ADVERTISEMENT

ಮಳೆ: ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 6:22 IST
Last Updated 16 ಸೆಪ್ಟೆಂಬರ್ 2017, 6:22 IST

ಆಳಂದ: ತಾಲ್ಲೂಕಿನಲ್ಲಿ ಸುರಿದ ಮಳೆಗೆ ವಿವಿಧೆಡೆ ರಸ್ತೆಗಳು ಹಾಳಾಗಿವೆ. ಅಲ್ಲದೆ, ಪಟ್ಟಣದ ಕೆಲ ಬಡಾವಣೆಗಳಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಜನರು ಪರದಾಡಬೇಕಾಯಿತು.

ಪಟ್ಟಣದ ಆಯಾ ಜಂಜಲ್‌, ಸಗರಿ ಗಲ್ಲಿ, ರೇವಣಸಿದ್ದೇಶ್ವರ ನಗರ ಇನ್ನಿತರ ವಾರ್ಡ್‌ಗಳಲ್ಲಿ ಮನೆಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಕುಟುಂಬ ಸದಸ್ಯರು ಪರದಾಡಿದರು.
ಆಳಂದ 67 ಮಿ.ಮೀ, ಖಜೂರಿ 71 ಮಿ.ಮೀ, ಸರಸಂಬಾ 31ಮಿ.ಮೀ, ಕೊರಳ್ಳಿ 7 ಮಿ.ಮೀ, ನರೋಣಾ 13 ಮಿ.ಮೀ ಮಳೆಯಾಗಿದೆ.

ಅಮರ್ಜಾ ಅಣೆಕಟ್ಟೆಯ ಹಿನ್ನೀರು ಬರುವ ಗ್ರಾಮವಾದ ಜೀರಹಳ್ಳಿ, ಹೆಬಳಿ, ಪಡಸಾವಳಿ, ಖಾನಾಪುರ, ತೀರ್ಥ, ಖಜೂರಿ, ಸಾಲೇಗಾಂವ, ಚಿತಲಿ, ತಡೋಳಾ ಗ್ರಾಮದಲ್ಲಿ ಉತ್ತಮ ಮಳೆಯಾದ್ದರಿಂದ ಅಣೆಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ. ಹೆಬಳಿ, ಮಟಕಿ, ವಳವಂಡವಾಡಿ, ಮುನ್ನೋಳ್ಳಿ ಗ್ರಾಮದ ರಸ್ತೆಗಳು ಮಳೆಗೆ ಹಾನಿಯಾಗಿವೆ. ಇದರಿಂದ ಶುಕ್ರವಾರ ಕೆಲ ಗ್ರಾಮಗಳಿಗೆ ಬಸ್‌ ಸಂಚಾರ ಸ್ಥಗಿತವಾಗಿತ್ತು.

ADVERTISEMENT

ವಳವಂಡ ವಾಡಿ–ತಡಕಲ ಮಧ್ಯದ ಸಣ್ಣ ಸೇತುವೆ ಸಂಪರ್ಕ ಸ್ಥಗಿತಗೊಂಡಿದೆ. ಹೀಗಾಗಿ ಎರಡು ದಿನಗಳಿಂದ ಗ್ರಾಮಸ್ಥರು ವ್ಯಾಪಾರ ವಹೀವಾಟು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ನಡೆದುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲು ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.