ADVERTISEMENT

‘ಹೆಗ್ಗೇರಿ ಕೆರೆ ಅಭಿವೃದ್ಧಿಗೆ ಬದ್ಧ’

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 7:20 IST
Last Updated 29 ಏಪ್ರಿಲ್ 2017, 7:20 IST

ಹಾವೇರಿ: ‘ಹೆಗ್ಗೇರಿ ಕೆರೆಯ ಹೂಳೆತ್ತಿ ಅಭಿವೃದ್ಧಿ ಪಡಿಸಲಾಗುವುದು. ಗಾಜಿನಮನೆ ಹಾಗೂ ಪಕ್ಷಿಧಾಮ ನಿರ್ಮಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.ಹೆಗ್ಗೇರಿ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಶುಕ್ರವಾರ ಸಂಜೆ ವೀಕ್ಷಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

‘ವಿದೇಶಿ ಪಕ್ಷಿಗಳು ಹೆಗ್ಗೇರಿ ಕೆರೆಗೆ ಹೆಚ್ಚಾಗಿ ಬರಬೇಕು ಎಂಬ ದೃಷ್ಟಿಯಿಂದ ಕರೆಯ ಮಧ್ಯದಲ್ಲಿ ನಡುಗಡ್ಡೆ  ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ –4 ಕೆರೆಯ ಸಮೀಪವೇ ಹಾದು ಹೋದ ಕಾರಣ ಪ್ರವಾಸಿ ತಾಣವಾಗಿಸಲು ಅತ್ಯಂತ ಸಹಾಯಕಾರಿಯಾಗಿದೆ’ ಎಂದರು.‘ರಾಷ್ಟ್ರೀಯ ಹೆದ್ದಾರಿ 4ರಿಂದ ನೇರವಾದ ರಸ್ತೆ ನಿರ್ಮಿಸಲಾಗುವುದು. ಕೆರೆಯ ಮುಂಭಾಗದಲ್ಲಿರುವ ಪಂಪ್‌ಹೌಸ್‌ ಬಳಿ ನೀರು ಶೇಖರಣೆಗೆ ಹೊಂಡ ನಿರ್ಮಿಸಲಾಗುವುದು’ ಎಂದರು.

‘ಈ ಹೂಳು ಫಲವತತ್ತೆಯಿಂದ ಕೂಡಿದ್ದು, ಬ್ಯಾಡಗಿ ತಾಲ್ಲೂಕಿನ ರೈತರೂ ಒಯ್ಯುತ್ತಿದ್ದಾರೆ. ಕೆರೆಯ ಹೂಳೆತ್ತಲು  ಹಣದ ಕೊರತೆ ಇಲ್ಲ. ಎರಡನೇ ಕಂತಿನಲ್ಲಿ ನಗರೋತ್ಥಾನದ ಅಡಿಯಲ್ಲಿ ₹2 ಕೋಟಿ, ನಗರಸಭೆಯಿಂದ ₹35 ಲಕ್ಷ ನೀಡಲಾಗುತ್ತಿದೆ. ‘ಕೆರೆ ಸಂಜೀವಿನಿ’ ಯೋಜನೆಯಲ್ಲಿ ಹಣ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅನುದಾನ ನೀಡುವ ಭರವಸೆ ಕೊಟ್ಟಿದ್ದಾರೆ’ ಎಂದರು.    

ADVERTISEMENT

‘ಪ್ರತಿ ತಾಲ್ಲೂಕಿನ 5 ಕೆರೆಗಳ ಹೂಳೆತ್ತಲು ಸರ್ಕಾರ ಅನುಮತಿ ನೀಡಿದೆ. ಬಸವೇಶ್ವರ  ನಗರದ ಮುಲ್ಲಾನ್‌ ಕೆರೆ ಹಾಗೂ ಇಜಾರಿಲಕಮಾಪುರದ ದುಂಡಿ ಬಸವೇಶ್ವರ ಕೆರೆಯ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗುವುದು’ ಎಂದರು.

‘ಜಿಲ್ಲೆಯ ಹತ್ತಿಮತ್ತೂರ, ಯಲವಿಗಿ, ಶಿರಬಡಿಗಿ, ಹೆಸರೂರು ಹಾಗೂ ಸಿದ್ದಾಪುರ ಕೆರೆ ಹೂಳೆತ್ತಲಾಗುವುದು. ಜಿಲ್ಲೆಗೆ ₹10 ಕೋಟಿ ಅನುದಾನ ಬಂದಿದ್ದು, ಅಗತ್ಯವಿದ್ದಲ್ಲಿ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಲಾಗುವುದು’ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್‌ ನೀರಲಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.