ADVERTISEMENT

ಮೀನುಗಾರಿಕೆಗೆ ಬ್ಯಾಂಕ್‌ನಿಂದ ಸಾಲ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:19 IST
Last Updated 12 ಜನವರಿ 2017, 9:19 IST

ಕಲಬುರ್ಗಿ: ‘ಮೀನುಗಾರಿಕೆಗೂ ಸಾಲ ಸೌಲಭ್ಯ ಒದಗಿಸುವ ಸಂಬಂಧ ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಿ, ಹೊಸ ನೀತಿ ಜಾರಿಗೆ ತರಲು ಚಿಂತನೆ ನಡೆದಿದೆ’ ಎಂದು ಮೀನುಗಾರಿಕೆ ಸಚಿವ ಪ್ರಮೋದ್ ಮದ್ವರಾಜ್ ಹೇಳಿದರು.

ಜೇವರ್ಗಿ ತಾಲ್ಲೂಕಿನ ಬೋಸಗಾ (ಬಿ) ಗ್ರಾಮದ ಅಪ್ಪಣ್ಣ ಬೋವಿ ಅವರ ಜಮೀನಿನಲ್ಲಿರುವ ಮೀನು ಹೊಂಡದಲ್ಲಿ ಕೈಗೊಂಡಿರುವ ಮೀನು ಸಾಕಣೆ ಪರಿಶೀಲಿಸಿ, ಅವರು ಮಾತನಾಡಿದರು.

‘ಮೀನು ಸಾಕಣೆ ಮಾಡಲು ಬ್ಯಾಂಕುಗಳು ಸಾಲ ನೀಡುವುದಿಲ್ಲ. ಹೀಗಾಗಿ ಒಳನಾಡು ಮೀನುಗಾರಿಕೆಗೆ ವಿಪುಲ ಅವಕಾಶವಿದ್ದರೂ, ಜನರು ಹಿಂದೇಟು ಹಾಕುವಂತಾಗಿದೆ. ಆದ್ದರಿಂದ ಎಲ್ಲ ಬ್ಯಾಂಕುಗಳ ವ್ಯವಸ್ಥಾಪಕರ ಸಭೆ ನಡೆಸಿ, ಸಾಲ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ಮೀನುಗಾರಿಕೆಯಿಂದ ಕೋಟ್ಯಂತರ ರೂಪಾಯಿ ಆದಾಯ ಪಡೆಯಬಹುದು. ಒಂದು ಎಕರೆ ಪ್ರದೇಶದಲ್ಲಿ ಹೊಂಡ ನಿರ್ಮಿಸಿ, ಮೀನು ಸಾಕಣೆ ಮಾಡಿದರೆ ಒಂದು ವರ್ಷದಲ್ಲಿ ಮೂರು ಸಾವಿರ ಕೆ.ಜಿ ಮೀನುಗಳು ಸಿಗುತ್ತವೆ. ಒಂದು ಕೆ.ಜಿಗೆ ₹100ರಂತೆ ಒಂದು ಎಕರೆಗೆ ₹3 ಲಕ್ಷ ಆದಾಯ ಪಡೆಯಬಹುದು. ಆದ್ದರಿಂದ ಈ ಭಾಗದ ರೈತರು ಮೀನುಗಾರಿಕೆ ಕೃಷಿ ಕೈಗೊಳ್ಳಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ 1.80 ಲಕ್ಷ ಹೆಕ್ಟೇರ್‌ ನೀರಿನ ಮೂಲವಿದ್ದು, ಆ ಪೈಕಿ ಐದು ಸಾವಿರ ಹೆಕ್ಟೇರ್ ನೀರಿನಲ್ಲಿ ಮೀನು ಮರಿಗಳನ್ನು ಉತ್ಪಾದಿಸಲಾಗುವುದು. ಮೀನುಗಾರಿಕೆ ಕೈಗೊಳ್ಳಲು ಮುಂದೆ ಬರುವ ರೈತರಿಗೆ ಇಲಾಖೆಯಿಂದ ಮೀನಿನ ಮರಿಗಳನ್ನು ಉಚಿತವಾಗಿ ಒದಗಿಸಲಾಗುವುದು. ಅಲ್ಲದೆ ತಾಂತ್ರಿಕ ಸಹಕಾರ, ಮಾರ್ಗದರ್ಶನ ಮಾಡಲಾಗುವುದು. ಪ್ರಪಂಪದಲ್ಲಿ ಮೀನಿಗೆ ಅತೀ ಹೆಚ್ಚು ಬೇಡಿಕೆ ಇದೆ. ಆದ್ದರಿಂದ ರೈತರು ಮೀನು ಸಾಕಣೆ ಮಾಡಬೇಕು. ಆ ಮೂಲಕ ಆರ್ಥಿಕವಾಗಿ ಮುಂದೆ ಬರಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ತಿಪ್ಪಣ್ಣಪ್ಪ ಕಮಕನೂರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಂಗಣ್ಣ ಹಣಮಂತಗೋಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅವಧೂತ ಕರ್ಚಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶರಣಬಸಪ್ಪ ಬಿರಾದಾರ, ಮುಖಂಡರಾದ ಡಿ.ವಿ. ಪಾಟೀಲ, ಬಸವರಾಜ ಬೂದಿಹಾಳ, ವೀರಣ್ಣ ಎಸ್. ಇದ್ದರು.

‘ಮತ್ಸ್ಯಾಲಯ ನವೀಕರಣಕ್ಕೆ ₹25 ಲಕ್ಷ ಅನುದಾನ’
‘ಕಲಬುರ್ಗಿಯ ಕಿರು ಮೃಗಾಲಯದ ಆವರಣದಲ್ಲಿನ ಮತ್ಸ್ಯಾಲಯ ನವೀಕರಣ ಕಾಮಗಾರಿಗೆ ₹25 ಲಕ್ಷ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಹೇಳಿದರು.

ಬುಧವಾರ ನವೀಕರಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜಿಲ್ಲಾ ಪಂಚಾಯಿತಿ ₹12 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಆದರೆ ಸುಸಜ್ಜಿತ ಮತ್ಸ್ಯಾಲಯ ನಿರ್ಮಾಣಕ್ಕೆ ₹25 ಲಕ್ಷ ಅನುದಾನದ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರವಾಸೋದ್ಯಮ ಇಲಾಖೆ ಅಥವಾ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯಿಂದ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವನ್ ಯಾಕಾಪುರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT