ADVERTISEMENT

‘ಸಕಾರಾತ್ಮಕ ಚಿಂತನೆ ಅಗತ್ಯ’ 

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 9:11 IST
Last Updated 16 ಏಪ್ರಿಲ್ 2018, 9:11 IST
ಕಲಬುರ್ಗಿಯ ದೊಡ್ಡಪ್ಪ ಅಪ್ಪ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ವಿನೋದಕುಮಾರ ಎಲ್.ಪತಂಗೆ ಇದ್ದರು
ಕಲಬುರ್ಗಿಯ ದೊಡ್ಡಪ್ಪ ಅಪ್ಪ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ವಿನೋದಕುಮಾರ ಎಲ್.ಪತಂಗೆ ಇದ್ದರು   

ಕಲಬುರ್ಗಿ: ‘ಮಾನಸಿಕ ಆರೋಗ್ಯಕ್ಕೆ ಸಕಾರಾತ್ಮಕ ಚಿಂತನೆ, ರಾಜಯೋಗ ಮತ್ತು ಧ್ಯಾನದ ಆವಶ್ಯಕತೆ ಇದೆ’ ಎಂದು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಹೇಳಿದರು.

ಸೇಡಂ ರಸ್ತೆಯ ಬ್ರಹ್ಮಕುಮಾರಿ ರಿಟ್ರೀಟ್ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಮಧುಮೇಹದ ಕಾರಣ, ನಿವಾರಣೆ ಹಾಗೂ ಜೀವನ ಶೈಲಿಯ ಪರಿವರ್ತನಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಶ್ರೀಮಂತಕುಮಾರ ಸಾಹು ಮಾತನಾಡಿ, ‘ಇಂದಿನ ಅಸಂತುಲಿತ ಜೀವನ ಶೈಲಿಯಿಂದಾಗಿ ನಾವು ಮಧುಮೇಹ ತೊಂದರೆಯಿಂದ ಬಳಲುವಂತಾಗಿದೆ. ಪ್ರತಿ ವರ್ಷ ಸಾವಿರಾರು ಜನರು ಮಧುಮೇಹ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಮಧುಮೇಹದಿಂದ ಹೃದ್ರೋಗ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಮಧುಮೇಹದ ಬಗ್ಗೆ ಜಾಗೃತಿ ಹೊಂದಬೇಕು’ ಎಂದು ತಿಳಿಸಿದರು.

ADVERTISEMENT

ಬ್ರಹ್ಮಕುಮಾರಿ ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ಪ್ರೇಮ ಭಾಯ್, ರಾಜಯೋಗಿನಿ ವಿಜಯಾ ದೀದಿ, ಭಾರತೀಯ ವೈದ್ಯಕೀಯ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕಿರಣಕುಮಾರ ದೇಶಮುಖ, ಚಿರಾಯು ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ ದೋಶೆಟ್ಟಿ, ತಪಾಡಿಯಾ, ಪ್ರೇಮಚಂದ ಮಾಲು, ಉಮೇಶ ಶೆಟ್ಟಿ, ರಿಟ್ರೀಟ್ ಸೆಂಟರ್‌ನ ಸಂಚಾಲಕಿ ಶಿವಲೀಲಾ ಇದ್ದರು.

‘ಅಂಬೇಡ್ಕರ್ ಶ್ರೇಷ್ಠ ಚಿಂತಕ’

ಕಲಬುರ್ಗಿ: ‘ಡಾ. ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಠ ಚಿಂತಕ, ಅರ್ಥಶಾಸ್ತ್ರಜ್ಞ, ಸಂವಿಧಾನ ಶಿಲ್ಪಿ, ಕಾನೂನು ತಜ್ಞ ಹಾಗೂ ನಿಜವಾದ ರಾಷ್ಟ್ರೀಯವಾದಿಯಾಗಿದ್ದರು’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ಸದಸ್ಯೆ ಪ್ರೊ.ಸುಷ್ಮಾ ಯಾದವ್ ಹೇಳಿದರು.

ಆಳಂದ ತಾಲ್ಲೂಕು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಮಹಾನ್ ಜ್ಞಾನಿಗಳಾಗಿದ್ದರು, ಅನೇಕ ವಿಷಯಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದರು. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ತುಳಿತಕ್ಕೊಳಗಾದ ಜನರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೆ ಮುಡಿಪಾಗಿಟ್ಟಿದ್ದರು’ ಎಂದು ತಿಳಿಸಿದರು.

ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಮಾತನಾಡಿದರು. ಸಮ ಕುಲಪತಿ ಪ್ರೊ.ಜಿ.ಆರ್.ನಾಯಕ್, ಕುಲಸಚಿವ ಪ್ರೊ.ಚಂದ್ರಕಾಂತ ಯಾತನೂರ, ಹಣಕಾಸು ಅಧಿಕಾರಿ ಎಸ್.ಶಿವಾನಂದಂ ಇದ್ದರು.

ಬಿಜೆಪಿಗೆ ನೇಮಕ

ಕಲಬುರ್ಗಿ: ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ಸಹ ಸಂಚಾಲಕರಾಗಿ ಪ್ರವೀಣ ಡಿ.ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ನಗರ ಘಟಕದ ಅಧ್ಯಕ್ಷ ಬಿ.ಜಿ.ಪಾಟೀಲ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ನೇಮಕ

ಕಲಬುರ್ಗಿ: ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಸಂಘಟನಾ ಕಾರ್ಯದರ್ಶಿಯನ್ನಾಗಿ ನರ್ಮದಾ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪ್ರಭಾವತಿ ಡಿ. ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.