ADVERTISEMENT

ಆಶಾ ಸಿಬ್ಬಂದಿಗೆ ಸೇವಾ ನಿಯಮ ರೂಪಿಸಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 9:01 IST
Last Updated 8 ಏಪ್ರಿಲ್ 2017, 9:01 IST

ಕಲಬುರ್ಗಿ: ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ‘ಆಶಾ ಕಾರ್ಯಕರ್ತೆಯರನ್ನು’ ಸರ್ಕಾರಿ ನೌಕರರೆಂದು ಪರಿಗಣಿಸಿ, ಸೇವಾ ನಿಯಮದಂತೆ ನಿಗದಿತ ವೇತನ ನೀಡಬೇಕು ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಜಾರಿಗೆ ತಂದಿರುವ ‘ಆಶಾ ಸಾಫ್ಟ್’ನ್ನು ರದ್ದುಗೊಳಿಸಿ ಕಾರ್ಮಿಕ ಇಲಾಖೆ ಕಾಯ್ದೆ ಪ್ರಕಾರ ಪ್ರತಿ ಕಾರ್ಯಕರ್ತೆಗೆ ₹10 ರಿಂದ 11 ಸಾವಿರ ಸಂಬಳ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಶಾಕಾರ್ಯಕರ್ತೆಯರಿಗೆ ₹1 ಸಾವಿರ ಗೌರವಧನ ನೀಡುತ್ತಿದೆ. ಇದು ಕಾರ್ಯಕರ್ತೆಯರ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ ಜೊತೆಗೆ ಗೌರವಧನ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಹೀಗಾಗಿ ಕಾರ್ಯಕರ್ತೆಯರಿಗೆ ಅಗತ್ಯ ಸೇವಾ ನಿಯಮಗಳನ್ನು ರೂಪಿಸುವಂತೆ ಆಗ್ರಹಿಸಿದರು.

ADVERTISEMENT

2009 ರಲ್ಲಿ ನಡೆದ ಕಾರ್ಯಕರ್ತೆಯರ ಬೃಹತ್‌ ಚಳವಳಿಯಲ್ಲಿ ಆರೋಗ್ಯ, ವಸತಿ ಸೌಲಭ್ಯ, ಉಚಿತ ಚಿಕಿತ್ಸೆ ಸೇರಿದಂತೆ ಅಗತ್ಯ ಸೌಲಭ್ಯಗಳ ಬೇಡಿಕೆಗೆ ಕೇಂದ್ರ ಸರ್ಕಾರ ಇದುವರೆಗೂ ಸ್ಪಂಧಿಸದೆ ಅನ್ಯಾಯ ಮಾಡುತ್ತಿದೆ. ಆಶಾ  ಕಾರ್ಯಕರ್ತೆಯರ ನಿವೃತ್ತಿ ನಂತರದಲ್ಲಿ ಅವರಿಗೆ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಆರೋಗ್ಯ ಕಾರ್ಯಕರ್ತೆಯರು ಎಂದು ಕರೆಯಿಸಿಕೊಳ್ಳುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು, ಕಾರ್ಮಿಕರೆಂದು ಗುರುತಿಸಲು ಇದುವರೆಗು ಯಾವ ಸರ್ಕಾರಗಳು ಒಪ್ಪುತ್ತಿಲ್ಲ. ಸರ್ಕಾರಿ ನೌಕರರು ಅಥವಾ ಕಾರ್ಮಿಕರಿಗೆ ಸಿಗುತ್ತಿರುವ ಸೌಕರ್ಯಗಳು ಮತ್ತು ಕನಿಷ್ಠ ಹಕ್ಕುಗಳಿಂದ ವಂಚಿಸಿ ಪುಡಿಗಾಸಿನ ವೇತನ ನೀಡಿ ಗರಿಷ್ಠ ಅವಧಿವರೆಗೆ ಕೆಲಸ ಪಡೆಯತ್ತಿದ್ದಾರೆ. ಇದು ಅತ್ಯಂತ ಖಂಡನೀಯವಾದ ಕ್ರಮವಾಗಿದೆ ಎಂದರು.

ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ , ಜಿಲ್ಲಾ ಅಧ್ಯಕ್ಷ ಎಸ್.ಎಂ.ಶರ್ಮಾ, ಜಿಲ್ಲಾ ಕಾರ್ಯದರ್ಶಿ ಚಂದಮ್ಮ, ಉಪಾಧ್ಯಕ್ಷೆ ಶಿವಲಿಂಗಮ್ಮ , ಚಿಂಚೋಳಿ ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ನಾಗಮ್ಮ, ಲಕ್ಷ್ಮಿ, ಮಂಗಮ್ಮ, ಲಕ್ಷ್ಮಿ ಸುಲೇಪೇಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.