ADVERTISEMENT

ಅಂಬೇಡ್ಕರ್ ಪ್ರತಿಮೆ ಆತ್ಮಾಭಿಮಾನದ ಸಂಕೇತ

‘ಬುದ್ಧ ಮತ್ತು ಆತನ ಧಮ್ಮ’ ವಿಚಾರ ಸಂಕಿರಣದಲ್ಲಿ ಹಿರಿಯ ವಿದ್ವಾಂಸ ಪ್ರೊ. ಮೀರಾ ಸಾಬಿಹಳ್ಳಿ ಶಿವಣ್ಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:11 IST
Last Updated 19 ಏಪ್ರಿಲ್ 2017, 4:11 IST
ಅಂಬೇಡ್ಕರ್ ಪ್ರತಿಮೆ ಆತ್ಮಾಭಿಮಾನದ ಸಂಕೇತ
ಅಂಬೇಡ್ಕರ್ ಪ್ರತಿಮೆ ಆತ್ಮಾಭಿಮಾನದ ಸಂಕೇತ   
ಕಲಬುರ್ಗಿ: ‘ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳು ದಲಿತರ ಆತ್ಮಾಭಿಮಾನದ ಸಂಕೇತಗಳಾಗಿವೆ’ ಎಂದು ಹಿರಿಯ ವಿದ್ವಾಂಸ ಪ್ರೊ.ಮೀರಾ ಸಾಬಿಹಳ್ಳಿ ಶಿವಣ್ಣ ಹೇಳಿದರು.
 
ಇಲ್ಲಿನ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಪಾಲಿ ಇನ್‌ಸ್ಟಿಟ್ಯೂಟ್, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ‘ಬುದ್ಧ ಮತ್ತು ಆತನ ಧಮ್ಮ’ ಕೃತಿ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
 
‘ದಲಿತರ ಕುರಿತು ಗಾಂಧೀಜಿ ಬಳಸಿದ್ದ ಹರಿಜನ ಪದವನ್ನು ಅಂಬೇಡ್ಕರ್ ತೀವ್ರವಾಗಿ ವಿರೋಧಿಸಿದ್ದರು. ದಲಿತರಿಗೆ ಸ್ವಾಭಿಮಾನ ಅತ್ಯಗತ್ಯ. ಸ್ವಾಭಿಮಾನ ಕಳೆದುಕೊಂಡು ಏನನ್ನೂ ಗಳಿಸಬಾರದು ಎಂಬುದು ಅಂಬೇಡ್ಕರ್ ಪ್ರತಿಪಾದನೆಯಾಗಿತ್ತು’ ಎಂದು ಹೇಳಿದರು.
 
‘ಅವಮಾನ ದೊಡ್ಡ ಕಾಯಿಲೆ. ದಲಿತ ಎಂಬ ಕಾರಣಕ್ಕೆ ಸಮಾಜದಿಂದ ತಿರಸ್ಕಾರಕ್ಕೆ ಒಳಗಾಗಿದ್ದ ಅಂಬೇಡ್ಕರ್, ಅದರಿಂದ ಕುಸಿದು ಹೋಗಿದ್ದರು. ಈ ಕಾರಣಕ್ಕಾಗಿಯೇ ಅವರು ಹಿಂದೂವಾಗಿ ಹುಟ್ಟಿ, ಹಿಂದೂವಾಗಿ ಸಾಯಲಾರೆ ಎಂದು ಹೇಳಿ, ಬೌದ್ಧ ಧರ್ಮ ಸ್ವೀಕರಿಸಿದ್ದರು’ ಎಂದರು.
 
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಮಾತನಾಡಿ, ‘ಪಾಲಿ ಅಧ್ಯಯನಕ್ಕೆ ರಾಜ್ಯ ಸರ್ಕಾರ ₹1 ಕೋಟಿ ಅನುದಾನ ಒದಗಿಸಿದೆ. ಕಟ್ಟಡ ನಿರ್ಮಾಣ, ಸಂಶೋಧನಾ ಚಟುವಟಿಕೆಗಳಿಗೆ ಈ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.
 
‘ನಮ್ಮ ವಿಶ್ವವಿದ್ಯಾಲಯದಿಂದ ಅಂಬೇಡ್ಕರ್ ವಾಚಿಕೆಯನ್ನು ಹೊರತರಲಾಗಿದೆ. ಅದನ್ನು ಇಂಗ್ಲಿಷ್, ಹಿಂದಿ, ತೆಲುಗು ಭಾಷೆಗೆ ಅನುವಾದಿಸಲು ತೀರ್ಮಾನಿಸಲಾಗಿದೆ’ ಎಂದರು. ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿಪೋತೆ ಪ್ರಾಸ್ತಾವಿಕವಾಗಿ ಮಾತನಾಡಿದರು.
 
ಪಾಲಿ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ರಾಹುಲ್ ಖರ್ಗೆ, ಸಿಂಡಿಕೇಟ್ ಸದಸ್ಯ ಈಶ್ವರ ಇಂಗನ್, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ರಾಜನಾಳಕರ್ ಲಕ್ಷ್ಮಣ, ವಿದ್ಯಾ ವಿಷಯಕ್ ಪರಿಷತ್ ಸದಸ್ಯ ಸತೀಶ ಅಳ್ಳೊಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.