ADVERTISEMENT

ಮುಧೋಳ ಸಮಸ್ಯೆ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 5:34 IST
Last Updated 27 ಜುಲೈ 2017, 5:34 IST

ಸೇಡಂ: ‘ತಾಲ್ಲೂಕಿನಲ್ಲಿರುವ ವಿವಿಧ ಸಮಸ್ಯೆಗಳು ಹಾಗೂ ಮುಧೋಳ ಹೋಬಳಿಯ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ದಲಿತ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ವೇದಿಕೆ ಅಧ್ಯಕ್ಷ ವಿಲಾಸ ಗೌತಂ ನಿಡಗುಂದಾ ಮಾತನಾಡಿ, ಸಮಸ್ಯೆಗಳು ತಾಲೂಕಿನಲ್ಲಿ ತಾಂಡವಾಡುತ್ತಿದ್ದರೂ ಸಚಿವ ಶರಣಪ್ರಕಾಶ ಪಾಟೀಲ ಯಾವುದೇ ಸಂಬಂಧವಿಲ್ಲ ಎಂಬಂತೆ ಇದ್ದಾರೆ’ ಎಂದು ಟೀಕಿಸಿದರು.

‘ಮುಧೋಳದಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪನೆ ಮಾಡಬೇಕು. ಪರಿಶಿಷ್ಟರ ಬಡಾವಣೆಯಲ್ಲಿ ಸಮುದಾಯ ಭವನ, ಮಹಿಳಾ ಶೌಚಾಲಯ ನಿರ್ಮಿಸಬೇಕು. ಕೋತ್ತಪಲ್ಲಿ, ಕೃಷ್ಣಾಪೂರ, ತೋಲಮಾಮುಡಿ, ಪಾಕಲಗಳಲ್ಲಿ ದಲಿತರಿಗೆ ಹೋಟೆಲ್‌ಗಳಲ್ಲಿ ಚಹಾ ಹಾಗೂ ನೀರನ್ನು ಪ್ರತ್ಯೇಕವಾಗಿ ಇಡಲಾಗುತ್ತಿದೆ. ಈ ಕೂಡಲೆ ಅಂತಹ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರತಿಗ್ರಾಮದಲ್ಲಿ ಪೊಲೀಸ್ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡು ಸಮಾನತೆಯ ಕುರಿತು ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

‘ಬ್ಯಾಂಕ್‌ಗಳಲ್ಲಿ ರೈತರಿಗೆ ಬೆಳೆ ಸಾಲ ಸಿಗುತ್ತಿಲ್ಲ. ತಾಲ್ಲೂಕಿನ ಕೋಡ್ಲಾ ಗ್ರಾಮದಲ್ಲಿ ಕಳೆದ ಡಿಸೆಂಬರ್ 3ರಂದು ನೀಲಿಧ್ವಜವನ್ನು ಕಿತ್ತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪಾಟೀಲರು ಸ್ಥಳ ಕೊಡುವುದಾಗಿ ನೀಡಿದ್ದ ಭರವಸೆ ವರ್ಷವಾದರೂ ಈಡೇರಿಲ್ಲ. ಕೂಡಲೆ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಜಿಲ್ಲಾಧಿಕಾರಿ ಸ್ಥಳಾವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ದಲಿತ ಮುಖಂಡ ಮಾರುತಿ ಗಂಜಿಗಿರಿ, ಪ್ರಶಾಂತ ಸೇಡಂಕರ್, ಸಂತೋಷ ಕಾಳ, ಸತೀಶ ಡಿ.ಮಾಲೆ, ಮಹಮ್ಮದ್ ಖದೀರ, ಜಾವೀದ, ಸಿದ್ದು ಊಡಗಿ, ಅರುಣಕುಮಾರ, ಹಣಮಂತ ಚಿಂತಪಳ್ಳಿ, ಹುಸೇನಪ್ಪ ತೋಲಮಾಮಿಡಿ, ರವೀಂದ್ರ ಕಾಂಬ್ಳೆ, ಮಹಾವೀರ ಅಳ್ಳೋಳ್ಳಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.