ADVERTISEMENT

ನೋಂದಣಿ, ತರಬೇತಿ ಉಚಿತ; ಉದ್ಯೋಗ ಖಚಿತ

​ಪ್ರಜಾವಾಣಿ ವಾರ್ತೆ
Published 16 ಮೇ 2017, 8:35 IST
Last Updated 16 ಮೇ 2017, 8:35 IST

ಕಲಬುರ್ಗಿ: ‘ರಾಜ್ಯ ಸರ್ಕಾರ ಆರಂಭಿಸಿರುವ ಕೌಶಲ್ಯ ಕರ್ನಾಟಕ ವೆಬ್‌ ಪೋರ್ಟಲ್‌ನಲ್ಲಿ ನೋಂದಣಿ ಉಚಿತವಾಗಿದ್ದು, ಶೇ 70ರಷ್ಟು ಉದ್ಯೋಗಾವಕಾಶ ಖಚಿತವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿನ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಕೌಶಲ್ಯ ಕರ್ನಾಟಕ ವೆಬ್ ಪೋರ್ಟಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಯುವಕ, ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಪಡೆದುಕೊಳ್ಳಲು ನೆರವಾಗಬೇಕು ಎಂಬುದು ಸರ್ಕಾರದ ಆಶಯ. ಈ ಕಾರಣಕ್ಕಾಗಿ ಪೋರ್ಟಲ್ ಆರಂಭಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡರೆ 200ಕ್ಕೂ ಹೆಚ್ಚು ಟ್ರೇಡ್‌ಗಳಲ್ಲಿ ತರಬೇತಿ ಪಡೆಯಬಹುದಾಗಿದೆ’ ಎಂದು ತಿಳಿಸಿದರು.

‘ಅಭ್ಯರ್ಥಿಗಳಲ್ಲಿರುವ ಕೌಶಲ್ಯ, ಕಂಪೆನಿಗೆ ಬೇಕಾದ ಟ್ರೇಡ್‌ಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳ ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಮಾಡಲಾಗುವುದು. ಕಂಪೆನಿ ಬಯಸಿದ ಟ್ರೇಡ್‌ಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ಈ–ಮೇಲ್, ಎಸ್‌ಎಂಎಸ್ ಮೂಲಕ ಸಂದೇಶ ಬರುತ್ತದೆ’ ಎಂದರು.

ADVERTISEMENT

‘ಸ್ವ ಉದ್ಯೋಗ ಆರಂಭಿಸಲು ಇಚ್ಛಿಸುವ ಮಹಿಳಾ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು 50 ಎಕರೆ ಜಾಗವನ್ನು ಮೀಸಲಿರಿಸಲಾಗಿದೆ. ಯಾದಗಿರಿಯಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಮತ್ತು ಜವಳಿ ಪಾರ್ಕ್ (ಟೆಕ್ಸ್‌ಟೈಲ್‌) ಆರಂಭಿಸಲಾಗುತ್ತಿದೆ. ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಈ ಭಾಗಕ್ಕೆ ಮೂಲ ಸೌಕರ್ಯ ಒದಗಿಸಿ, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಇದರಿಂದ ಈ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಉದ್ಯೋಗಗಳು ದೊರೆಯಲಿವೆ’ ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ಮಾತನಾಡಿ, ‘ವಿವಿಧ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ 3ರಿಂದ 9 ತಿಂಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಭತ್ಯೆ, ಕೆಲವು ಕೋರ್ಸ್‌ಗಳಿಗೆ ವಸತಿ ವ್ಯವಸ್ಥೆಯೂ ಲಭ್ಯವಿದೆ. ಬೇಡಿಕೆಗೆ ಅನುಗುಣವಾಗಿ ತರಬೇತಿ ನೀಡುವ ಹೊಸ ವಿಧಾನ ಇದರಲ್ಲಿದೆ. ಉದಾಹರಣೆಗೆ ವಾಹನ ಚಾಲನಾ ತರಬೇತಿಗೆ ಅತೀ ಹೆಚ್ಚು ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡರೆ ಅದರಲ್ಲೇ ಅವರಿಗೆ ತರಬೇತಿ ನೀಡಲಾಗುತ್ತದೆ’ ಎಂದು ತಿಳಿಸಿದರು.

ಶಾಸಕ ಅಮರನಾಥ ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ, ಮೇಕ್‌ ಇನ್ ಇಂಡಿಯಾ, ಸ್ಟಾರ್ಟ್‌ ಅಪ್ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ ರಾಜ್ಯ ಸರ್ಕಾರ ಕೌಶಲ್ಯ ಕರ್ನಾಟಕ ವೆಬ್ ಪೋರ್ಟಲ್ ಆರಂಭಿಸಿರುವುದು ಶ್ಲಾಘನೀಯ’ ಎಂದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಜಿಲ್ಲಾಧಿಕಾರಿ ಉಜ್ವಲಕುಮಾರ್ ಘೋಷ್, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್ ಇದ್ದರು.

‘ಊರ ಬಿಟ್ಟರ ಉದ್ಧಾರ ಆಕ್ತೀರಿ..!’

ಕೌಶಲ್ಯ ಕರ್ನಾಟಕ ವೆಬ್ ಪೋರ್ಟಲ್ ಲೋಕಾರ್ಪಣೆ ಬಳಿಕ ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಬಹುತೇಕ ವಿದ್ಯಾರ್ಥಿಗಳು ‘ಇಲ್ಲಿಯೇ ತರಬೇತಿ ಕೊಡಿಸಿ, ಉದ್ಯೋಗವನ್ನೂ ಇಲ್ಲೇ ಕೊಡಿಸಿ. ಹೊಸ ಹೊಸ ಕಾರ್ಖಾನೆಗಳನ್ನು ಆರಂಭಿಸಲು ಕ್ರಮಕೈಗೊಳ್ಳಿ, ಇದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶ ಸಿಗುತ್ತವೆ’ ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ, ‘ಊರ ಬಿಟ್ಟರ ನೀವೆಲ್ಲ ಉದ್ಧಾರ ಆಕ್ತೀರಿ, ಮೊದಲು ಊರ ಬಿಡಾಕ್ ಕಲೀರಿ’ ಎಂದಾಗ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ನಕ್ಕರು.

*

ಶೇ 70ರಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಕರಾರಿನೊಂದಿಗೆ ತರಬೇತಿ ಸಂಸ್ಥೆಗಳನ್ನು ಗುರುತಿಸಲಾಗಿದ್ದು, 70ರಷ್ಟು ಜನರಿಗೆ ಉದ್ಯೋಗ ದೊರೆತ ಬಳಿಕವೇ ಅವರಿಗೆ ಹಣ ಪಾವತಿಸಲಾಗುತ್ತದೆ

ಡಾ.ಶರಣಪ್ರಕಾಶ ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.