ADVERTISEMENT

‘ವಿಮೋಚನಾ ದಿನ: ಸಿಎಂ ಕಡ್ಡಾಯವಾಗಿ ಭಾಗಿಯಾಗಲಿ’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 6:09 IST
Last Updated 10 ಸೆಪ್ಟೆಂಬರ್ 2017, 6:09 IST

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಕಡ್ಡಾಯವಾಗಿ ಭಾಗವಹಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಶಾಶ್ವತ ನಿರ್ಣಯವೊಂದನ್ನು ಕೈಗೊಳ್ಳಬೇಕು’ ಎಂದು ಹೈ.ಕ ವಿಮೋಚನಾ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶೀಲ್‌ ಜಿ.ನಮೋಶಿ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಮೋಚನಾ ದಿನಾಚರಣೆ ಇತ್ತೀಚಿನ ವರ್ಷಗಳಲ್ಲಿ ಕಾಟಾಚಾರಕ್ಕೆ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಭಾಗವಹಿಸುವುದಿಲ್ಲ. ಸರ್ದಾರ್ ವಲ್ಲಭಭಾಯಿ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿಲ್ಲ. ಇದರಿಂದ ಹೋರಾಟದ ಮೂಲಕ ಪಡೆದ ವಿಮೋಚನೆಗೆ ಅರ್ಥವೇ ಇಲ್ಲದಂತಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ವಿಮೋಚನಾ ಹೋರಾಟದ ಚರಿತ್ರೆ ಹಾಗೂ ಈ ಭಾಗದ ಇತಿಹಾಸವನ್ನು ಪಠ್ಯದಲ್ಲಿ ಸೇರಿಸಬೇಕು, 371(ಜೆ) ಕಲಂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು, ವರ್ಷಕ್ಕೊಮ್ಮೆ ಸಂಪುಟ ಸಭೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ದಸ್ತಿ, ಕಾರ್ಯದರ್ಶಿ ಸುರೇಶ ನಂದ್ಯಾಳ, ಖಜಾಂಚಿ ಮಾರುತಿ ಪವಾರ್, ಶಿವರಾಜ ಪಾಟೀಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.