ADVERTISEMENT

ಹಿಂದುಳಿದ ಸಮುದಾಯಗಳಿಗೆ ನೆರವು

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 7:06 IST
Last Updated 8 ಜುಲೈ 2017, 7:06 IST

ಹಾವೇರಿ: ‘ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಒಕ್ಕಲಿಗ, ಲಿಂಗಾಯತ ಮತ್ತಿತರ ಜಾತಿಗಳಿಗೆ ಸೇರಿದ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ನೆರವು ನೀಡಲಾಗುತ್ತಿದೆ. ಅದಕ್ಕಾಗಿ ಸರ್ಕಾರವು ಈ ಸಾಲಿನಲ್ಲಿ ₹ 435.63 ಕೋಟಿ ಅನುದಾನ ನೀಡಿದೆ’ ಎಂದು ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಾಲಿನಲ್ಲಿ 63,300 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಒದಗಿಸುವ ಗುರಿ ಇದೆ. ಪ್ರತಿ ತಾಲ್ಲೂಕುಗಳಿಗೆ ತಲಾ  ₹ 70 ರಿಂದ ₹ 80 ಲಕ್ಷ ಅನುದಾನ ನೀಡಲಾಗುತ್ತಿದೆ’ ಎಂದರು.

‘ಆರ್ಥಿಕವಾಗಿ ಹಿಂದುಳಿದ ಎಲ್ಲ ಜಾತಿಗಳಿಗೆ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ, ನಿಗಮದ ಯೋಜನೆಗಳ ಬಗ್ಗೆ ಸಂಬಂಧಿತ ಸಮುದಾಯಗಳಿಗೆ ಮಾಹಿತಿ ಕೊರತೆ ಇದೆ.  ಹೀಗಾಗಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಈಗಾಗಲೇ 13 ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ್ದೇನೆ’ ಎಂದು ಅವರು ಹೇಳಿದರು.

ADVERTISEMENT

‘ವಿಧವೆಯರ ಆರ್ಥಿಕ ಸ್ವಾವಲಂಬನೆಗೆ ವಿಶೇಷ ಯೋಜನೆ ರೂಪಿಸಿದ್ದು, 1,200 ವಿಧವೆಯರ ನೆರವಿಗಾಗಿ ₹ 5 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ನಿರುದ್ಯೋಗಿ ಯುವಜನರಿಗೆ ಕಾರು, ಸರಕು ವಾಹನ ಖರೀದಿಸಲು  ನೆರವು ನೀಡುವ ಯೋಜನೆ ರೂಪಿಸಲಾಗಿದೆ’ ಎಂದರು.

‘ವಿದೇಶದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯು ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗಿದೆ’ ಎಂದರು. ‘ತೀರಾ ಹಿಂದುಳಿದ ಮಡಿವಾಳ, ಸವಿತಾ ಸಮಾಜ, ಕುಂಬಾರ, ತಿಗಳ ಮತ್ತಿತರ ಸಮಾಜಗಳ ಅಭಿವೃದ್ಧಿಗಾಗಿ ₹ 63 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಸಮುದಾಯದ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಸೌಲಭ್ಯ ಪಡೆಯಬೇಕು. ಅದಕ್ಕಾಗಿ ಈ ಸಮಾಜಗಳ ಮುಖಂಡರನ್ನು ಆಹ್ವಾನಿಸಿ, ಜಿಲ್ಲಾವಾರು ಸಂಪರ್ಕ ಸಭೆ ನಡೆಸಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಫಲಾನುಭವಿಗಳಿಗೆ ಸೌಲಭ್ಯ ದೊರಕುವಂತೆ ಮಾಡಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

‘ಒಂದು ಎಕರೆ ಜಮೀನಿದ್ದ ಫಲಾನುಭವಿಗೂ ‘ಗಂಗಾ ಕಲ್ಯಾಣ ಯೋಜನೆ’ಯಡಿ ಕೊಳವೆಬಾವಿ ಕೊರೆಯಿಸಲು ನೆರವು ನೀಡಲು ಯೋಜಿಸಲಾಗಿದೆ  ಎಂದು ಅವರು ಹೇಳಿದರು.
ನಿಗಮದಲ್ಲಿ ಪಾರದರ್ಶಕತೆ ತರಲು ಫಲಾನುಭವಿಗಳ ಖಾತೆಗೆ  ನೇರ ಹಣ ವರ್ಗಾವಣೆಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಂಜನಪ್ಪ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹೊರಪೇಟೆ ಮಲ್ಲೇಶಪ್ಪ,  ನಿಗಮದ ನಿರ್ದೇಶಕ ರುದ್ರಪ್ಪ ಬಸಪ್ಪ ಕಂಬಾಗಿ,  ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಜಿ.ತವನಪ್ಪ, ಜಿಲ್ಲಾ ವ್ಯವಸ್ಥಾಪಕ ಎ.ಟಿ.ಸುಲ್ತಾನಪುರ, ಮುಖಂಡರಾದ ಎಸ್.ಎಫ್.ಎನ್.ಗಾಜೀಗೌಡ್ರ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.