ADVERTISEMENT

11 ತಿಂಗಳಲ್ಲಿ ವಿಮಾನಯಾನ ಖಚಿತ: ಖರ್ಗೆ

ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಮಲ್ಲಿಕಾರ್ಜುನ ಖರ್ಗೆ, ಅಧಿಕಾರಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 4:41 IST
Last Updated 22 ಏಪ್ರಿಲ್ 2017, 4:41 IST
11 ತಿಂಗಳಲ್ಲಿ ವಿಮಾನಯಾನ ಖಚಿತ: ಖರ್ಗೆ
11 ತಿಂಗಳಲ್ಲಿ ವಿಮಾನಯಾನ ಖಚಿತ: ಖರ್ಗೆ   
ಕಲಬುರ್ಗಿ: ‘ನಾನು ಬೆನ್ನು ಬಿದ್ದು ಕೆಲಸ ಮಾಡಿಸಿಕೊಳ್ಳುತ್ತಿದ್ದೇನೆ. ಕಲಬುರ್ಗಿ ವಿಮಾನ ನಿಲ್ದಾಣದ ಕಾಮಗಾರಿ 2018ರ ಜನವರಿ ವೇಳೆಗೆ ಪೂರ್ಣಗೊಳ್ಳಲಿದ್ದು, ಮಾರ್ಚ್‌ ತಿಂಗಳಲ್ಲಿ ಇಲ್ಲಿಂದ ವಿಮಾನ ಸೇವೆ ಆರಂಭಗೊಳ್ಳುವುದು ಖಚಿತ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
 
ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದರು.
 
‘ಹೈದರಾಬಾದ್‌–ಬೆಂಗಳೂರು, ಹೈದರಾಬಾದ್‌–ಮುಂಬೈ ಮಧ್ಯೆ ಈ ಮಾರ್ಗವಾಗಿ ಎಷ್ಟು ವಿಮಾನಗಳು ಸಂಚರಿಸುತ್ತಿವೆ ಎಂದು ಸಮೀಕ್ಷೆ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಇಲ್ಲಿನ ಬಿದ್ದಾಪುರದಲ್ಲಿ ಅಳವಡಿಸಿರುವ ಫ್ರಿಕ್ವೆನ್ಸಿ ಯಂತ್ರವನ್ನು ಈ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳಲಿದೆ’ ಎಂದರು.
 
‘ಮುಖ್ಯಮಂತ್ರಿ ಹಾಗೂ ರಾಜ್ಯದ ಸಚಿವರ ಕೈಕಾಲು ಹಿಡಿದು ಸಂಪುಟದ ಅನುಮೋದನೆ, ಅನುದಾನ ತಂದಿದ್ದೇನೆ. ಈಗಲೂ ಅಷ್ಟೇ, ಒಡಂಬಡಿಕೆ ಮಾಡಿಸುತ್ತೇನೆ. ಕಾಮಗಾರಿ ಪೂರ್ಣಗೊಂಡ ನಂತರ ವಿಮಾನಯಾನ ಸಚಿವರನ್ನು ಭೇಟಿಯಾಗಿ ತಾಂತ್ರಿಕ ಅನುಮೋದನೆ ಕೊಡಿಸುತ್ತೇನೆ’ ಎಂದು ಹೇಳಿದರು.
 
ಮೊದಲ ಹಂತ ಪೂರ್ಣ: ‘ಈಗಾಗಲೇ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, 2ನೇ ಹಂತದ ಕಾಮಗಾರಿಯ ಟೆಂಡರ್‌ಗೆ ಸಂಪುಟ ಅನುಮೋದನೆ ನೀಡಿದೆ. 3ನೇ ಹಂತದ ₹15.90 ಕೋಟಿ ವೆಚ್ಚದ ಕಾಮಗಾರಿಗೆ ಶೀಘ್ರ ಟೆಂಡರ್ ಕರೆಯಲಾಗುವುದು.
 
ಈ ವರೆಗೆ ವಿಮಾನ ನಿಲ್ದಾಣದ ಶೇ 40ರಷ್ಟು ಭೌತಿಕ ಮತ್ತು ಶೇ 35ರಷ್ಟು ಆರ್ಥಿಕ ಪ್ರಗತಿಯಾಗಿದೆ. ಕಾಮಗಾರಿಗೆ ಯಾವುದೇ ಹಣಕಾಸಿನ, ಭೂಮಿಯ ಹಾಗೂ ತಾಂತ್ರಿಕ ಸಮಸ್ಯೆ ಇಲ್ಲ’ ಎಂದು ಹೇಳಿದರು.
 
ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್, ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನಿಲಕುಮಾರ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಭವರನ್, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರಮೋದ್‌ ರೆಡ್ಡಿ, ಸೂಪರಿಂಟೆಂಡಿಂಗ್ ಎಂಜಿನಿಯರ್ ಪ್ರಕಾಶ ಶ್ರೀಹರಿ, ಕಾರ್ಯನಿರ್ವಾಹಕ ಎಂಜಿನಿಯರ್ ಮಹ್ಮದ್ ಅಜೀಜುದ್ದೀನ್ ಅವರು ಕಾಮಗಾರಿ ಪ್ರಗತಿ ಬಗ್ಗೆ ವಿವರಿಸಿದರು. 
****
‘ವಿದೇಶಿ ಕುರ್ಚಿ ಬೇಡ, ಸ್ವದೇಶಿ ಇರಲಿ’
ಕಲಬುರ್ಗಿ:
‘ವಿಮಾನ ನಿಲ್ದಾಣಕ್ಕೆ ನೀವು ಅಮೆರಿಕಾದಿಂದ ಕುರ್ಚಿಗಳನ್ನು ತರುವುದು ಬೇಡ. ರಿಪೇರಿಗೆ ಅವುಗಳನ್ನು ಅಮೆರಿಕಾಗೆ ತೆಗೆದುಕೊಂಡು ಹೋಗಲು ಆಗುತ್ತದೆಯೇ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಶುಕ್ರವಾರ ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ವೇಳೆ ಅಧಿಕಾರಿಯೊಬ್ಬರು, ‘ಇವರು ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಪೀಠೋಪಕರಣ ಪೂರೈಸಲು ಬಯಸಿದ್ದು,  ಅವುಗಳ ಬಗೆಗೆ ಮಾಹಿತಿ ನೀಡಲಿದ್ದಾರೆ’ ಎಂದರು.

ಪೂರೈಕೆದಾರರೊಬ್ಬರು, ಲ್ಯಾಪ್‌ಟಾಪ್‌ ಹಿಡಿದುಕೊಂಡು ವಿವರಣೆ ನೀಡಲು ಮುಂದಾದರು. ಅವರನ್ನು ತಡೆದ ಖರ್ಗೆ, ‘ನೋಡ್ರಿ, ನಮಗ ಅಮೆರಿಕಾ ಕುರ್ಚಿಗಳು ಬ್ಯಾಡ. ಅವು ಮುರಿದ್ರ ರಿಪೇರಿಗೆ ಅಲ್ಲಿಗೇ ಕಳಸಾಕ್‌ ಆಕೈತೇನು? ಬ್ಯಾರೆ ಬ್ಯಾರೆ ವಿಮಾನ ನಿಲ್ದಾಣದಲ್ಲಿನ ಕುರ್ಚಿಗಳ ಸ್ಥಿತಿಗತಿ ನನಗ ಗೊತ್ತು. ನಮ್ಮ ಜನ ಕುರ್ಚಿಗಳ ಮ್ಯಾಲೆ ಹತ್ತಿ ನಿಂತ್ರೂ ಅವು ಮುರಿಬಾರ್ದು. ಅಷ್ಟು ಮಜಬೂತ್ ಇರಬೇಕು’ ಎಂದರು.


‘ಹೌದು ಸರ್‌, ನಾವು ನೆದರ್‌ಲೆಂಡ್‌ನಿಂದ ಕುರ್ಚಿ ತರಿಸುತ್ತೇವೆ’ ಎಂದು ಆ ಪೂರೈಕೆದಾರ ಹೇಳಿದರು.‘ಇದು ನಾಲ (ಕುದುರೆ ಕಾಲಿಗೆ ಅಳವಡಿಸುವ ಕಬ್ಬಿಣದ ಉಪಕರಣ) ಪುಕ್ಕಟ್ಟೇ ಸಿಗುತ್ತದೆ ಎಂದು ಕುದುರೆ ಖರೀದಿಸಿದ ಹಂಗ ಆಕೈತಿ. ನೀವು ಪುಣೆ, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿನ ಪೀಠೋಪಕರಣ ನೋಡಿ ಬರ್ರಿ’ ಎಂದರು ಖರ್ಗೆ .

‘ಬಾಳಿಕೆ ಬರುವ, ಸ್ಥಳೀಯವಾಗಿ ರಿಪೇರಿ ಆಗುವ ಮತ್ತು ತಕ್ಷಣಕ್ಕೆ ಲಭ್ಯ ಇರುವ ಪೀಠೋಪಕರಣ ಖರೀದಿಸಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
****
ಬೆರಳಿನಿಂದ ಅಳೆದ ಖರ್ಗೆ
ವಿಮಾನ ನಿಲ್ದಾಣದ ರನ್‌ವೇ ಪರಿಶೀಲನೆ ನಡೆಸಿದ ಖರ್ಗೆ ಅವರು, ‘ರನ್‌ವೇ ಡಾಂಬರೀಕರಣ ಕಾಮಗಾರಿ ಎಷ್ಟು ದಪ್ಪ ಇದೆ’ ಎಂದು ಕೇಳಿದರು. ‘ನಾಲ್ಕು ಇಂಚು ಇದೆ’ ಎಂದು ಅಧಿಕಾರಿಗಳು ಉತ್ತರಿಸಿದರು.

ಕಾಮಗಾರಿ ಮಧ್ಯೆ ಪರಿಶೀಲನೆಗೆ ಬಿಟ್ಟಿರುವ ಹೋಲ್‌ನಲ್ಲಿ ಖರ್ಗೆ ಕೈತೂರಿಸಿದರು. ಆ ನಂತರ ಪ್ರಾದೇಶಿಕ ಆಯುಕ್ತ ಅಮ್ಲನ್‌ ಆದಿತ್ಯ ಬಿಸ್ವಾಸ್ ಅವರು ಆ ಹೋಲ್‌ನಲ್ಲಿ ಕೈಹಾಕಿ ಅದು ಎಷ್ಟು ಆಳ ಇದೆ ಎಂದು ಗುರುತಿಸಿದರು. ಖರ್ಗೆ ಅವರು ಅಮ್ಲನ್‌ ಅವರ ಕೈ ಮೇಲೆ ತಮ್ಮ ಬೆರಳು ಇಟ್ಟು ಅಳತೆ ಮಾಡಿ ಖಚಿತಪಡಿಸಿಕೊಂಡರು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.