ADVERTISEMENT

ಎಸ್‌ಟಿಗೆ ಕೋಲಿ ಸಮಾಜ: ಹೋರಾಟಕ್ಕೆ ಕರೆ

ಅಫಜಲಪುರ ತಾಲ್ಲೂಕಿನ ಹವಳಗಾದಲ್ಲಿ ಕೋಲಿ ಸಮಾಜದ ಪರಿವರ್ತನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 9:10 IST
Last Updated 13 ಫೆಬ್ರುವರಿ 2017, 9:10 IST
ಅಫಜಲಪುರ ತಾಲ್ಲೂಕಿನ ಹವಳಗಾ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ನಿಜಶರಣ ಚೌಡಯ್ಯ ಜಯಂತ್ಯುತ್ಸವ ಹಾಗೂ ಕೋಲಿ ಸಮಾಜದ ಪರಿವರ್ತನಾ ಸಮಾವೇಶವನ್ನು ಗಡಿಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ಉದ್ಘಾಟಿಸಿದರು
ಅಫಜಲಪುರ ತಾಲ್ಲೂಕಿನ ಹವಳಗಾ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ನಿಜಶರಣ ಚೌಡಯ್ಯ ಜಯಂತ್ಯುತ್ಸವ ಹಾಗೂ ಕೋಲಿ ಸಮಾಜದ ಪರಿವರ್ತನಾ ಸಮಾವೇಶವನ್ನು ಗಡಿಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ಉದ್ಘಾಟಿಸಿದರು   

ಅಫಜಲಪುರ: ಶಾಸಕನಾಗಿ, ಸಚಿವನಾಗಿ ಕೋಲಿ ಸಮಾಜದ ಅಭಿವೃದ್ಧಿಗೆ ಕೆಲಸ ಸಾಕಷ್ಟು ಮಾಡಿದ್ದೇನೆ. ಎಂದಿಗೂ ಪ್ರಚಾರ ಗಿಟ್ಟಿಸಿಕೊಂಡವನಲ್ಲ. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಗಡಿಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ತಿಳಿಸಿದರು.

ತಾಲ್ಲೂಕಿನ ಹವಳಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಾಂಸ್ಕೃತಿಕ ಸೇವಾ ಸಂಘದ ಆಶ್ರಯ ದಲ್ಲಿ ಭಾನುವಾರ ಏರ್ಪಡಿಸಿದ್ದ ನಿಜಶರಣ ಚೌಡಯ್ಯನವರ ಜಯಂತ್ಯು­ತ್ಸವ ಹಾಗೂ ಕೋಲಿ ಸಮಾಜದ ಪರಿವರ್ತನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಅಧಿಕಾರ ಅವಧಿಯಲ್ಲಿ ಕೋಲಿ ಸಮಾಜದ ದೇವಸ್ಥಾನಗಳಿಗೆ ₹33 ಕೋಟಿ ನೀಡಿದ್ದೇನೆ.

ಯಾವುದೇ ಕಾಲಕ್ಕೂ ನಮ್ಮ ಜನಾಂಗಕ್ಕೆ ಅನ್ಯಾಯ ಮಾಡುವುದಿಲ್ಲ. ದಿವಂಗತ ವಿಠ್ಠಲ ಹೇರೂರ ಅವರು ಕೋಲಿ ಸಮಾಜದ ಸಂಘಟನೆಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗ ಡಕ್ಕೆ ಸೇರ್ಪಡೆ ಮಾಡುವುದು ಅವರ ಕನಸಾಗಿತ್ತು. ಈ ರಥವನ್ನು ಮುಂದೆ ಎಳೆದೊಯ್ದು ನನಸು ಮಾಡುತ್ತೇವೆ ಎಂದು ಅವರು ತಿಳಿಸಿದರು.

ಮೈಸೂರಿನ ಅಂಬೇಡ್ಕರವಾದಿ ಎನ್‌. ಮಹೇಶ ಮಾತನಾಡಿ, ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಕಡತಗಳು 15 ವರ್ಷಗ ಳಾದರೂ ಕೇಂದ್ರ ಸರ್ಕಾರಕ್ಕೆ ಕಳುಹಿ ಸಲು ಸಾಧ್ಯವಾಗಿಲ್ಲ ಇದಕ್ಕಾಗಿ ಜನಪ್ರತಿ ನಿಧಿಗಳು, ಸಮಾಜದ ಮುಖಂಡರು ಹೋರಾಟ ಮಾಡಬೇಕು. ಶೇ 85 ಬಹುಸಂಖ್ಯಾತ ಸಮುದಾಯದವರನ್ನು ಶೇ 3 ಸಮುದಾಯದವರು ಆಳುತ್ತಿ ದ್ದಾರೆ. ಕೋಲಿ ಸಮುದಾಯದವರು ಒಡೆಯರಾಗಬೇಕು. ಬೇಡುವ ಸ್ಥಳದಿಂದ ನೀಡುವ ಸ್ಥಳಕ್ಕೆ ಹೋಗಬೇಕು ಎಂದು ತಿಳಿಸಿದರು.

ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಮೈಕ್ ಮುಂದೆ ಬಂದು ಭಾಷಣ ಮಾಡಿದರೆ ಅಧಿಕಾರ ಸಿಗುವುದಿಲ್ಲ. ಸಂಘ ಪರಿವಾರದವರು ಮಾಡುವ ಸಂಘಟನೆ ನಾವು ಕಲಿತುಕೊಳ್ಳಬೇಕು. ಶೇ 3 ಸಮುದಾಯದವರು 120 ಜನ ಸಂಸದರಿದ್ದಾರೆ. ಶೇ 18– 20 ಇರುವ ಕೋಲಿ ಸಮಾಜದ ಸಮುದಾಯದವರು ಸಂಸದರಿಲ್ಲ. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು 1992 ಪ್ರಯತ್ನ ಮಾಡಲಾಗುತ್ತಿದೆ. ಸಾಧ್ಯವಾಗು ತ್ತಿಲ್ಲ ಎಂದು ಅವರು ತಿಳಿಸಿದರು.

ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಎಸ್‌.ಕೆ. ಮೇಲಕರ ಮಾತನಾಡಿ, ರಾಜ್ಯದಲ್ಲಿ 60 ಲಕ್ಷ ಕೋಲಿ ಸಮಾಜದವರು ಇದ್ದಾರೆ. ಆದರೆ ಹೋರಾಟದ ವೈಫಲ್ಯದಿಂದ ಬೇಡಿಕೆಗಳಿಗೆ ಸರ್ಕಾರ ಮನ್ನಣೆ ನೀಡುತ್ತಿಲ್ಲ. ಜಿಲ್ಲಾಮಟ್ಟದಲ್ಲಿ 10 ಲಕ್ಷ ಕೋಲಿ ಸಮಾಜದವರು ಸೇರಿಸಿ ಸಮಾವೇಶ ಮಾಡಿ ಸರ್ಕಾರಕ್ಕೆ ಎಚ್ಚರ ನೀಡಬೇಕು ಎಂದರು.

ಕಲಬುರ್ಗಿ ಜಿಲ್ಲೆಯಲ್ಲಿ ಕೋಲಿ ಸಮಾಜದ ಜನಸಂಖ್ಯೆ ನೋಡಿದರೆ, 10 ಶಾಸಕರಾಗಿ ಆಯ್ಕೆಯಾಗಬೇಕು ಎಂದು ಅವರು ತಿಳಿಸಿದರು. ಹಾವೇರಿಯ ಅಂಬಿಗರ ಚೌಡಯ್ಯನವರ ಗುರಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಜನವಾಡದ ಅಲ್ಲಮಪ್ರಭು ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. 

ಕೋಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣ ಕಮಕನೂರ, ಸಿಂದಗಿ ಮಾಜಿ ಶಾಸಕ ಶರಣಪ್ಪ ಸುಣಗಾರ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯ ಶರಣಪ್ಪ ಮಾನೇಗಾರ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘಟನೆಗಾಗಿ ಹೋರಾಟ ಮಾಡಲಾಗುವುದು ಯುವಕರು ಮುಂದೆ ಬರಬೇಕು. ಅವರಿಗೆ ಪ್ರೋತ್ಸಾಹ ಇರಬೇಕು ಎಂದರು.

ಕೋಲಿ ಸಮಾಜದ ಯುವ ಮುಖಂಡ ಶಿವುಕುಮಾರ ನಾಟೀಕಾರರ ವರು ಸಣ್ಣ ವಯಸ್ಸಿನಲ್ಲಿ ದೊಡ್ಡ ಸಮಾ ವೇಶ ಮಾಡಿ ಎಲ್ಲರನ್ನೂ ಒಂದೇ ವೇದಿಕೆ ಮೇಲೆ ಕೂಡಿಸುವ ಕೆಲಸ ಮಾಡಿದ್ದಾರೆ. ಅವರ ಕಾರ್ಯ ಮಾಡಿರುವದು ಮೆಚ್ಚುವಂತಹದು ಎಂದು ತಿಳಿಸಿದರು.

ಯುವ ಬರಹಗಾರ ಬಸವರಾಜ ಎಸ್‌  ನಿಂಬರ್ಗಿ ಅವರು ಬರೆದಿರುವ ದಿ.ವಿಠ್ಠಲ ಹೇರೂರರವರ ಕುರಿತು ಸ್ವಾಭಿಮಾನದ ಸಿಂಹ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪತ್ರಕರ್ತ ಸೂರ್ಯಕಾಂತ ಜಮಾದಾರ ಪುಸ್ತಕದ ವಿಮರ್ಶೆ ಮಾಡಿದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶಿವುಕುಮಾರ ನಾಟೀಕಾರ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪರವಾಗಿ ಹೋರಾಟ ಮಾಡಲಾಗುವದು ಎಂದು ಅವರು ತಿಳಿಸಿದರು.

ಕೋಲಿ ಸಮಾಜದ ವಿಜಯಪುರ ಘಟಕದ ಅಧ್ಯಕ್ಷ ಶರಣಪ್ಪ ಪರಮೇಶ್ವರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ಬಾಣೆ, ರಾಜಗೋಪಾಲ ರೆಡ್ಡಿ, ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ಶಂಕರ ಮ್ಯಾಕೇರಿ, ಮಹೇಶ ಮುದನಾಳ, ಬಸವರಾಜ ಸಪ್ಪನಗೋಳ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭೀಮಾಶಂಕರ ಹೊನಕೇರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಗುರಣ್ಣ ತೆಗ್ಗೆಳ್ಳಿ, ಪ್ರಭು ವಾಲೀಕಾರ ಇದ್ದರು.

ಬಸವರಾಜ ನಾಟೀಕಾರ ಸ್ವಾಗತಿಸಿ, ತಾಲ್ಲೂಕು ಪಂಚಾಯಿತಿ ಸದಸ್ಯ ವಿಠ್ಠಲ ನಾಟೀಕಾರ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಭಗವಂತರಾಯ ಬೆಣ್ಣುರ ನಿರೂಪಿಸಿ, ಶಿವಾನಂದ ನಾಟೀಕಾರ ವಂದಿಸಿದರು.

ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಆಗುವ ಕಡತ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿ ಕೇಂದ್ರ ಸರ್ಕಾರಕ್ಕೆ ರವಾನೆ ಆಗಿದೆ. ಅಲ್ಲಿ ಅನುಷ್ಠಾನಗೊಳಿಸಲು ತೀವ್ರ ಹೋರಾಟ ಮಾಡಲಾಗುವುದು.
ಬಾಬುರಾವ್ ಚಿಂಚನಸೂರ, ಶಾಸಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.