ADVERTISEMENT

ಬೇಸಿಗೆ ಮೊದಲೇ ನೀರಿಗೆ ಹಾಹಾಕಾರ

ಎರಡು ದಶಕ ಕಳೆದರೂ ಎಚ್ಚೆತ್ತುಕೊಳ್ಳದ ಆಡಳಿತ, ಕಾಣದ ಶಾಶ್ವತ ಪರಿಹಾರ

ಹರ್ಷವರ್ಧನ ಪಿ.ಆರ್.
Published 15 ಜನವರಿ 2018, 11:00 IST
Last Updated 15 ಜನವರಿ 2018, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಮಕರ ಸಂಕ್ರಾಂತಿ ಬಂದಿದೆ. ಬೇಸಿಗೆ ಇನ್ನೂ ಆರಂಭಗೊಂಡಿಲ್ಲ, ಆದರೆ, ಜಿಲ್ಲಾ ಕೇಂದ್ರವಾದ ನಗರದಲ್ಲಿ ನೀರಿನ ಹಾಹಾಕಾರ ಈಗಲೇ ಹೆಚ್ಚಿದೆ. ಹೊಸ ವರ್ಷದ ಮೊದಲೆರಡು ವಾರಗಳಲ್ಲೇ ಜನತೆಗೆ ನೀರಿಲ್ಲದಂತಾಗಿದೆ. ಆದರೆ, ಪ್ರತಿ ವರ್ಷ ಮರುಕಳಿಸುವ ಗೋಳನ್ನು ಕೇಳುವವರೇ ಇಲ್ಲ.

ಕಳೆದೆರಡು ವಾರ ನಗರದಲ್ಲಿ ನದಿ ನೀರಿನ ಪೂರೈಕೆ ವ್ಯತ್ಯಯಗೊಂಡಿದೆ. ಹೊಸ ವರ್ಷ, ಮಕರ ಸಂಕ್ರಾಂತಿ, ಪೂರ್ವ ಸಿದ್ಧತಾ ಪರೀಕ್ಷೆಗಳು ಮತ್ತಿತರ ವಿಚಾರಗಳಲ್ಲಿ ಮುಳುಗಿದ ಜನತೆಗೆ ನೀರಿನ ಸಮಸ್ಯೆ ಇನ್ನಷ್ಟು ಬಾಧಿಸಿದೆ.

‘ಇಲ್ಲಿ 15 ದಿನಕ್ಕೊಮ್ಮೆ ನದಿ ನೀರು ಬಿಟ್ಟರೆಯೇ ಹಬ್ಬ. ಈ ಬಾರಿ ಡಿಸೆಂಬರ್ ಕೊನೆಯ ವಾರದ ಬಳಿಕ ನೀರು ಬಿಟ್ಟಿಲ್ಲ. ಕೊಳವೆಬಾವಿ ಸಂಪರ್ಕ ಇದ್ದಲ್ಲಿ ಮಾತ್ರ ನೀರು ಲಭ್ಯವಿದೆ. ಉಳಿದೆಡೆ, ಜನರ ಪಾಡು ಹೇಳ ತೀರದು’ ಎಂದು ನಾಗೇಂದ್ರನಮಟ್ಟಿಯ ನೂರ್‌ಜಹಾನ್‌ ಗಣಜೂರ, ದುರ್ಗವ್ವ ತಗಡೂರ, ಮೆಹರ್‌ಬಾನು ಚೌಪದಾರ್ ದೂರಿದರು. .

ADVERTISEMENT

‘ನದಿಯಲ್ಲಿ ನೀರಿಲ್ಲ, ನದಿಯಲ್ಲಿ ನೀರಿದ್ದರೆ ಪಂಪ್‌ ದುರಸ್ತಿ, ಎರಡೂ ಸರಿಯಿದ್ದರೆ ಟಿ.ಸಿ. ಕೆಡುತ್ತದೆ, ಎಲ್ಲವೂ ದುರಸ್ತಿಯಾದರೆ ಪೈಪ್ ಒಡೆಯುತ್ತದೆ, ಅದೂ ಸರಿಯಾದರೆ ವಾಲ್ವ್‌ ಲೀಕೇಜ್, ಇಲ್ಲ ಆಲಂ –ಕ್ಲೋರಿನ್ ಖಾಲಿ... ಹೀಗೆ ವರ್ಷಪೂರ್ತಿ ನಗರಸಭೆಯು ಕಾರಣ ನೀಡುವುದನ್ನು ಬಿಟ್ಟರೆ, ನೀರು ಕೊಡುವುದೇ ಅಪ ರೂಪ’ ಎಂದು ಹಾವೇರಿ ಸುಧಾರಣಾ ಸಮಿತಿ ಶಿವಾನಂದ ಆರೋಪಿಸುತ್ತಾರೆ.

‘ಕಳೆದ ಹತ್ತು ವರ್ಷಗಳಲ್ಲಿ ಕುಡಿಯುವ ನೀರಿನ ಸರಬರಾಜು ದುರಸ್ತಿಗೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

‘ಸತತ ಬರದ ಕಾರಣ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಅವಧಿಗೂ ಮೊದಲೇ ಕಡಿಮೆಯಾಗಿದೆ. ಕೆಂಚಾರಗಟ್ಟಿಯಲ್ಲಿರುವ ಜಾಕ್‌ವೆಲ್‌ನ ಇನ್‌ಟೇಕ್ ವಾಲ್‌ಗೆ ನೀರು ಬರುತ್ತಿರಲಿಲ್ಲ. ಇದರಿಂದ ಸಮಸ್ಯೆ ಉಂಟಾಯಿತು. ಅದಕ್ಕಾಗಿ ಪರಿಹಾರ ಕ್ರಮ ಕೈಗೊಂಡಿದ್ದೇವೆ’ ಎಂದು ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ ತಿಳಿಸಿದರು.

‘ಕೆಂಚಾರಗಟ್ಟಿಯಲ್ಲಿ ಮೂರು ಹೊಸ ಪಂಪ್ ಹಾಗೂ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಆ ಮೂಲಕ ಈ ಹಿಂದಿನ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸದ್ಯ ನೀರಿನ ಬಹುತೇಕ ಸಮಸ್ಯೆ ಇತ್ಯರ್ಥಗೊಳ್ಳಲಿದೆ. ಆದರೆ, ಪೈಪ್‌ಲೈನ್ ಒಡೆಯುವ ದುಷ್ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನದಿ ತೀರದಲ್ಲಿರುವ ಸಾವಿರಾರು ಖಾಸಗಿ ಪಂಪ್‌ ಸೆಟ್‌ಗಳನ್ನು ತೆರವುಗೊಳಿಸಬೇಕು ಹಾಗೂ ಭದ್ರಾ ಜಲಾಶಯದಿಂದ ನೀರು ಬಿಡಬೇಕು’ ಎಂದು ಒತ್ತಾಯಿಸಿದರು.

ತುಂಗಭದ್ರಾ ನದಿಗೆ ಕೆಂಚಾರಗಟ್ಟಿಯಲ್ಲಿ ಮರಳಿನ ತಡೆಗೋಡೆ ನಿರ್ಮಿಸುವ ಮೂಲಕ ನಗರಕ್ಕೆ ಬೇಸಿಗೆಯಲ್ಲಿ ನೀರು ಪೂರೈಸಲಾಗುತ್ತದೆ. ಈ ಬಾರಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೇ, ಮರಳಿನ ಚೀಲ ಹಾಕಿ ತಡೆಗೋಡೆಯನ್ನು ನಿರ್ಮಿಸಿಲ್ಲ. ತೇಪೆ ಕಾರ್ಯ ನಡೆಸಿದ್ದಾರೆ. ಹೀಗಾಗಿ ನೀರು ಸಮರ್ಪಕವಾಗಿ ಸಂಗ್ರಹಗೊಂಡಿಲ್ಲ ಎಂದು ಜೆಡಿಎಸ್ ಡಾ.ಸಂಜಯ ಡಾಂಗೆ ದೂರುತ್ತಾರೆ.

ಶಾಶ್ವತ ಪರಿಹಾರಕ್ಕೆ ಆಗ್ರಹ: ಕೆಂಚಾರಗಟ್ಟಿಯ ಜಾಕ್‌ವೆಲ್ ದಡಕ್ಕೆ ಸಮೀಪವಿದ್ದು, ಅವೈಜ್ಞಾನಿಕವಾಗಿದೆ. ಇದನ್ನು ಸರಿಪಡಿಸಬೇಕು. ಹಾವನೂರ ಬಳಿ ಶಾಶ್ವತ ಬಾಂದಾರು ನಿರ್ಮಿಸಬೇಕು ಎಂದು ತಜ್ಞರು ಆಗ್ರಹಿಸುತ್ತಾರೆ.
***
ಹೆಗ್ಗೇರಿ ತುಂಬಿಸಿ

ಹೆಗ್ಗೇರಿ ಕೆರೆ ತುಂಬಿದರೆ ನಗರದ ಕೊಳವೆಬಾವಿಗಳ ಅಂತರ್ಜಲ ವೃದ್ಧಿಸಲಿದೆ. ಸುತ್ತಲ ಕಬ್ಬೂರು, ಕೆರಿಮತ್ತಿಹಳ್ಳಿ, ಯತ್ನಳ್ಳಿ, ಆಲದಕಟ್ಟೆ, ಹೊಸಳ್ಳಿ, ಗೌರಾಪುರ, ಚಿಕ್ಕಲಿಂಗದಹಳ್ಳಿ ಮತ್ತಿತರ ಹಳ್ಳಿಗಳ ನೀರಿನ ಸಮಸ್ಯೆ ನೀಗಲಿದೆ. ಹೆಗ್ಗೇರಿ ಕೆರೆಯು 682 ಎಕರೆ ವಿಸ್ತಾರವಿದ್ದು, 12 ಅಡಿ ಆಳವಿದೆ. ಸುಮಾರು 0.2 ಟಿ.ಎಂ.ಸಿ. ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಕೆರೆಗೆ ತುಂಗಾ ಮೇಲ್ದಂಡೆ ಕಾಲುವೆ ಮೂಲಕ ನೀರು ಹರಿಸುವ ಕಾಮಗಾರಿ ಚಾಲನೆಯಲ್ಲಿದೆ.
***
ಕೆಂಚಾರಗಟ್ಟಿಯಲ್ಲಿ ಪಂಪ್‌ಸೆಟ್‌ ಕೆಟ್ಟು ಹೋಗಿತ್ತು. ಸೋಮವಾರ ನೀರು ಪೂರೈಕೆ ಆರಂಭಗೊಳ್ಳಲಿದೆ
     -ಪಾರ್ವತೆಮ್ಮ, ಹಲಗಣ್ಣನವರ ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.