ADVERTISEMENT

‘ಹಸಿರು ಕಲಬುರ್ಗಿಗೆ ಎಲ್ಲರ ಸಹಕಾರ ಅಗತ್ಯ’

ಸ್ವಚ್ಛತೆಯ ಜಾಗೃತಿ ಮೂಡಿಸಲು ಪಾಲಿಕೆಯಿಂದ ಮ್ಯಾರಥಾನ್ lನಾಗರಿಕರಿಗೆ ಬಳಕೆ ಮಾಡಿದ ಪ್ಲಾಸ್ಟಿಕ್ ಸಂಗ್ರಹಿಸುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 8:23 IST
Last Updated 16 ಜನವರಿ 2017, 8:23 IST
‘ಹಸಿರು ಕಲಬುರ್ಗಿಗೆ ಎಲ್ಲರ ಸಹಕಾರ ಅಗತ್ಯ’
‘ಹಸಿರು ಕಲಬುರ್ಗಿಗೆ ಎಲ್ಲರ ಸಹಕಾರ ಅಗತ್ಯ’   

ಕಲಬುರ್ಗಿ: ಸ್ವಚ್ಛ ಮತ್ತು ಹಸಿರು ಕಲಬುರ್ಗಿ ಕುರಿತು ನಗರದ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ವತಿಯಿಂದ ಭಾನುವಾರ ಮ್ಯಾರಥಾನ್ ನಡೆಯಿತು.

ಮ್ಯಾರಥಾನ್‌ನಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ವಿದ್ಯಾರ್ಥಿಗಳು, ನಾಗರಿಕರು, ಪೌರ ಕಾರ್ಮಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಜಗತ್ ವೃತ್ತದಿಂದ ಆರಂಭವಾದ ಮ್ಯಾರಥಾನ್ ಎಸ್‌ವಿಪಿ ವೃತ್ತದ ಮೂಲಕ ಸಂಚರಿಸಿ ಟೌನ್‌ಹಾಲ್ ಬಳಿ ಮುಕ್ತಾಯವಾಯಿತು.

ಮ್ಯಾರಥಾನ್‌ನಲ್ಲಿ ಯಲ್ಲಪ್ಪ (ಪ್ರಥಮ, ₹ 5 ಸಾವಿರ), ಮಹಮದ್ ಇರ್ಫಾನ್‌ (ದ್ವಿತೀಯ, ₹ 3 ಸಾವಿರ), ಆರ್‌.ಜಿ. ಪೃಥ್ವಿ (ತೃತೀಯ, ₹ 2 ಸಾವಿರ) ಮತ್ತು ಅಂಕುರ ಕುಮಾರ (ನಾಲ್ಕನೇ, ₹1ಸಾವಿರ) ಬಹುಮಾನ ಪಡೆದರು.

ವಿಜೇತರಿಗೆ ಬಹುಮಾತ ವಿತರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಬೇಸಿಗೆಯಲ್ಲಿ ತಾಪಮಾನವನ್ನು ಕಡಿಮೆ ಮಾಡಲು ನಗರದಲ್ಲಿ ಹೆಚ್ಚು ಹೆಚ್ಚು ಸಸಿಗಳನ್ನು ನೆಡಬೇಕು.

ಹಸಿರು ಕಲಬುರ್ಗಿ ಸಂಸ್ಥೆಯವರು ಈಗಾಗಲೇ ಗಿಡ ನೆಡುವ ಕೆಲಸ ಆರಂಭಿಸಿದ್ದಾರೆ. ಪ್ರತಿ ಮನೆಯಲ್ಲಿ ಒಂದು ಸಸಿ ನೆಡುವ ಮೂಲಕ ‘ಹಸಿರು ಕಲಬುರ್ಗಿ’ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಗರದ ಮೆಹಬೂಬ್ ಹುಸೇನ್ ಉದ್ಯಾನದ ಅಭಿವೃದ್ಧಿಗೆ ₹2 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಕಲಬುರ್ಗಿಯನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ಕೇವಲ ಸರ್ಕಾರ, ಪಾಲಿಕೆಯಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕರು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

ನಗರದ ಸ್ವಚ್ಛತೆಗಾಗಿ ಪಾಲಿಕೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಹಿಂದೆ ಸ್ವಚ್ಛತೆಗಾಗಿ ₹12 ಕೋಟಿ ವೆಚ್ಚ ಮಾಡಲಾಗುತ್ತಿತ್ತು. ಈಗ ಅದನ್ನು ₹20 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ನಗರವನ್ನು ಬಯಲು ಶೌಚಮುಕ್ತಗೊಳಿಸಲು ಎಚ್‌ಕೆಆರ್‌ಡಿಬಿಯಿಂದ ಸಹಕಾರ ನೀಡಲಾಗುವುದು. ಈಗಾಗಲೆ ಮದ್ರಾಸ್, ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿ ಇ–ಶೌಚಾಲಯಗಳು ಇವೆ. ಪ್ರಥಮ ಹಂತದಲ್ಲಿ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ 6 ಇ–ಶೌಚಾಲಯಗಳನ್ನು ಅಳವಡಿಸಲಾಗುವುದು. ಅವು ಯಶಸ್ವಿಯಾದರೆ ಇಡೀ ನಗರಕ್ಕೆ ಈ ಸೌಲಭ್ಯ ವಿಸ್ತರಿಸಲಾಗುವುದು ಎಂದು ಹೇಳಿದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಕೇಂದ್ರದ ಸ್ವಚ್ಛ ಸರ್ವೇಕ್ಷಣ ಸಮೀಕ್ಷಾ ತಂಡವು ನಗರಕ್ಕೆ ಭೇಟಿ ನೀಡಿ ಸ್ವಚ್ಛತೆ ಕುರಿತು ಮಾಹಿತಿ ಸಂಗ್ರಹಿಸಲಿದೆ. ಸಮೀಕ್ಷೆಯಲ್ಲಿ ನಗರಕ್ಕೆ ಹೆಚ್ಚು ರೇಟಿಂಗ್‌ ಬಂದರೆ ಕೇಂದ್ರ ಸರ್ಕಾರವು ಕಲಬುರ್ಗಿಯನ್ನು ‘ಸ್ಮಾರ್ಟ್ ಸಿಟಿ’ ಮಾಡಲಿದೆ. ಹೀಗಾಗಿ ನಗರದ ಸ್ವಚ್ಛತೆಗೆ ಎಲ್ಲ ನಾಗರಿಕರು ಸಹಕಾರ ನೀಡಬೇಕು ಎಂದು ಹೇಳಿದರು.

ಪಾಲಿಕೆ ಆಯುಕ್ತ ಪಿ.ಸುನಿಲ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದರೂ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಕೋರಿದರು.

ಈ ಹಿಂದೆ ಮನೆ ಮನೆಯಿಂದ ಕಸ ಸಂಗ್ರಹ ಮಾಡುತ್ತಿರಲಿಲ್ಲ. ಕಳೆದ ಒಂದು ವರ್ಷದಿಂದ ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಬೆಳಗಿನ ಉಪಾಹಾರ ನೀಡಲಾಗುತ್ತಿದ್ದು, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೇ, ಪಾಲಿಕೆಯಿಂದ ಗ್ಯಾಸ್ ಸ್ಟೌವ್‌, ಮನೆಗಳನ್ನು ನೀಡಲಾಗಿದೆ. ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ಹೇಳಿದರು.

ನಗರದ ಸ್ವಚ್ಛತೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಪೌರ ಕಾರ್ಮಿಕರು ಕಸ ಸಂಗ್ರಹಿಸಲು ಬಂದಾಗ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಕೊಡಬೇಕು. ಇದರಿಂದ ಸ್ವಚ್ಛತೆ ಕಾಪಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬ್ಯಾಕ್‌ ಸ್ಟ್ರೀಟ್ ತಂಡದವರು ಸ್ವಚ್ಛ ಭಾರತ ಅಭಿಯಾನದ ಕುರಿತು ಪ್ರದರ್ಶಿಸಿದ ಕಿರು ನಾಟಕ ಗಮನ ಸೆಳೆಯಿತು.

ಪ್ಲಾಸ್ಟಿಕ್ ಸಂಗ್ರಹಿಸುವ ಸ್ಪರ್ಧೆ: ಮ್ಯಾರಥಾನ್ ಅಂಗವಾಗಿ ಪೌರಕಾರ್ಮಿಕರು, ನಾಗರಿಕರು ಮತ್ತು ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳಿಗೆ ಬಳಕೆ ಮಾಡಿದ ಪ್ಲಾಸ್ಟಿಕ್ ಸಂಗ್ರಹಿಸುವ ಸ್ಪರ್ಧೆ ನಡೆಯಿತು. ಮೂರು ಗಂಟೆ ಸಮಯ ನೀಡಲಾಗಿತ್ತು. ಈ ಅವಧಿಯಲ್ಲಿ 529 ಕೆ.ಜಿ ಸಂಗ್ರಹಿಸಿದ ತಂಡಕ್ಕೆ ಪ್ರಥಮ (₹10 ಸಾವಿರ), 371 ಕೆ.ಜಿ ಸಂಗ್ರಹಿಸಿದ ತಂಡಕ್ಕೆ ದ್ವಿತೀಯ (₹7,500) ಮತ್ತು 179 ಕೆ.ಜಿ ಸಂಗ್ರಹಿಸಿದ ತಂಡಕ್ಕೆ ತೃತೀಯ (₹5 ಸಾವಿರ) ಬಹುಮಾನ ವಿತರಿಸಲಾಯಿತು.

ಆಯುಕ್ತರೊಂದಿಗೆ ಪೌರ ಕಾರ್ಮಿಕರ ವಾಗ್ವಾದ:ಪಾಲಿಕೆ ಆಯುಕ್ತ ಪಿ.ಸುನಿಲ್‌ಕುಮಾರ್ ಅವರು ಭಾಷಣ ಮಾಡುತ್ತಿದ್ದ ವೇಳೆ 81 ಮಂದಿ ಪೌರ ಕಾರ್ಮಿಕರಿಗೆ ಗ್ಯಾಸ್ ಸ್ಟೌವ್‌, 45 ಮಂದಿಗೆ ಮನೆ ವಿತರಿಸಲಾಗಿದೆ ಎಂದು ಹೇಳಿದರು.

ADVERTISEMENT

ಈ ವೇಳೆ ಅಲ್ಲಿ ಹಾಜರಿದ್ದ ಕೆಲವು ಪೌರಕಾರ್ಮಿಕರು ತಮಗೆ ಮನೆಗಳನ್ನು ನೀಡಿಲ್ಲ. ಸುಳ್ಳು ಹೇಳಲಾಗುತ್ತಿದೆ ಎಂದು ಆರೋಪಿಸಿದರು. ಆಗ ಅವರ ಬಳಿ ಬಂದ ಆಯುಕ್ತರು ಈ ಕುರಿತು ಪರಿಶೀಲಿಸಲಾಗುವುದು ಎಂದು ಅವರನ್ನು ಸಮಾಧಾನಪಡಿಸಿದರು.
ಪೌರಕಾರ್ಮಿಕರೊಂದಿಗೆ ಉಪಾಹಾರ: ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರ ಕಾರ್ಮಿಕರೊಂದಿಗೆ ಸಚಿವರು, ಶಾಸಕರು, ಮೇಯರ್‌ ಹಾಗೂ ಆಯುಕ್ತರು ಉಪಾಹಾರ ಸೇವಿಸಿದರು. ಶರಣಪ್ರಕಾಶ ಪಾಟೀಲ ಪೌರ ಕಾರ್ಮಿಕರಿಗೆ ಬಿಸಿ ಬೇಳೆ ಬಾತ್ ಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.