ADVERTISEMENT

ನಾಗರಾಳ ಜಲಾಶಯ: ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 5:53 IST
Last Updated 19 ಸೆಪ್ಟೆಂಬರ್ 2017, 5:53 IST

ಚಿಂಚೋಳಿ: ತಾಲ್ಲೂಕಿನ ಐನಾಪುರ ಸೇರಿದಂತೆ ವಿವಿಧೆಡೆ ಭಾರಿ ಮಳೆ ಸುರಿದಿದೆ. ಇದರಿಂದ ಜನರ ಮನೆಗಳು ಭಾಗಶಃ ಉರುಳಿದ್ದು, ಭರ್ತಿಯಾಗಿ ತುಂಬಿ ಹರಿಯುತ್ತಿದ್ದ ನಾಗರಾಳ್‌ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಡಲಾಗಿದೆ. ‘ಐನಾಪುರದಲ್ಲಿ 112.3 ಮಿ.ಮೀ ದಾಖಲೆಯ ಮಳೆ ಸುರಿದಿದೆ. 11 ಮನೆಗಳಿಗೆ ಹಾನಿಯಾಗಿದ್ದು, ತಾಲ್ಲೂಕಿನಲ್ಲಿ 27 ಮನೆಗಳಿಗೆ ಹಾನಿಯಾಗಿದೆ’ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.

‘ಮನೆಗಳಿಗೆ ಹಾನಿ ಮತ್ತು ರೈತರ ಹೊಲಗಳಿಗೆ ನೀರು ನುಗ್ಗಿದ ಕುರಿತು ದೂರುಗಳು ಬಂದಿಲ್ಲ. ಆದರೂ ನದಿ ಪಾತ್ರದ ರೈತರ ಜಮೀನಿನ ಕುರಿತು ಮಾಹಿತಿ ಪಡೆಯಲು ಆಧೀನ ಅಧಿಕಾರಿಗಳನ್ನು ಕಳುಹಿಸುತ್ತೇನೆ’ ಎಂದು ಅವರು ತಿಳಿಸಿದರು.

ಐನಾಪುರ 112.3 ಮಿ.ಮೀ, ಚೇಂಗಟಾ 43 ಮಿ.ಮೀ, ಸಾಲೇಬೀರನಹಳ್ಳಿ ಮತ್ತು ನಾಗಾಈದಲಾಯಿ 28 ಮಿ.ಮೀ, ಹಸರಗುಂಡಗಿ ಮತ್ತು ಕೊಳ್ಳೂರು 25 ಮಿ.ಮೀ ಸಲಗರ ಬಸಂತಪುರ 16.5 ಮಿ.ಮೀ ಹಾಗೂ ರಟಕಲ್‌ 12 ಮಿ.ಮೀ ಮಳೆ ಸುರಿದಿದೆ.

ADVERTISEMENT

ಇದರಿಂದಾಗಿ ಭರ್ತಿಯ ಅಂಚಿನಲ್ಲಿದ್ದ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ್‌ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದರಿಂದ 6700 ಕೂ್ಯಸೆಕ್‌ ಪ್ರಮಾಣದಲ್ಲಿ ನೀರು ಜಲಾಶಯದ ಗೇಟು ಎತ್ತಿ ರಾತ್ರಿ 11 ಗಂಟೆಯಿಂದ ಸೋಮವಾರ ಬೆಳಿಗ್ಗೆ 5.30ರವರೆಗೆ ನದಿಗೆ ಬಿಡಲಾಗಿದೆ.

‘ಜಲಾಶಯದ ಗರಿಷ್ಠ ಮಟ್ಟ 491 ಮೀಟರ್‌ ಇದ್ದು, ಮಳೆಗಾಲದ ಮಳೆ ಹಾಗೂ ಪ್ರವಾಹ ನಿಯಂತ್ರಣದಲ್ಲಿಡುವ ಉದ್ದೇಶದಿಂದ 490.5 ಮೀಟರ್‌ಗೆ ನೀರಿನ ಮಟ್ಟ ಕಾಪಾಡಿಕೊಳ್ಳಲಾಗುವುದು. ಸೋಮವಾರ ಸಂಜೆವರೆಗೆ ಜಲಾಶಯಕ್ಕೆ 900 ಕ್ಯುಸೆಕ್‌ ಒಳಹರಿವಿದೆ’ ಎಂದು ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಾ ಅಗ್ನಿಹೋತ್ರಿ ತಿಳಿಸಿದರು.

‘ಜಲಾಶಯದ ನೀರು ಮುಲ್ಲಾಮಾರಿ ನದಿಗೆ ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದೆ. ಚಿಮ್ಮನಚೋಡ್‌ ಬೀದರ್‌ ಮಾರ್ಗದಲ್ಲಿ ( ಹಳೆ ಊರು ಹೊಸ ಊರಿನ ಮಧ್ಯೆ) ಬರುವ ಸೇತುವೆ, ಗಾರಂಪಳ್ಳಿಯ (ಹಳೆ ಊರು ಹೊಸ ಊರಿನ ಮಧ್ಯೆ ಬರುವ) ಗ್ರಾಮದ ಸೇತುವೆ ಮತ್ತು ತಾಜಲಾಪುರ ಕೂಡು ರಸ್ತೆಯ ಸೇತುವೆ ಮುಳುಗಡೆಯಾಗಿದ್ದರಿಂದ ಮೂರು ಗ್ರಾಮಗಳ ಸಂಪರ್ಕ ಕಡಿತವಾಗಿತ್ತು.

‘ನದಿಯ ಅಕ್ಕಪಕ್ಕದಲ್ಲಿ ಬರುವ ರೈತ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಹಾನಿ ಉಂಟಾಗಿದೆ’ ಎಂದು ಚಿಮ್ಮನಚೋಡ ಗ್ರಾ.ಪಂ. ಸದಸ್ಯ ರಾಮರೆಡ್ಡಿ ಪೊಲೀಸ ಪಾಟೀಲ, ಗಾರಂಪಳ್ಳಿಯ ಮುಖಂಡ ವೀರಭದ್ರಪ್ಪ ಮಲ್ಕೂಡು ಮತ್ತು ತಾಜಲಾಪುರದ ರಾಜರೆಡ್ಡಿ ಡೋಣಿ ತಿಳಿಸಿದ್ದಾರೆ.

‘ತಾಲ್ಲೂಕಿನ ಐನಾಪುರದಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ತೊಗರಿ ಬೆಳೆಗಳು ಜಲಾವೃತವಾಗಿದ್ದು, ತೇವಾಂಶ ಅಧಿಕವಾಗಿ ಬೆಳೆ ಹಾಳಾಗುತ್ತದೆ’ ಎಂದು ರೇವಪ್ಪ ಉಪ್ಪಿನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.