ADVERTISEMENT

ಬೆಂಗಳೂರಿನಲ್ಲಿ ಬಂಜಾರ ಸಮಾವೇಶ: ಜಾಧವ್

ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 9:28 IST
Last Updated 13 ಫೆಬ್ರುವರಿ 2017, 9:28 IST
ಚಿಂಚೋಳಿ ತಾಲ್ಲೂಕು ಮೋಘಾ ಧಾವಜಿ ನಾಯಕ್‌ ತಾಂಡಾದಲ್ಲಿ ಜಗದಂಬಾದೇವಿ ಹಾಗೂ ಸೇವಾಲಾಲ ಮಹಾರಾಜರ 5ನೇ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ಮಾತನಾಡಿದರು
ಚಿಂಚೋಳಿ ತಾಲ್ಲೂಕು ಮೋಘಾ ಧಾವಜಿ ನಾಯಕ್‌ ತಾಂಡಾದಲ್ಲಿ ಜಗದಂಬಾದೇವಿ ಹಾಗೂ ಸೇವಾಲಾಲ ಮಹಾರಾಜರ 5ನೇ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ಮಾತನಾಡಿದರು   

ಚಿಂಚೋಳಿ: ಚಿಕ್ಕಪುಟ್ಟ ಸಮುದಾಯಗಳು ಸಮಾವೇಶ ನಡೆಸಿ ತಮ್ಮ ಸಮಸ್ಯೆ ನಿವೇದಿಸಿಕೊಂಡು ಪರಿಹಾರ ಮಾರ್ಗ ಕಂಡುಕೊಳ್ಳುತ್ತಿವೆ. ಇದೇ ದಾರಿಯಲ್ಲಿ ಸಾಗಲು ಬಂಜಾರ ಸಮುದಾಯದ ಬೃಹತ್‌ ಸಮಾವೇಶಕ್ಕೆ ಬೆಂಗಳೂರಿನಲ್ಲಿ ಸಿದ್ಧತೆಗಳು ನಡೆದಿವೆ ಎಂದು ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್‌  ತಿಳಿಸದರು.

ತಾಲ್ಲೂಕಿನ ಮೋಘಾ ಬಳಿಯ ಧಾವಜಿ ನಾಯಕ್‌ ತಾಂಡಾದಲ್ಲಿ ಶನಿವಾರ ನಡೆದ ಜಗದಂಬಾದೇವಿ ಹಾಗೂ ಸೇವಾಲಾಲ ಮಹಾರಾಜರ 5ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ ಧರ್ಮಸಭೆಯಲ್ಲಿ ಮಾತನಾಡಿದರು.

ದೇಶವ್ಯಾಪಿ ಸಮಾಜವನ್ನು ಒಂದೇ ಮೀಸಲು ಪಟ್ಟಿಯಲ್ಲಿ ತರುವುದು, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡದಂತೆ ಮಾಡಲು ಹಾಗೂ ಸಮುದಾಯದ ಜನರು ಅರಣ್ಯ ಜಮೀನಿನಲ್ಲಿ ಹಲವು ದಶಕಗಳಿಂದ ಸಾಗುವಳಿ ನೀಡುತ್ತಿದ್ದರೂ ಪಟ್ಟಾ ನೀಡದಿರುವುದು ಸೇರಿದಂತೆ ಬಂಜಾರ ಸಮುದಾಯಕ್ಕೆ ಪ್ರತ್ಯೇಕ ವಸತಿ ಶಾಲೆ ಮಂಜೂರಿಗೆ ಒತ್ತಾಯಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯಲು ಬೃಹತ್‌ ಸಮಾವೇಶ ನಡೆಸಲಾಗುವುದು ಎಂದರು.

ಈಗಾಗಲೇ ಪಕ್ಷಾತೀತವಾಗಿ ಸಮಾಜದ ಮುಖಂಡರ ಹಾಗೂ ಶಾಸಕರ ಸಭೆ ನಡೆಸಲಾಗಿದೆ. ಎಲ್ಲರೂ ಸಮಾವೇಶ ನಡೆಸಲು ಒಕ್ಕೊರಲಿನಿಂದ ಧ್ವನಿಗೂಡಿಸಿದ್ದಾರೆ. ಸಮಾವೇಶದಲ್ಲಿ 8ರಿಂದ 10 ಲಕ್ಷ ಹೆಚ್ಚು ಜನರನ್ನು ಸೇರಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.

ಬಂಜಾರ ಸಮುದಾಯ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಅತ್ಯಂತ ಶ್ರೀಮಂತವಾಗಿದೆ. ಶ್ರಮಿಕ ಸಮಾಜ ಎನಿಸಿದ ಬಂಜಾರರು ಭೂಮಿ ಯನ್ನು ತಾಯಿಯಂದು ನಿಸರ್ಗವನನ್ನು ದೇವರೆಂದು ಆರಾಧಿಸುವುದು ವಿಶೇಷ ವಾಗಿದೆ. ಈ ನಿಟ್ಟಿನಲ್ಲಿ ಆಧುನಿಕತೆಯ ನಡುವೆಯೂ ನಮ್ಮತನ ಕಳೆದುಕೊ ಳ್ಳದೇ ಸಮಾಜದ ಹಿರಿಮೆ ಎತ್ತಿ ಹಿಡಿಯ ಬೇಕೆಂದು ಸಮಾಜದ ಮುಖಂಡ ಹೇಮಶೆಟ್ಟಿ ರಾಠೋಡ ತಿಳಿಸಿದರು.

ಉಪ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಖೂನಿ ತಾಂಡಾದ ಮುಖಂಡ ಸಂಜೀವ ಕುಮಾರ ಚವ್ಹಾಣ, ಪೊಲೀಸ್‌ ಇಲಾಖೆ ಸಂಜೀವ ರಾಠೋಡ್‌, ಅಶೋಕ ಚವ್ಹಾಣ, ಭೀಮರಾವ್‌ ರಾಠೋಡ್‌, ಸೂರುನಾಯಕ್‌ ತಾಂಡಾದ ಮೋಹನ ರಾಠೋಡ್‌, ತಾಂಡಾದ ಮುಖಂಡ ರಾದ ಗೋವಿಂದ, ಶಂಕರ ದೀಪಲಾ ಚವ್ಹಾಣ, ಕಾಶಿರಾಮ ಹೇಮಲಾ, ಲಸಕರ್‌ ಭೀಮು ಇದ್ದರು.

ಮಾರುತಿ ಪವಾರ್‌ ಮತ್ತು ಭಾರತಿಬಾಯಿ ನೇತೃತ್ವದ ಕಲಾವಿದರ ಭಜನೆ ನಡೆಯಿತು. ತಾ.ಪಂ. ಸದಸ್ಯ ರಾಮರಾವ್‌ ರಾಠೋಡ್‌ ಸ್ವಾಗತಿಸಿ ನಿರೂಪಿಸಿದರು.

ಅದ್ದೂರಿ ಜಯಂತಿಗೆ ಸಿದ್ಧತೆ

ಚಿಂಚೋಳಿ: ಬಂಜಾರ ಸಮುದಾಯದ ಆರಾಧ್ಯದೇವ ಸಂತ ಸೇವಾಲಾಲ ಮಹಾರಾಜರ 278ನೇ ಜಯಂತ್ಯುತ್ಸವವನ್ನು ಮಂಗಳವಾರ ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸ ಲಾಗುವುದು ಎಂದು ಆಲ್‌ ಇಂಡಿಯಾ ಬಂಜಾರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪವಾರ್‌ ಹಾಗೂ ಪುರ ಸಭೆ ಸದಸ್ಯ ರಾಜಕುಮಾರ ಪವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಜಾರ ಸಮುದಾಯದಲ್ಲಿ ಭಕ್ತಿ ಮತ್ತು ಭಾವೈಕ್ಯತೆಯನ್ನು ಬಿತ್ತಿ ಸಮಾಜದಲ್ಲಿ ಗುಣಾತ್ಮಕ ಬದಲಾವಣೆಯನ್ನು ತಂದಿರುವ ಸಮಾಜದ ರತ್ನ, ಜಗದ್ಗುರು ಡಾ.ರಾಮರಾವ್‌ ಮಹಾರಾಜ ಬರುತ್ತಿದ್ದು ಚಂದಾಪುರದ ಗಂಗೂ ನಾಯಕ ತಾಂಡಾದ ಸೇವಾಲಾಲ ಜಗದಂಬಾ ಮಂದಿರದ ಆವರಣದಲ್ಲಿ ನಡೆಯಲಿದೆ ಎಂದರು.

15 ದಿನಗಳಿಂದ ಸಿದ್ಧತೆ ನಡೆಸಲಾಗಿದೆ. ರಾಮರಾವ್‌ ಮಹಾರಾಜರನ್ನು ಸಾರೋಟಿನಲ್ಲಿ ಕೂಡಿಸಿ ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಚಂದಾಪುರದ ಸೇವಾಲಾಲ ಮಂದಿರ ವರೆಗೆ ಮೆರ ವಣಿಗೆ ನಡೆಸಲಾಗುವುದು ಎಂದರು.

ಡಾ.ರಾಮರಾವ್‌ ಮಹಾರಾಜ ದಿವ್ಯ ಸಾನ್ನಿಧ್ಯ, ಪರ್ವತಲಿಂಗ ಪರಮೇಶ್ವರ ಮಹಾರಾಜ ಸಾನಿಧ್ಯ ಹಾಗೂ ಗೊಬ್ಬೂರುವಾಡಿಯ ಬಳಿರಾಮ ಮಹಾರಾಜ ವಹಿಸಲಿದ್ದು, ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್‌ ಅಧ್ಯಕ್ಷತೆ ವಹಿಸುವರು. ಸಮಾಜದ ಹಿರಿಯರಾದ ಮಾಜಿ ಸಚಿವ ರೇವುನ ನಾಯಕ ಬೆಳಮಗಿ, ರಾಜ್ಯ ಅಧ್ಯಕ್ಷ ಸುಭಾಷ ರಾಠೋಡ್‌, ತಾ.ಪಂ. ಅಧ್ಯಕ್ಷೆ ರೇಣುಕಾ ಅಶೋಕ ಚವಾಣ ಪಾಲ್ಗೊಳ್ಳಲಿದ್ದಾರೆ. 10 ಸಾವಿರ ಜನ ಭಾಗವಹಿಸಲಿದ್ದಾರೆ ಎಂದರು.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.