ADVERTISEMENT

ವರ್ಷಕ್ಕೊಂದು ಸಸಿ ಬೆಳೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:35 IST
Last Updated 25 ಏಪ್ರಿಲ್ 2017, 5:35 IST

ಕಲಬುರ್ಗಿ: ‘ಪ್ರಪಂಚದ ಎಲ್ಲ ಜೀವಿಗಳು ನೆಮ್ಮದಿಯಿಂದ ಇರಲು ಪರಿಸರ ನಿರ್ವಹಣೆ ಮುಖ್ಯವಾಗಿದೆ. ಆದರೆ, ಪರಿಸರ ನಾಶ ಮಾಡಿ ಮನುಷ್ಯ ತೊಂದರೆಗೆ ಒಳಗಾಗುತ್ತಿದ್ದಾನೆ. ಪ್ರತಿಯೊಬ್ಬರು ವರ್ಷಕ್ಕೊಂದು ಗಿಡ ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.

ಹೈಕೋರ್ಟ್‌ ಪೀಠದ ಕ್ಲಬ್ ಹೌಸ್‌ನಲ್ಲಿ ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗಿಡಗಳನ್ನು ನೆಡುವುದರಿಂದ ಮುಂದಿನ ಪೀಳಿಗೆ ಉತ್ತಮ ಜೀವನ ನಡೆಸಲು ಅವಕಾಶ ನೀಡಿದಂತಾಗುತ್ತದೆ. ಸಸಿ ನೆಡುವುದು ಮಾತ್ರವಲ್ಲ, ಅದನ್ನು ಒಂದು ಹಂತದವರೆಗೆ ಸಂರಕ್ಷಿಸಬೇಕು’ ಎಂದು ಹೇಳಿದರು.

‘ಹೈಕೋರ್ಟ್‌ ಪೀಠದ ಆವರಣದಲ್ಲಿ ಅವಕಾಶ ಇರುವ ಕಡೆಯಲ್ಲಿ ಸಸಿಗಳನ್ನು ನೆಡಬೇಕು. ಇಲ್ಲಿ ಹಸಿರು ಸೃಷ್ಟಿಸಬೇಕು. ಇದು ಮನುಷ್ಯ, ಪಕ್ಷಿ ಸಂಕುಲದ ಉಳಿವಿಗೆ ಅವಕಾಶ ಮಾಡಿಕೊಡಲಿದೆ’ ಎಂದು ಹೇಳಿದರು.

ADVERTISEMENT

‘ಹಸಿರು ಬೆಳೆಸುವ ಪಣ ತೊಡುವ ಮೂಲಕ ವಿಶ್ವ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದು ಸಲಹೆ ನೀಡಿದರು.

ನ್ಯಾಯಮೂರ್ತಿ ಬಿ.ಎ. ಪಾಟೀಲ ಮಾತನಾಡಿ, ‘ಸಸಿಗಳನ್ನು ನೆಡುವ ಜತೆಗೆ ಅವುಗಳನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಉತ್ತಮ ಪರಿಸರ ಮತ್ತು ಶುದ್ಧ ಗಾಳಿಗೆ ಗಿಡಗಳು ಅವಶ್ಯ. ಅರಳಿಮರಕ್ಕೆ ಪ್ರದಕ್ಷಿಣೆ ಹಾಕಬೇಕು ಎಂದು ಹಿರಿಯರು ಹೇಳುತ್ತಿದ್ದರು.  ಅರಳಿಮರ ವಿಶಾಲವಾಗಿ ಬೆಳೆದು ನೆರಳು, ಉತ್ತಮ ಗಾಳಿ ಮತ್ತು ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ. ಇದರಿಂದ ಮನುಷ್ಯನ ಆರೋಗ್ಯ ಸುಸ್ಥಿಯಲ್ಲಿ ಇರುತ್ತದೆ. ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲರೂ ನಾಂದಿ ಹಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಮಾತನಾಡಿದರು. ನ್ಯಾಯಾಲಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಎಸ್.ವೈ. ವಟವಟಿ ಸ್ವಾಗತಿಸಿ, ಎಸ್.ಆರ್. ಮಾಣಿಕ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.