ADVERTISEMENT

‘ನದಿ ಜೋಡಣೆ ಯೋಜನೆ ಈಗಿನದ್ದಲ್ಲ’

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 7:13 IST
Last Updated 1 ಸೆಪ್ಟೆಂಬರ್ 2014, 7:13 IST
ಶಿಗ್ಗಾವಿ ಪಟ್ಟಣದ ನಾಗನೂರ ಕೆರೆಗೆ ಶಾಸಕ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಭಾನುವಾರ ಬಾಗಿನ ಅರ್ಪಿಸಿದರು
ಶಿಗ್ಗಾವಿ ಪಟ್ಟಣದ ನಾಗನೂರ ಕೆರೆಗೆ ಶಾಸಕ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಭಾನುವಾರ ಬಾಗಿನ ಅರ್ಪಿಸಿದರು   

ಶಿಗ್ಗಾವಿ: ‘ನದಿ ಜೋಡಣೆ ಯೋಜನೆ ಹಿಂದಿನ ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ ಈಗಿನ ಸರ್ಕಾರ ತಾವೇ ಹೊಸ ಯೋಜನೆ ರೂಪಿಸಿರುವಂತೆ ಪ್ರಚಾರ ಮಾಡು ತ್ತಿದೆ’ ಎಂದು  ಜಲ ಸಂಪನ್ಮೂಲ ಮಾಜಿ ಸಚಿವ, ಶಾಸಕ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಪಟ್ಟಣದ ಐತಿಹಾಸಿಕ ನಾಗನೂರ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿದ ನಂತರ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು. ಇದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹುಟ್ಟು ಹಾಕಿದ ಯೋಜನೆ ಯಲ್ಲ. ಹಲವಾರು ವರ್ಷದ ಹಿಂದೆ ಈ ಕುರಿತು ಎನ್‌ಡಬ್ಲುಡಿಎದಲ್ಲಿ ಪ್ರಸ್ತಾವವಿದೆ.ಆದರೆ ಕಾನೂನು ಸಚಿವರು ಪ್ರಚಾರಕ್ಕಾಗಿ ಹೊಸ ಯೋಜನೆ ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂದರು.

ಕೃಷ್ಣ, ಗೋದಾವರಿ. ಮಹಾನದಿ ಮತ್ತು ಕಾವೇರಿ ದಕ್ಷಣ ರಾಜ್ಯಗಳ ನದಿ ಜೋಡಣೆ ಯೋಜನೆಯನ್ನು ಅನೇಕ ವರ್ಷದ ಹಿಂದೆ ರೂಪಿಸಲಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕದ ಪಾಲು ೧೨೬ ಟಿಎಂಸಿ ಇತ್ತು. ಆದರೆ ಪರಿಷ್ಕೃತ ಯೋಜನೆಯಲ್ಲಿ ಅದನ್ನು ಕೇವಲ ೧೬ ಟಿಎಂಸಿ ಅಡಿಗೆ ಇಳಿಸಲಾಗಿತ್ತು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿ, ತಾವು ನೀರಾವರಿ ಸಚಿವರಿದ್ದ ಸಂದರ್ಭದಲ್ಲಿ ಆಗಿನ ಕೇಂದ್ರ ನೀರಾವರಿ ಸಚಿವರು ಸೇರಿ ಎನ್‌ಡಬ್ಲುಡಿಎಗೆ ಸುದಿರ್ಘವಾಗಿ ಪತ್ರ ಬರೆದು ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿದ್ದಲ್ಲದೆ, ರಾಜ್ಯದ ಪರವಾಗಿ ಸಮರ್ಪಕವಾಗಿ ವಾದ ಮಂಡಿಸಲಾಗಿತ್ತು ಎಂದರು.

ನದಿ ಜೋಡಣೆ ಯೋಜನೆ ಅಂತರಾಜ್ಯಗಳ ಯೋಜನೆ ಎಂದು ಪರಿಗಣಿಸಿ, ಸರ್ವರೊಂದಿಗೆ ಚರ್ಚೆಸಿ ಎಲ್ಲರ ಅಭಿಪ್ರಾಯ ಪಡೆದುಕೊಳ್ಳಬೇಕು. ಎನ್‌ಡಬ್ಲುಡಿಎ ಮುಂದೆ ಆತುರದಲ್ಲಿ ತಮ್ಮ ಅವೈಜ್ಞಾನಿಕ ಅಭಿಪ್ರಾಯವನ್ನು ಮಂಡಿಸಿದ್ದಾದಲ್ಲಿ ರಾಜ್ಯಕ್ಕೆ ಮಾರಕವಾಗಲಿದೆ. ಅವೈಜ್ಞಾನಿಕ ಅಭಿಪ್ರಾಯದೊಂದಿಗೆ ಕಾನೂನು ಸಚಿವರು ತಮಿಳುನಾಡು, ಮಹಾರಾಷ್ಟ್ರ ರಾಜ್ಯಕ್ಕೆ ಹೆಚ್ಚಿನ ಲಾಭ ಮಾಡಿಕೊಡಲು ಹೊರಟಿದ್ದಾರೆ ಎಂದರು.

ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.