ADVERTISEMENT

ಅಲ್ಪಸಂಖ್ಯಾತರ ಆಯೋಗಕ್ಕೆ ಮನವಿಗಳ ರವಾನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 9:08 IST
Last Updated 17 ಡಿಸೆಂಬರ್ 2017, 9:08 IST
ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ಶನಿವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಉಡುಗೊರೆ ನೀಡಿದ ಬೆಳ್ಳಿ ಖಡ್ಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದರ್ಶಿಸಿದರು
ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ಶನಿವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಉಡುಗೊರೆ ನೀಡಿದ ಬೆಳ್ಳಿ ಖಡ್ಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದರ್ಶಿಸಿದರು   

ಕಲಬುರ್ಗಿ: ‘ಪ್ರತ್ಯೇಕ ಧರ್ಮದ ಮಾನ್ಯತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಐದು ಮನವಿಗಳನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ಸಲ್ಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಮಾತೆ ಮಹಾದೇವಿ, ಪಂಚಪೀಠ, ವಿರಕ್ತ ಮಠಾಧೀಶರು, ವೀರಶೈವ ಮಹಾಸಭಾ ಹಾಗೂ ವೀರಶೈವ ಒಕ್ಕೂಟಗಳು ಪ್ರತ್ಯೇಕವಾಗಿ ಮನವಿ ಸಲ್ಲಿಸಿವೆ. ಎಲ್ಲರೂ ಒಟ್ಟಾಗಿ ಬರುವಂತೆ ಮನವಿ ಮಾಡಿದ್ದೆ. ಆದರೆ ಇದುವರೆಗೂ ಸಹಮತ ಮೂಡಿಲ್ಲ. ಹೀಗಾಗಿ ಎಲ್ಲ ಮನವಿಗಳನ್ನು ಆಯೋಗಕ್ಕೆ ಸಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ಜಿಲ್ಲೆಯ ಅಫಜಲಪುರದಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಅಲ್ಪಸಂಖ್ಯಾತರ ಆಯೋಗದಲ್ಲಿ ತಜ್ಞರು ಇದ್ದಾರೆ. ಸಂವಿಧಾನದ ನೀತಿಗಳಡಿ ಅಲ್ಲಿ ತೀರ್ಮಾನ ಆಗುತ್ತದೆ. ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದು ಆಯೋಗಕ್ಕೇ ಬಿಟ್ಟ ವಿಚಾರ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಬಿ.ಎಸ್‌.ಯಡಿಯೂರಪ್ಪ ಮಹಾ ಸುಳ್ಳುಗಾರ, ಕೇಂದ್ರ ಸಚಿವ ಅನಂತಕುಮಾರ್‌ ವಿದೂಷಕ, ಅನಂತಕುಮಾರ್ ಹೆಗಡೆ ಸಚಿವರಾಗಲು ನಾಲಾಯಕ್’ ಎಂದು ವಾಗ್ದಾಳಿ ನಡೆಸಿದರು.

‘ಯಡಿಯೂರಪ್ಪ ಅವರಂಥ ಸುಳ್ಳುಗಾರನನ್ನು ನಾನು ಕಂಡಿಲ್ಲ. ಬಾಯಿ ಬಿಟ್ಟರೆ ಬರೀ ಸುಳ್ಳು. ಪುಂಗಿ ಊದಿಕೊಂಡು ತಿರುಗಾಡುತ್ತಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್‌ ವಿದೂಷಕನಂತೆ ಮಾತನಾಡುತ್ತಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ಅವರ ಕೊಡುಗೆ ಶೂನ್ಯ’ ಎಂದು ಕಿಡಿ ಕಾರಿದರು.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಂಕಿ ಹಂಚಿದ್ದೇ ಅನಂತಕುಮಾರ್ ಹೆಗಡೆ. ತಪರಾಕಿ ಸಾಕಾ, ಬೇಕಾ ಎನ್ನುತ್ತಾರೆ. ಒಬ್ಬ ಸಚಿವರ ಬಾಯಲ್ಲಿ ಇಂಥ ಮಾತು ಬರಬಾರದು. ಅವರ ಮಾತು ಕೇಳಿದರೆ ಎಂಥ ನಾಲಾಯಕ್ ಎಂದು ಗೊತ್ತಾಗುತ್ತದೆ’ ಎಂದು ಟೀಕಿಸಿದರು.

ಚಿನ್ನದ ಕಿರೀಟ ಉಡುಗೊರೆ

ಅಫಜಲಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಿನ್ನದ ಕಿರೀಟ, ಬೆಳ್ಳಿ ಖಡ್ಗ ಹಾಗೂ ಬೆಳ್ಳಿ ಹಾರವನ್ನು ಉಡುಗೊರೆಯಾಗಿ ನೀಡಿದರು. ಚಿನ್ನದ ಕೀರಿಟವನ್ನು ಸಿದ್ದರಾಮಯ್ಯ ಅವರು ಖುಷಿಯಿಂದಲೇ ಸ್ವೀಕರಿಸಿದರು.

ಕಾಂಗ್ರೆಸ್‌ನಲ್ಲೇ ಇರುತ್ತೇನೆ: ಮಾಲೀಕಯ್ಯ

‘ನಾನು ಕಾಂಗ್ರೆಸ್‌ ಪಕ್ಷ ತೊರೆಯುವುದಿಲ್ಲ. ಕೊನೆವರೆಗೂ ಕಾಂಗ್ರೆಸ್ಸ್‌‌ನಲ್ಲೇ ಇರುತ್ತೇನೆ. ಸಿದ್ದರಾಮಯ್ಯ, ಎ.ಬಿ.ಮಾಲಕರಡ್ಡಿ ಮತ್ತು ನಾನು ಒಟ್ಟಿಗೆ ರಾಜಕೀಯ ನಿವೃತ್ತಿ ಪಡೆಯುತ್ತೇವೆ’ ಎಂದು ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.

‘ಆರು ಬಾರಿ ಶಾಸಕನಾದರೂ ಸಚಿವ ಸ್ಥಾನ ದೊರೆಯಲಿಲ್ಲ. ಈ ಬಗ್ಗೆ ಅಸಮಧಾನ ಇದ್ದದ್ದು ನಿಜ. ಈಗ ಎಲ್ಲವೂ ಶಮನವಾಗಿವೆ. ಸಾಮೂಹಿಕ ನಾಯಕತ್ವದಲ್ಲಿಯೇ ವಿಧಾನಸಭಾ ಚುನಾವಣೆ ಎದುರಿಸುತ್ತೇವೆ’ ಎಂದು ಹೇಳುವ ಮೂಲಕ ಕಾಂಗ್ರೆಸ್‌ ತೊರೆಯುವ ವದಂತಿಗಳಿಗೆ ಅವರು ಸಮಾರಂಭದಲ್ಲಿ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.