ADVERTISEMENT

ಬರ ಚರ್ಚೆಗೆ ಶಾಸಕರ ಸಭೆ ಕರೆಯಿರಿ

ಉಸ್ತುವಾರಿ ಸಚಿವ ಖಮರುಲ್‌ ಇಸ್ಲಾಂಗೆ ಶಾಸಕ ಬಿ.ಆರ್‌.ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 11:24 IST
Last Updated 1 ಡಿಸೆಂಬರ್ 2015, 11:24 IST

ಕಲಬುರ್ಗಿ: ‘ಜಿಲ್ಲೆಯಲ್ಲಿ ಬರದ ಸ್ಥಿತಿ ಭೀಕರವಾಗಿದ್ದು, ಜನ–ಜಾನುವಾರು ಸಂಕಷ್ಟ ಅನುಭವಿಸುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಪಾಲ್ಗೊಳ್ಳಬೇಕು’ ಎಂದು ಆಳಂದ ಶಾಸಕ ಬಿ.ಆರ್‌. ಪಾಟೀಲ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಎಲ್ಲಿಯೂ ಗೋಶಾಲೆ ತೆರೆದಿಲ್ಲ. ಹೋಬಳಿಗಳಿಗೆ ಮೂರು ದಿನ ಮಾತ್ರ ಕಾಟಾಚಾರಕ್ಕೆ ಎಂಬಂತೆ 4–5 ಟನ್‌ ಮೇವು ಪೂರೈಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಗೋಶಾಲೆ–ಮೇವು ಬ್ಯಾಂಕ್‌ ತೆರೆಯಲಾಗಿದೆ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಅಧಿವೇಶನದಲ್ಲಿ ಬರದ ಬಗ್ಗೆ ಸಮಗ್ರ ಚರ್ಚೆಯಾಗಬೇಕಿತ್ತು. ಆದರೆ, ಬಿಜೆಪಿಯವರು ಧರಣಿ ನಡೆಸಿದ್ದರಿಂದ ಕೃಷಿ ಸಚಿವರು ಏನು ಉತ್ತರ ನೀಡಿದರು ಎಂಬುದೇ ಗೊತ್ತಾಗಲಿಲ್ಲ. ಅವರ ಉತ್ತರದಲ್ಲಿ ಸ್ಪಷ್ಟತೆಯೂ ಇರಲಿಲ್ಲ. ಈ ವಿಷಯ ಚರ್ಚೆಗೆ ಮತ್ತೊಮ್ಮೆ ಅಧಿವೇಶನ ಕರೆಯಬೇಕು’ ಎಂದು ಒತ್ತಾಯಿಸಿದರು.

‘ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡಬೇಕು. ಬಹುಪಾಲು ರೈತರು ಕಟಬಾಕಿದಾರರು ಆಗಿರುವುದ ರಿಂದ ಅವರು ಮುಂದಿನ ವರ್ಷದ ಬೆಳೆ ವಿಮೆ ಯೋಜನೆಗೆ ಅರ್ಹರಾಗುವುದಿಲ್ಲ. ಸರ್ಕಾರವೇ ಅವರ ಬೆಳೆ ವಿಮೆ ಕಂತು ಪಾವತಿಸಿ ಅವರಿಗೆ ಪರಿಹಾರ ದೊರೆಯು ವಂತೆ ಮಾಡಬೇಕು’ ಎಂದರು.

ಆದೇಶ ಬಂದಿಲ್ಲ: ‘ಅಲ್ಪಾವಧಿ ಸಾಲವನ್ನು ದೀರ್ಘಾವಧಿಯನ್ನಾಗಿ ಪರಿವರ್ತಿಸಿ ಒಂದು ವರ್ಷ ಸಾಲ ವಸೂಲಿ ಮುಂದೂಡಿ ಎಂಬ ರಾಜ್ಯ ಸರ್ಕಾರದ ಆದೇಶ ಎಲ್ಲ ಸಹಕಾರ ಬ್ಯಾಂಕ್‌ಗಳಿಗೆ ಬಂದಿದೆ. ಆದರೆ, ಸಹಕಾರ ಬ್ಯಾಂಕ್‌ಗಳಿಗೆ ಸಾಲ ನೀಡಿ ರುವ ಅಫೆಕ್ಸ್‌ ಬ್ಯಾಂಕ್‌ ಮತ್ತು ನಬಾರ್ಡ್ ಈ ಕುರಿತು ಯಾವುದೇ ಸೂಚನೆ ನೀಡಿಲ್ಲ.

ಹೀಗಾಗಿ ಸಹಕಾರ ಬ್ಯಾಂಕ್‌ಗಳವರು ರಾಜ್ಯ ಸರ್ಕಾರದ ಸೂಚನೆ ಪಾಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರನ್ನು ಕಟಬಾಕಿದಾರರು ಎಂದು ಪರಿಗಣಿಸುವ ಸ್ಥಿತಿ ಇದೆ’ ಎಂದು ಕಲಬುರ್ಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರೂ ಆಗಿರುವ ಜೆಡಿಎಸ್‌ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಹೇಳಿದರು.
*
‘ಸಿಯುಕೆಗೆ ಟ್ಯಾಂಕರ್‌ ನೀರು ಪೂರೈಸಿ’
ಕಲಬುರ್ಗಿ: ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲ ಯವನ್ನು ನೀರಿನ ಕೊರತೆಯಿಂದ ಮುಚ್ಚಿದರೆ ರಾಜ್ಯಕ್ಕೆ ಅವಮಾನ. ಶಾಶ್ವತ ವ್ಯವಸ್ಥೆ ಮಾಡುವವರೆಗೆ ಅಲ್ಲಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು ಎಂದು ಶಾಸಕ ಬಿ.ಆರ್‌. ಪಾಟೀಲ ಒತ್ತಾಯಿಸಿದರು.

‘ಈ ಹಿಂದೆ ಇದೇ ತರಹ ಭೀಕರ ಬರಸ್ಥಿತಿ ಇದ್ದಾಗ ಅಂದಿನ ರೈಲ್ವೆ ಸಚಿವ ಜಾಫರ್‌ ಷರೀಫ್‌ ಅವರು ರೈಲಿನ ಮೂಲಕ ನಮಗೆ ಕೃಷ್ಣಾ ನದಿಯಿಂದ ನೀರು ತಂದು ಪೂರೈಸಿದ್ದರು. ಈ ಸರ್ಕಾರಕ್ಕೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಸಾಧ್ಯವಿಲ್ಲವೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT