ADVERTISEMENT

‘ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 6:54 IST
Last Updated 6 ನವೆಂಬರ್ 2017, 6:54 IST
ಹಾನಗಲ್ ಪಟ್ಟಣಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾನಗಲ್ ಪಟ್ಟಣಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ   

ಹಾನಗಲ್‌: ‘ಇದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ₹538 ಕೋಟಿ ಮೊತ್ತದ 50 ಅಭಿವೃದ್ಧಿ ಕಾಮಗಾರಿಗಳು ಒಂದೇ ದಿನ ಇಲ್ಲಿ ಉದ್ಘಾಟನೆ ಮತ್ತು ಚಾಲನೆ ಪಡೆಯುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.

ಭಾನುವಾರ ಇಲ್ಲಿನ ರಾಜೀವ ಗಾಂಧಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಎಂ.ಉದಾಸಿ ಅವರಿಂದ ಆಗಲಾರದ ಅಭಿವೃದ್ಧಿ ಕೆಲಸಗಳು ನಮ್ಮ ಸರ್ಕಾರದಿಂದ ಅನುಷ್ಠಾನಗೊಳ್ಳುತ್ತಿವೆ.

ನನೆಗುದಿಗೆ ಬಿದ್ದ ರಸ್ತೆ ಸುಧಾರಣೆ ಕಾಮಗಾರಿಗಳಿಗೂ ನಮ್ಮದೇ ಸರ್ಕಾರ ಬರಬೇಕಾಯಿತು. ಅಲ್ಲದೆ, ಸಾಕಷ್ಟು ನೀರಾವರಿ ಯೋಜನೆಗಳು ಈಗ ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿವೆ’ ಎಂದರು.

ADVERTISEMENT

‘ಹಿಂದುತ್ವದ ಹೆಸರಲ್ಲಿ ಸಮಾಜ ಒಡೆಯುವ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸದಲ್ಲಿ ಬಿಜೆಪಿ ತೊಡಗಿದೆ. ಜಾತಿವಾದಿಗಳು, ಕೋಮುವಾದಿಗಳ ಮನಪರಿವರ್ತನೆ ಆದರೆ ಮಾತ್ರ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ ಸಾಧ್ಯವಿದೆ’ ಎಂದರು.‘ಟಿಪ್ಪು ಈ ನಾಡು ಕಂಡು ಅಪ್ರತಿಮ ಶೂರ. ರಾಷ್ಟ್ರಪತಿಗಳೇ ಟಿಪ್ಪು ಬಗ್ಗೆ ಬಣ್ಣಿಸಿದ್ದಾರೆ. ಆವಾಗಿನಿಂದ ಬಿಜೆಪಿಗರು ಬಾಯಿ ಮುಚ್ಚಿಕೊಂಡಿದ್ದಾರೆ’ ಎಂದರು.

ಶಾಸಕ ಮನೋಹರ ತಹಸೀಲ್ದಾರ್‌, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಸಲೀಂ ಅಹ್ಮದ್‌, ಶಾಸಕ ಶಿವರಾಮ ಹೆಬ್ಬಾರ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಬಿ.ಸಿ.ಪಾಟೀಲ, ಅಜ್ಜಂಪೀರ್‌ ಖಾದ್ರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಎಸ್‌.ಪಾಟೀಲ, ಶಿವಯೋಗಿ ಹಿರೇಮಠ, ಪ್ರಮುಖರಾದ ಜಯಸಿಂಹ, ಬಿ.ಶಿವಪ್ಪ, ಪ್ರಕಾಶಗೌಡ ಪಾಟೀಲ, ಯಾಸೀರಖಾನ್ ಪಠಾಣ, ರುದ್ರೇಶ ಕಮ್ಮಾರ, ಎ.ಎಂ.ಪಠಾಣ, ರಾಘವೇಂದ್ರ ತಹಸೀಲ್ದಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.