ADVERTISEMENT

ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 6:20 IST
Last Updated 17 ಜನವರಿ 2017, 6:20 IST
ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ರೈತರ ಆಗ್ರಹ
ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ರೈತರ ಆಗ್ರಹ   

ಸುರಪುರ: ಕಳೆದ ಶನಿವಾರದಿಂದ ತೊಗರಿ ಖರೀದಿ ಕೇಂದ್ರವನ್ನು ಬಂದ್‌ ಮಾಡಿದ್ದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ ಯುವ ಭಾರತ ಕ್ರಾಂತಿದಳದ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ಕ್ರಾಂತಿ ದಳದ ರಾಜ್ಯ ಘಟಕದ ಅಧ್ಯಕ್ಷ ಅಧ್ಯಕ್ಷ ರಾಮುನಾಯಕ ಅರಳಹಳ್ಳಿ ಮಾತನಾಡಿ, ‘ಕಳೆದ ಮೂರು ದಿನಗಳಿಂದ ರೈತರು ಖರೀದಿ ಕೇಂದ್ರಕ್ಕೆ ತೊಗರಿ ತಂದು ಕಾಯುತ್ತಿದ್ದಾರೆ. ಚಳಿಯಲ್ಲಿ ನಡಗುತ್ತಾ ರಾತ್ರಿ ಕಳೆದಿದ್ದಾರೆ. ಖರೀದಿ ಕೇಂದ್ರ ತೆರೆಯದಿರುವುದರಿಂದ ರೈತರು ಸಂಕ್ರಮಣ ಹಬ್ಬವನ್ನೂ ಆಚರಿಸಿಲ್ಲ’ ಎಂದು ದೂರಿದರು.

‘ರೈತರ ಹತ್ತಿರ ಯಾರೂ ಬಂದು ವಿಚಾರಿಸುತ್ತಿಲ್ಲ. ಖರೀದಿ ಕೇಂದ್ರದ ಅಧಿಕಾರಿಗಳು ಸ್ಥಳದಲ್ಲಿಲ್ಲ. ಕೇಂದ್ರದ ಬಾಗಿಲು ತೆಗೆಯಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಹಬ್ಬದ ನಿಮಿತ್ತ ಹಮಾಲರು ಬಂದಿಲ್ಲ.’ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

‘ದಿನಕ್ಕೆ 300 ಕ್ವಿಂಟಲ್‌ ಮಾತ್ರ ತೊಗರಿ ಖರೀದಿಸಲಾಗುತ್ತಿದೆ. ಪ್ರತಿ ನಿತ್ಯ ಒಂದು ಸಾವಿರ ಕ್ವಿಂಟಾಲ್‌ ಆವಕವಾಗುತ್ತಿದೆ. ಕಾರಣ ಉಳಿದ ರೈತರು ದಿನಗಟ್ಟಲೇ ಖರೀದಿ ಕೇಂದ್ರದಲ್ಲೆ ಕಾಯುವಂತಾಗಿದೆ. ಯಾವ ಸರ್ಕಾರ ಬಂದರೂ  ರೈತನ ಪರಿಸ್ಥಿತಿ ಬದಲಾಗಿಲ್ಲ’ ಎಂದು ವಿಷಾದಿಸಿದರು.

‘ಆವಕವಾಗುವ ಎಲ್ಲ ತೊಗರಿಯನ್ನು ಅದೇ ದಿನ ಖರೀದಿಸಬೇಕು. ಬೆಂಬಲ ಬೆಲೆಯನ್ನು ₹8 ಸಾವಿರಕ್ಕೆ ಹೆಚ್ಚಿಸಬೇಕು. ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ವರ್ತಿಸಬೇಕು. ಸದ್ಯ ಕೇಂದ್ರದಲ್ಲಿ ಆಂಧ್ರ ಮೂಲದ ಅಧಿಕಾರಿಗಳು ಇದ್ದು ರೈತರೊಂದಿಗೆ ಸಂವಹನ ಸಾಧ್ಯವಾಗುತ್ತಿಲ್ಲ. ಕನ್ನಡ ಮಾತನಾಡುವ ಅಧಿಕಾರಿಗಳನ್ನು ನಿಯೋಜಿಸಬೇಕು’ ಎಂದು ಆಗ್ರಹಿಸಿದರು.

ಅಶೋಕ ಗುತ್ತೇದಾರ ಅರಳಹಳ್ಳಿ, ಅಮರಪ್ಪಗೌಡ ಬೊಮ್ಮನಳ್ಳಿ, ರವಿ ಕೊಡೇಕಲ್‌, ಭೀಮಣ್ಣ ಮಂಗಿಹಾಳ, ರಾಮನಗೌಡ ಚೌಡೇಶ್ವರಿಹಾಳ, ಗೌಡಪ್ಪ ಅರಳಹಳ್ಳಿ, ರಮೇಶ ಅರಳಹಳ್ಳಿ, ರಮೇಶ ಯಾಳಗಿ, ಹಾಲಪ್ಪನಾಯ್ಕ ಮಾರನಾಳತಾಂಡಾ, ಮರೆಪ್ಪ ಸಿದ್ದಾಪುರ, ಮಾನಪ್ಪ ಕಕ್ಕೇರಿ, ರಾಯಪ್ಪ ಗೆದ್ದಲಮರಿ   ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.