ADVERTISEMENT

ಎಚ್‌ಕೆಇ ಸಂಸ್ಥೆಯಲ್ಲಿ ದುರಾಡಳಿತ, ಸರ್ವಾಧಿಕಾರಿ ಧೋರಣೆ

ಬಸವರಾಜ ಭೀಮಳ್ಳಿ ವಿರುದ್ಧ ಬಿಲಗುಂದಿ ಗುಂಪು ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 10:25 IST
Last Updated 21 ಮಾರ್ಚ್ 2018, 10:25 IST
ಭೀಮಾಶಂಕರ ಚಂದ್ರಶೇಖರ ಬಿಲಗುಂದಿ
ಭೀಮಾಶಂಕರ ಚಂದ್ರಶೇಖರ ಬಿಲಗುಂದಿ   

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ಶಿಕ್ಷಣ (ಎಚ್‌ಕೆಇ) ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರು ದುರಾಡಳಿತಕ್ಕೆ ಹೆಸರಾದರೆ. ಸದಸ್ಯರ, ಪದಾಧಿಕಾರಿಗಳ ಸಲಹೆಗಳಿಗೆ ಬೆಲೆ ಕೊಡದೆ ಸಂಸ್ಥೆಯ ಏಳಿಗೆಗೆ ತೊಡಕಾಗಿದ್ದಾರೆ’ ಎಂದು ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಭೀಮಾಶಂಕರ ಚಂದ್ರಶೇಖರ ಬಿಲಗುಂದಿ ಆಪಾದಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸ್ಥೆಯಲ್ಲಿ ಪಾರದರ್ಶಕ ಆಡಳಿತ ಇಲ್ಲ. ಖರ್ಚು–ವೆಚ್ಚಗಳ ಲೆಕ್ಕ ಸರಿಯಾಗಿಲ್ಲ. ಶಿಕ್ಷಣ ಸಂಸ್ಥೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಭೀಮಳ್ಳಿ ಅವಧಿಯಲ್ಲಿ ಒಂದೇ ಒಂದು ಕೋರ್ಸ್‌ಗೆ ಅನುಮತಿ ಪಡೆಯಲು ಆಗಿಲ್ಲ’ ಎಂದರು.

’ಅನುದಾನ ಬಳಕೆ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿರಲಿಲ್ಲ. ಮನೆಯಲ್ಲಿ ಕುಳಿತಕೊಂಡೇ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ನಮ್ಮ ಗುಂಪು ಅಧಿಕಾರಕ್ಕೆ ಬಂದರೆ ಬೈಲಾ ತಿದ್ದುಪಡಿ ಮಾಡಿ ಮಹಿಳೆಯರಿಗೂ ಅವಕಾಶ ನೀಡಲಾಗುವುದು. ಸದಸ್ಯರ ಅಭ್ಯುದಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಾಗಿದೆ’ ಎಂದರು.

ಸಂಸ್ಥೆಯ ಮಾಜಿ ಅಧ್ಯಕ್ಷ ಶಶೀಲ್ ಜಿ.ನಮೋಶಿ ಮಾತನಾಡಿ, ‘ಭೀಮಳ್ಳಿಯವರು ಸಂಸ್ಥೆಯ ಹಣವನ್ನು ದೋಚಿದ್ದಾರೆ. ಸಿಬ್ಬಂದಿಗೆ ಕಿರುಕುಳ ನೀಡಿದ್ದಾರೆ. ಅವರು ಹೊರತಂದಿರುವ ಸಾಧನೆಗಳ ಪುಸ್ತಕದಲ್ಲಿ ₹16.59 ಕೋಟಿ ವೇತನ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಈ ಲೆಕ್ಕದ ಸಮರ್ಪಕ ಮಾಹಿತಿಗೆ ಸಾಮಾನ್ಯ ಸಭೆಯಲ್ಲಿಯೇ ಒತ್ತಾಯಿಸಿದ್ದೇನೆ. ಲೆಕ್ಕಪರಿಶೋಧಕರನ್ನು ನೇಮಕ ಮಾಡಿದರೆ ಸತ್ಯಾಂಶ ಹೊರಬಲಿದೆ’ ಎಂದು ಹೇಳಿದರು.

‘₹20 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮೂರು ವರ್ಷದ ಅವಧಿಯಲ್ಲಿ ಇಷ್ಟು ಮೊತ್ತದ ಯಾವುದೇ ಕಾಮಗಾರಿ ಶುರುವಾಗಿಲ್ಲ. ನಾಲ್ಕು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಲ ಪಡೆಯಲಾಗಿದೆ. ಸಲಕರಣೆಗಳ ಖರೀದಿಗೆ ₹11 ಕೋಟಿ ಮೀಸಲಿಟ್ಟಿರುವುದು ದಾರಿ ತಪ್ಪಿಸುವ ತಂತ್ರ’ ಎಂದು ಆರೋಪಿಸಿದರು.

‘ಬೆಂಗಳೂರಿನ ಶಾಲೆಯ ಕಟ್ಟಡದ ಕೆಲಸ ಸ್ಥಗಿತವಾಗಿದೆ. ಎಂಆರ್‌ಎಂಪಿಸಿ ಕಾಲೇಜಿಗೆ ಡಿಜಿಟಲ್‌ ಗ್ರಂಥಾಲಯ ಒದಗಿಸಿಲ್ಲ. ತಮ್ಮ ಅವಧಿಯಲ್ಲಿ ಟೆಕ್ಯೂಪ್‌ನಿಂದ ಬಂದ ಹಣವನ್ನೇ ಎಲ್ಲಕ್ಕೂ ಬಳಸಲಾಗಿದೆ. ಸಂಸ್ಥೆಯಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿ ಮಾಡಲಾಗಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿ, ‘ಎಚ್‌ಕೆಇ ಸಂಸ್ಥೆ ಸ್ಥಾಪನೆಯಾದಾಗ ಬೆಳಗಾವಿ, ಬಾಗಲಕೋಟೆ ಹಾಗೂ ಮೈಸೂರಿನಲ್ಲಿ ಆರಂಭವಾದ ಸಂಸ್ಥೆಗಳು ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳಾಗಿ ಹೊರಹೊಮ್ಮಿವೆ. ಇಲ್ಲಿ ಪಾರದರ್ಶಕ ಆಡಳಿತ ಇಲ್ಲ. ಭೀಮಳ್ಳಿ ಸಂಸ್ಥೆಯನ್ನು ಮೇಲೆತ್ತುವ ಪ್ರಯತ್ನ ಮಾಡಿಲ್ಲ. ಅವರ ಸಾಧನೆಗಳು ಶೂನ್ಯ’ ಎಂದು ಟೀಕಿಸಿದರು.

ಬಿಲಗುಂದಿ ಗುಂಪಿನ ಶಿವಾನಂದ ಎಸ್‌.ದೇವರಮನಿ, ಅನುರಾಧ ಎಂ.ದೇಸಾಯಿ, ನೀಲಕುಮಾರ ಮರಗೋಳ, ಗಂಗಾಧರ ಡಿ.ಎಲಿ, ಶಿವಶರಣಪ್ಪ ನಿಗ್ಗುಡಗಿ, ಸತೀಶ ಹಡಗಲಿಮಠ, ನಿತಿನ್ ಜವಳಿ, ವಿಜಯಕುಮಾರ ದೇಶಮುಖ, ವಿಶ್ವನಾಥ ರಡ್ಡಿ ಇಟಗಿ ಇದ್ದರು.

ಇವಿಎಂ ಬಳಕೆಗೆ ಮನವಿ

ಎಚ್‌ಕೆಇ ಸಂಸ್ಥೆಯ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ(ಇವಿಎಂ) ಬಳಕೆ ಮಾಡುವಂತೆ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅವರನ್ನು ಕೋರಿದ್ದೇವೆ ಎಂದು ಭೀಮಾಶಂಕರ ಬಿಲಗುಂದಿ ತಿಳಿಸಿದರು.

‘ಮತಪತ್ರದ ಜತೆಗೆ ಸದಸ್ಯತ್ವದ ಸಂಖ್ಯೆ ನಮೂದಿಸುವ ಪದ್ಧತಿ ಜಾರಿಯಲ್ಲಿದೆ. ಇದರಿಂದ ಚುನಾವಣೆ ಬಳಿಕ ಸದಸ್ಯರ ನಡುವೆ ದ್ವೇಷ ಉಂಟಾಗುತ್ತಿದೆ. ಮತಪತ್ರಗಳ ನಾಶಪಡಿಸುವುದಕ್ಕೂ ಮುನ್ನ ಅಧ್ಯಕ್ಷರಾದರಿಗೆ ಮತ ಹಾಕಿದ ಸದಸ್ಯರ ಸಂಖ್ಯೆ ಲಭಿಸುತ್ತಿದೆ. ಹೀಗಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಗಾಗಿ ಆರು ಸಲಹೆಗಳನ್ನು ನೀಡಿದ್ದೇವೆ’ ಎಂದರು.

‘ನಮ್ಮ ಸಲಹೆಗೆ ಆಯುಕ್ತರು ಸ್ಪಂದಿಸಿದ್ದಾರೆ. ಈ ಬಾರಿ ಮತಪತ್ರದ ಜತೆಗೆ ಸಂಖ್ಯೆ ನಮೂದು ಕೈಬಿಡಲಾಗುವುದು ಎಂದು ತಿಳಿಸಿದ್ದಾರೆ’ ಎಂದರು.

**

ಎಚ್‌ಕೆಇ ಸಂಸ್ಥೆಯು ಯಾವುದೇ ಅಧ್ಯಕ್ಷರ ಅವಧಿಯಲ್ಲಿ ಇಷ್ಟು ಕಳಪೆ ಸಾಧನೆ ಮಾಡಿರಲಿಲ್ಲ. ವೇತನ ಬಿಡುಗಡೆ, ಸಂಪನ್ಮೂಲ ಕ್ರೂಢೀಕರಣದಲ್ಲಿ ಭೀಮಳ್ಳಿ ವಿಫಲರಾಗಿದ್ದಾರೆ.
– ಶಶೀಲ್‌ ಜಿ ನಮೋಶಿ , ಮಾಜಿ ಅಧ್ಯಕ್ಷ, ಎಚ್‌ಕೆಇ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.