ADVERTISEMENT

ಶೆಳ್ಳಗಿ: ನೀರು ನುಗ್ಗಿ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 6:24 IST
Last Updated 16 ಸೆಪ್ಟೆಂಬರ್ 2017, 6:24 IST

ಕಾಳಗಿ: ‘ಸಮೀಪದ ಶೆಳ್ಳಗಿ ಗ್ರಾಮದ ರೈತರ ಹೊಲಗಳಿಗೆ ಬೆಣ್ಣೆತೊರಾ ಜಲಾಶಯದ ನೀರು ನುಗ್ಗಿ ಬೆಳೆ ಹಾಳಾಗಿದೆ’ ಎಂದು ಶೆಳ್ಳಗಿ ಗ್ರಾಮಸ್ಥರು ದೂರಿದ್ದಾರೆ. ‘ಬೆಣ್ಣೆತೊರಾ ಜಲಾಶಯ ನಿರ್ಮಾಣ ಆದಾಗಿನಿಂದ ಆಗಾಗ ಜಲಾಶಯದ ನೀರು ಹೊರಬಿಡಲಾಗುತ್ತಿದೆ. ನೀರು ಬಿಟ್ಟಾಗಲೆಲ್ಲ ಶೆಳ್ಳಗಿಯ ಬಹುತೇಕ ರೈತರ ಜಮೀನಿಗೆ ನುಗ್ಗಿ ಹೊಲ ಕೊಚ್ಚಿ ಹೋಗುವುದರ ಜತೆಗೆ ಹೆಸರು, ಉದ್ದು, ತೊಗರಿ ಬೆಳೆ ಹಾಳಾಗುತ್ತಿದೆ’ ಎಂದು ರೈತ ಈರಣ್ಣ ವರನಾಳ ತಿಳಿಸಿದ್ದಾರೆ.

‘ಮೂರು ವರ್ಷಗಳಿಂದ ವರ್ಷಕ್ಕೊಮ್ಮೆಯಾದರು ನೀರು ಹೊರ ಬಿಡಲಾಗುತ್ತಿದೆ. ಆದರೆ, ಆ ನೀರು ಎಡದಂಡೆ ಕಾಲುವೆಗೆ ಹರಿಸುವ ಬದಲು ನೇರವಾಗಿ ಗೇಟ್ ಮುಖಾಂತರ ಹಳ್ಳಕ್ಕೆ ಬಿಡುತ್ತಿರುವುದರಿಂದ ತಗ್ಗುಪ್ರದೇಶದ ಎಲ್ಲ ಹೊಲಗಳಿಗೆ ನುಗ್ಗಿ ಬಡರೈತರ ಹೊಲ ಹಾಳಾಗಿ ಬೆಳೆ ನಷ್ಟವಾಗುತ್ತಿದೆ’ ಎಂದು ರೈತರು ಹೇಳಿದ್ದಾರೆ.

‘ಹಾನಿ ಕುರಿತು ಜನಪ್ರತಿನಿಧಿಗಳು, ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸರ್ವೆ ಮಾಡಿ ಪರಿಹಾರ ನೀಡುವಂತೆ ಕೋರಲಾಗಿದೆ. ಆದರೆ, ಅಧಿಕಾರಿಗಳು ನಷ್ಟ ಉಂಟಾದಲ್ಲಿ ಸರ್ವೆ ಮಾಡಿ ಪರಿಹಾರ ನೀಡುವುದನ್ನು ಬಿಟ್ಟು ಬೇರೆ ಸ್ಥಳದಲ್ಲಿ ಸರ್ವೆ ಮಾಡಿ ಬೆಳೆ ಹಾಳಾಗದ ರೈತರಿಗೆ ಪರಿಹಾರ ನೀಡಿದ್ದಾರೆ’ ಎಂದು ಭಾರತೀಯ ದಲಿತ ಪ್ಯಾಂಥರ್ಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಕಾಶಿನಾಥ ಶೆಳ್ಳಗಿ ಆರೋಪಿಸಿದರು.

ADVERTISEMENT

‘ಗುರುವಾರ, ಶುಕ್ರವಾರ ಮಳೆಯಾಗಿದ್ದು, ಜಲಾಶಯದ ನೀರು ಹೊರಬಿಡಲಾಗಿದೆ. ಆ ನೀರು ಎಂದಿನಂತೆ ಶೆಳ್ಳಗಿ ರೈತರ ಹೊಲಗಳಿಗೆ ನುಗ್ಗಿ ಬದುಗಳು ಕೊಚ್ಚಿಹೋಗಿ ಹಳ್ಳದಂತೆ ನಿಂತುಕೊಂಡಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಜಮೀನು ಮತ್ತು ಬೆಳೆ ನಷ್ಟವಾಗಿರುವ ಬಗ್ಗೆ ಪರಿಶೀಲಿಸಿ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಕಾಳಗಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದಿದ್ದು, ಸೆ.14ರಂದು 50 ಮಿ.ಮೀ ಹಾಗೂ ಸೆ.15ರಂದು 20 ಮಿ.ಮೀ ಮಳೆಯಾಗಿದೆ.
‘ಬೆಣ್ಣೆತೊರಾ ಜಲಾಶಯದಿಂದ ಶುಕ್ರವಾರ 1,100 ಕ್ಯುಸೆಕ್‌ ನೀರು ಹೊರಬಿಡಲಾಗಿದೆ’ ಎಂದು ಜಲಾಶಯದ ಎಇ ಪ್ರೇಮ್‌ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.