ADVERTISEMENT

4ನೇ ಹಂತದ ಪರಿಹಾರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 9:17 IST
Last Updated 14 ಮೇ 2017, 9:17 IST

ಹಾನಗಲ್: ‘ವಿವಿಧ ಕಾರಣಗಳಿಂದ ವಿಳಂಭವಾಗಿದ್ದ 2015–16 ನೇ ಸಾಲಿನ ಬೆಳೆವಿಮೆ ಪರಿಹಾರದ ಮೊತ್ತವು 1,801 ಫಲಾನುಭವಿ ರೈತರಿಗೆ ಕೆಸಿಸಿ ಬ್ಯಾಂಕ್‌ಗೆ ಬಿಡುಗಡೆಯಾಗಿದ್ದು, ಶೀಘ್ರವೇ ವಿತರಣೆ ಕಾರ್ಯ ಆರಂಭಗೊಳ್ಳಲಿದೆ’ ಎಂದು ತಹಶೀಲ್ದಾರ್‌ ಶಕುಂತಲಾ ಚೌಗಲಾ ತಿಳಿಸಿದರು.

‘ವಿಮಾ ಕಂತು ದ್ವಿಗುಣ ಮತ್ತಿತರ ತಾಂತ್ರಿಕ ಅಡಚಣೆಗಳಿಂದ ಕಳೆದ ಸಾಲಿನ ಬೆಳೆವಿಮೆ ಪರಿಹಾರದ ಮೊತ್ತವು ಕೆಲವು ರೈತರ ಖಾತೆಗೆ ಜಮೆ ಆಗಿರಲಿಲ್ಲ. ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡ ಹಿನ್ನೆಲೆಯಲ್ಲಿ ಕೆಸಿಸಿ ಬ್ಯಾಂಕ್‌ ಅಡಿಯಲ್ಲಿನ ಎಲ್ಲ ಫಲಾನುಭವಿ ರೈತರಿಗೆ ಪರಿಹಾರ ಮಂಜೂರಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಇನ್ನುಳಿದ 533 ಫಲಾನುಭವಿ ರೈತರಿಗೆ ತಾಲ್ಲೂಕಿನ 3 ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಬೆಳೆವಿಮೆ ಪರಿಹಾರದ ಮೊತ್ತ ಬರಬೇಕಿದೆ. ಒಂದು ವಾರದ ಒಳಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಿಮೆ ಪರಿಹಾರ ಬಿಡುಗಡೆ ಆಗಲಿದೆ. ರೈತರು ಆತಂಕ ಪಡಬೇಕಾಗಿಲ್ಲ’ ಎಂದು ಅವರು ಭರವಸೆ ನೀಡಿದರು.

ADVERTISEMENT

‘ಈ ಸಾಲಿನ ಬೆಳೆವಿಮೆ ಪರಿಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಹೀಗಾಗಿ 2016–17 ನೇ ಸಾಲಿನ ಬೆಳೆವಿಮೆಯ ಪರಿಹಾರ ಮೊತ್ತವು ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಬೆಳೆಹಾನಿ ಪರಿಹಾರ ವಿತರಣೆಯಾದ ರೀತಿಯಲ್ಲಿಯೇ ಈ ಬಾರಿ ಬೆಳೆ ವಿಮೆ ಪರಿಹಾರ ವಿತರಣೆಯಾಗುತ್ತದೆ’ ಎಂದರು.

ಬೆಳೆಹಾನಿ ಪರಿಹಾರ: ‘ಜಿಲ್ಲೆಯಲ್ಲಿಯೇ ಅಧಿಕ ಪ್ರಮಾಣದಲ್ಲಿ ತಾಲ್ಲೂಕಿಗೆ ಬೆಳೆಹಾನಿ ಪರಿಹಾರದ ಮೊತ್ತ ಸಿಕ್ಕಿದೆ. 2016–17ನೇ ಸಾಲಿನ ಬೆಳೆಹಾನಿ ಪರಿಹಾರವು ಮೂರು ಹಂತದಲ್ಲಿ ಈತನಕ ತಾಲ್ಲೂಕಿನ ರೈತರಿಗೆ ಒಟ್ಟು ₹11.80 ಕೋಟಿ ಸಿಕ್ಕಿದೆ’ ಎಂದು ಅವರು ವಿವರಿಸಿದರು.

‘ಮೊದಲ ಹಂತದಲ್ಲಿ 9,501 ರೈತರಿಗೆ ₹6.38 ಕೋಟಿ, ಎರಡನೇ ಹಂತದಲ್ಲಿ 2,737 ರೈತರಿಗೆ ₹1.85 ಕೋಟಿ, ಮೂರನೇ ಹಂತದಲ್ಲಿ 4,499 ರೈತರಿಗೆ ₹3.57 ಕೋಟಿ ಪರಿಹಾರ ಸಿಕ್ಕಿದೆ. ಈ ವಾರದ ಒಳಗಾಗಿನಾಲ್ಕನೇ ಹಂತದ ಬೆಳೆಹಾನಿ ಪರಿಹಾರ ರೈತರ ಖಾತೆಗೆ ನೇರವಾಗಿ ಜಮೆ ಯಾಗಲಿದೆ’ ಎಂದು ಶಕುಂತಲಾ ಚೌಗಲಾ ತಿಳಿಸಿದರು.

ಬೆಳೆ ವಿಮೆ: 2015–16 ನೇ ಸಾಲಿನಲ್ಲಿ 17,486 ರೈತರಿಗೆ ಬೆಳೆವಿಮೆ ಪರಿಹಾರ ಬರಬೇಕಾಗಿತ್ತು. ಈ ಪೈಕಿ ಈಗಾಗಲೇ 16953 ರೈತರಿಗೆ ವಿಮಾ ಮೊತ್ತ ಧಕ್ಕಿದಂತಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ 533 ರೈತರಿಗೆ ಮಾತ್ರ ವಿಮಾ ಪರಿಹಾರ ಬರಬೇಕಾಗಿದೆ ಕೆಸಿಸಿ ಬ್ಯಾಂಕ್‌ನಲ್ಲಿದ್ದ ಎಲ್ಲ 1801 ರೈತರಿಗೆ ಬೆಳೆವಿಮೆ ಪರಿಹಾರ ಬಿಡುಗಡೆ ಆಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.