ADVERTISEMENT

ಧಾರ್ಮಿಕ ಭಾವನೆಗೆ ಧಕ್ಕೆ; ಪ್ರತಿಭಟನೆ

ಜೇವರ್ಗಿ ಪೊಲೀಸ್ ಠಾಣೆ ಎದುರು ಜಮಾಯಿಸಿದ ಯುವಕರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 6:14 IST
Last Updated 18 ಫೆಬ್ರುವರಿ 2017, 6:14 IST
ಜೇವರ್ಗಿ: ಮುಸ್ಲಿಮರ ಪವಿತ್ರ ಸ್ಥಳವಾದ ಕಾಬಾ ಮೇಲೆ ಮಹಿಳೆಯ ಅಶ್ಲೀಲ ಚಿತ್ರ ಪ್ರಕಟಿಸಿ ಫೇಸ್‌ಬುಕ್‌ ಮತ್ತು ವಾಟ್ಸ್‌ ಆ್ಯಪ್‌ನಲ್ಲಿ ಹರಿಬಿಟ್ಟ ಯುವಕನ ಬಂಧನಕ್ಕೆ ಆಗ್ರಹಿಸಿ ಮುಸ್ಲಿಂ ಯುವಕರು ಪಟ್ಟಣದ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.  
 
ಶ್ರೀರಾಮಸೇನೆ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಲ್ಪಸಂ ಖ್ಯಾತರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಅಶ್ಲೀಲ ಚಿತ್ರಗಳನ್ನು ಪ್ರಕಟಿಸಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನ ನಡೆಸಿದ್ದಾರೆ. ಅಂತಹವರನ್ನು ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು. 
 
ಠಾಣೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿ ಕುಮಾರ್‌ ಅವರು ಪ್ರತಿಭಟನಾಕಾರ ರನ್ನು ಸಮಾಧಾನ ಪಡಿಸಿದರು. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಆರೋಪಿಯನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. 
 
ಹೆಚ್ಚುವರಿ ಪೊಲೀಸ್ ವರಿ ಷ್ಠಾಧಿಕಾರಿ ಜಯಪ್ರಕಾಶ, ಡಿವೈ ಎಸ್‌ಪಿಗಳಾದ ವಿಜಯ ಅಂಚಿ, ಎಸ್.ಎಸ್.ಹುಲ್ಲೂರ್ ಇದ್ದರು. ಪಟ್ಟಣದ ನಿವಾಸಿ ಇಬ್ರಾಹಿಂ ಪಟೇಲ್ ಅವರು ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಪೊಲೀಸರು ನಿಗಾ ವಹಿಸಿದ್ದಾರೆ. 
 
ಕ್ರಮಕ್ಕೆ ಆಗ್ರಹ: ಜೇವರ್ಗಿಯಲ್ಲಿ ಕೋಮು ಗಲಭೆ ಸೃಷ್ಟಿಸುವ ಉದ್ದೇಶ ದಿಂದ ಶ್ರೀರಾಮ ಸೇನೆ ಸಂಘಟನೆ ಹುನ್ನಾರ ನಡೆಸಿದೆ. ಚಿತ್ರ ಪ್ರಕಟಿಸಿರುವ ವ್ಯಕ್ತಿ ಮತ್ತು ಶ್ರೀರಾಮಸೇನೆ ವಿರುದ್ಧ ಸೈಬರ್‌ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸ ಬೇಕೆಂದು ಟಿಪ್ಪು ಸೌಹಾರ್ದ ವೇದಿಕೆ ಅಧ್ಯಕ್ಷ ಶೌಕತ್‌ ಅಲಿ ಆಲೂರ ಅವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. 
 
ಆರೋಪಿ ಸೆರೆಗೆ ಕ್ರಮ:  ತಾಲ್ಲೂಕಿನ ರಾಸಣಗಿ ಗ್ರಾಮದ ನಾಗು ಹೊನ್ನಪ್ಪ (20) ಎಂಬಾತ ಅಶ್ಲೀಲ ಚಿತ್ರ ಪ್ರಕಟಿಸಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಯ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.