ADVERTISEMENT

ಮುಖ್ಯಮಂತ್ರಿ ಊಟಕ್ಕೆ ಬೆಳ್ಳಿ ತಟ್ಟೆ ಬಳಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 6:18 IST
Last Updated 24 ಡಿಸೆಂಬರ್ 2017, 6:18 IST

ಕಲಬುರ್ಗಿ: ‘ಸಾಧನಾ ಸಂಭ್ರಮ’ ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಇಲ್ಲಿನ ಐವಾನ್–ಇ–ಶಾಹಿ ಅತಿಥಿ ಗೃಹದಲ್ಲಿ ಊಟಕ್ಕೆ ಬೆಳ್ಳಿತಟ್ಟೆ, ಲೋಟ ಮತ್ತು ಚಮಚ ಬಳಸಲಾಗಿದೆ’ ಎಂದು ಬಿಜೆಪಿ ಮುಖಂಡ ರಾಜಕುಮಾರ ಪಾಟೀಲ ತೇಲ್ಕೂರ ಆರೋಪಿಸಿದ್ದಾರೆ.

‘ಸಿದ್ದರಾಮಯ್ಯ ಅವರು ಡಿ.16ರಂದು ಅತಿಥಿ ಗೃಹದಲ್ಲಿ ತಂಗಿದ್ದರು. ಈ ವೇಳೆ ಅವರಿಗೆ ಬೆಳ್ಳಿತಟ್ಟೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಹೈದರಾಬಾದ್‌ನವರಿಗೆ ಅಡುಗೆಯ ಉಸ್ತುವಾರಿ ನೀಡಲಾಗಿತ್ತು.

ಒಂದು ಊಟಕ್ಕೆ ₹800ನಂತೆ ಒಂದು ಸಾವಿರ ಊಟಕ್ಕೆ ₹8 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಲೋಹಿಯಾವಾದ, ಸಮಾಜವಾದದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಬೆಳ್ಳೆತಟ್ಟೆಯಲ್ಲಿ ಊಟ ಮಾಡಿರುವುದು ಅವರ ನಿಜವಾದ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತಾಗಿದೆ’ ಎಂದು ರಾಜಕುಮಾರ ಪಾಟೀಲ ವ್ಯಂಗ್ಯವಾಡಿದ್ದಾರೆ.

ADVERTISEMENT

‘ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಹಾಗೂ ಮುಖ್ಯಮಂತ್ರಿ ಅವರನ್ನು ಮೆಚ್ಚಿಸಲು ಈ ರೀತಿ ಮಾಡಿದ್ದಾರೆ. ಬೆಳ್ಳಿತಟ್ಟೆಯಲ್ಲಿ ಊಟ ಮಾಡಿರುವುದಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.