ADVERTISEMENT

ಬಂದ್‌ಗೆ ನೀರಸ ಪ್ರತಿಕ್ರಿಯೆ

ಕೆಲಹೊತ್ತು ಬಸ್ ಸಂಚಾರ ಸ್ಥಗಿತ: ಆಟೊ ಸೇವೆ ಅಬಾಧಿತ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 7:24 IST
Last Updated 8 ಫೆಬ್ರುವರಿ 2017, 7:24 IST
ಬಂದ್‌ಗೆ ನೀರಸ ಪ್ರತಿಕ್ರಿಯೆ
ಬಂದ್‌ಗೆ ನೀರಸ ಪ್ರತಿಕ್ರಿಯೆ   

ಕಲಬುರ್ಗಿ: ಕ್ವಿಂಟಲ್‌ ತೊಗರಿಗೆ ₹7,500 ಬೆಂಬಲ ಬೆಲೆ ನಿಗದಿಪಡಿಸಬೇಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮಂಗಳವಾರ ಕರೆ ನೀಡಿದ್ದ ಕಲಬುರ್ಗಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಾರಿಗೆ ಬಸ್‌ಗಳ ಸಂಚಾರ ಬೆಳಿಗ್ಗೆ ಆರಂಭವಾಗಿತ್ತಾದರೂ ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಮುಂದೆ ರೈತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ ಕಾರಣ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಪರ ಊರುಗಳಿಂದ ಬಂದಿದ್ದ ಪ್ರಯಾಣಿಕರು ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಯಿತು.

ನೆಹರೂ ಗಂಜ್‌ನಲ್ಲಿರುವ ಎಪಿಎಂಸಿ ಆವರಣದಲ್ಲಿ ಅಡತ ವ್ಯಾಪಾರಿಗಳು ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿ, ಬಂದ್‌ಗೆ ಬೆಂಬಲ ಸೂಚಿಸಿದರು.
ಶಾಲಾ–ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವ­ಹಿ­ಸಿದವು. ಆಟೊ, ಮ್ಯಾಕ್ಸಿಕ್ಯಾಬ್‌ಗಳ ಸಂಚಾರ ಮಾಮೂಲಿಯಾಗಿತ್ತು. ಕಣ್ಣಿ ಮತ್ತು ಸೂಪರ್ ಮಾರ್ಕೆಟ್‌ನಲ್ಲಿ ವ್ಯಾಪಾರ, ವಹಿವಾಟು ನೀರಸವಾಗಿತ್ತು.

‘ಸೂಪರ್ ಮಾರ್ಕೆಟ್, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಮತ್ತು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನಾಕಾರರು ಬಲವಂತದಿಂದ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಅಲ್ಲದೆ ಕೈಯಲ್ಲಿ ಲಾಠಿ ಹಿಡಿದುಕೊಂಡು ಬಂದು ಬೆದರಿಕೆ ಒಡ್ಡಿದ್ದಾರೆ’ ಎಂದು ವ್ಯಾಪಾರಿಗಳು ಆರೋಪಿಸಿದರು.

‘ಇದರಿಂದ ಸಹಜವಾಗಿ ವ್ಯಾಪಾರಕ್ಕೆ ತೊಂದರೆಯಾಗಿದೆ. ಪ್ರತಿಭಟನೆಯಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕೆ ವಿನಾ ಬಲವಂತದಿಂದ ಅಲ್ಲ’ ಎಂದರು.

ಎಪಿಎಂಸಿ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾ­ಕಾರರು ಗಂಜ್, ಸೂಪರ್ ಮಾರ್ಕೆಟ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿಪತ್ರ ಸಲ್ಲಿಸಿದರು.

ಮುಂಜಾಗ್ರತಾ ಕ್ರಮವಾಗಿ ಪೊಲೀ­ಸರು ಬಿಗಿ ಬಂದೋಬಸ್ತ್ ಕೈಗೊಂಡಿ­ದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಹೈದರಾ­ಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಚ್‌ಕೆಸಿಸಿಐ) ಅಧ್ಯಕ್ಷ ಸೋಮಶೇಖರ ಟೆಂಗಳಿ, ವಿವಿಧ ಸಂಘಟನೆಗಳ ಮುಖಂಡರಾದ ಶ್ರೀಮಂತ ಉದನೂರ, ಶರಣಬಸಪ್ಪ ಮಮಶೆಟ್ಟಿ, ಮೌಲಾ ಮುಲ್ಲಾ, ಅಂಬರೀಷ ಪಾಟೀಲ, ಮಂಜುನಾಥ­ಗೌಡ, ಪಿ.ಪ್ರಸನ್ನಕುಮಾರ್ ಇದ್ದರು.

*
ತೊಗರಿ ಬೆಲೆ ಕುಸಿತದಿಂದ ಈ ಭಾಗದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಪ್ರತಿ ಕ್ವಿಂಟಲ್ ತೊಗರಿಗೆ ₹7,500 ಬೆಲೆ ನಿಗದಿಪಡಿಸಬೇಕು.
-ಮಾರುತಿ ಮಾನ್ಪಡೆ,
ಅಧ್ಯಕ್ಷ, ಕೆಪಿಆರ್‌ಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT