್ತಿದ್ದಾರೆ’ ಎಂದುತಾಲ್ಲೂಕಿನ ಕಂಚಾರಕಟ್ಟಿಯ ರೈತ ಶಶಿಧರ ತಿರಕಪ್ಪ ದೂರಿಕೊಂಡರು.

ADVERTISEMENT

‘ಅಂಗಡಿ ಮಾಲೀಕನ ವಿರುದ್ಧ ಗುತ್ತಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಆತನನ್ನು ಇನ್ನೂ ಬಂಧಿಸಿಲ್ಲ. ಹೀಗಾಗಿ ನಾನು ವಾಪಾಸ್ ಊರಿಗೆ ಹೋದರೆ ಮತ್ತೆ ಹಲ್ಲೆ ನಡೆಯುವ ಆತಂಕ ಇದೆ’ ಎಂದು ಸಚಿವರಿಗೆ ವಿವರಿಸಿದರು.

ಸ್ವಚ್ಛತೆಗೆ ಒತ್ತು: ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ‘ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೆ, ಜನಸಾಮಾನ್ಯರು ಗುಟ್ಕಾ ತಿಂದು ಉಗುಳುವುದೇ ಸ್ವಚ್ಛತೆಗೆ ಸಮಸ್ಯೆಯಾಗಿದೆ. ಹೀಗಾಗಿ ಜಿಲ್ಲಾಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಪ್ರತಿಯೊಬ್ಬರನ್ನು ಪರಿಶೀಲನೆ ಮಾಡಿ, ನಂತರ ಅವರನ್ನು ಒಳಗೆ ಬಿಡಲಾಗುವುದು’ ಎಂದರು.ಜಿಲ್ಲಾ ಆಸ್ಪತ್ರೆಯಲ್ಲಿ ಕೆಲವೇ ದಿನಗಳಲ್ಲಿ ‘ಜನೌಷಧಿ ಕೇಂದ್ರ’ವನ್ನು ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

ಗುಟ್ಕಾ–ಅಸಹ್ಯ: ‘ಗುಟ್ಕಾ ತಿನ್ನುವವರ ಎದುರು ನಿಲ್ಲಲು ಅಸಹ್ಯವಾಗುತ್ತದೆ. ಅದೂ ಆಸ್ಪತ್ರೆಯ ಒಳಗೆ ತಿನ್ನುತ್ತಾರೆ. ಅಲ್ಲದೇ, ಕಂಡ ಕಂಡಲ್ಲಿ ಕಸ ಹಾಕುವುದಲ್ಲದೇ, ಉಗುಳುತ್ತಾರೆ. ಇಂತಹ ಗಲೀಜು ವ್ಯಕ್ತಿಗಳಿಂದಲೇ  ವಾತಾವರಣ ಹದಗೆಡುತ್ತಿದೆ. ಅವರಿಗೆ ರೋಗಿಗಳ ಬಗ್ಗೆ ಕಾಳಜಿಯೂ ಇಲ್ಲ. ಗುಟ್ಕಾ ನಿಷೇಧಕ್ಕೆ ಕಠಿಣ ಕ್ರಮಕೈಗೊಳ್ಳಿ’ ಎಂದು ಸ್ಥಳದಲ್ಲಿದ್ದವರು ದೂರಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುನೀಲ್‌ಚಂದ್ರ ಅವರಾದಿ ಹಾಗೂ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.