ADVERTISEMENT

ಚಿತ್ತಾಪುರ | ಶ್ರೀಶೈಲ ಮಲ್ಲಿಕಾರ್ಜುನ ಗೋಪುರಕ್ಕೆ 'ನಾಗಾವಿ ಪಟಗಾ'

ಮಲ್ಲಿಕಾರ್ಜುನ ಎಚ್.ಮುಡಬೂಳಕರ್
Published 19 ನವೆಂಬರ್ 2023, 5:53 IST
Last Updated 19 ನವೆಂಬರ್ 2023, 5:53 IST
ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ತಾಣ, ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿದ್ದ ನಾಗಾವಿ ಅಗ್ರಹಾರದ (ಪುರಾತನ ಗ್ರಾಮ) ಪ್ರವೇಶ ದ್ವಾರ
ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ತಾಣ, ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿದ್ದ ನಾಗಾವಿ ಅಗ್ರಹಾರದ (ಪುರಾತನ ಗ್ರಾಮ) ಪ್ರವೇಶ ದ್ವಾರ    

ಚಿತ್ತಾಪುರ: ವೀರಶೈವ ಲಿಂಗಾಯತರ ಆರಾಧ್ಯ ದೈವವಾದ ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವರ ಗರ್ಭಗುಡಿಯ ಗೋಪುರಕ್ಕೆ ಮಹಾಶಿವರಾತ್ರಿ ಉತ್ಸವದ ದಿವಸ ಸುತ್ತುವ ಪಟಗಾ (ಅರಿವೆ) ಪುರಾತನ ಕಾಲದಲ್ಲಿ ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ನಾಗಾವಿಯಲ್ಲಿ ನೇಯಲಾಗುತ್ತಿತ್ತು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಶಿವರಾತ್ರಿಯಂದು ಆಚರಿಸುವ ಉತ್ಸವದಲ್ಲಿ ಮಲ್ಲಿಕಾರ್ಜುನ ದೇವರ ಗರ್ಭಗುಡಿಯ ಗೋಪುರಕ್ಕೆ (ಕಳಸಕ್ಕೆ) 180 ಮೀಟರ್ ಉದ್ದದ ಮಂಗಲ ಪಟಗಾ (ಮಂಗಲ ಪಾಗಾ) ಕಟ್ಟುವ ವಿಶೇಷ ಆಚರಣೆ ಪುರಾತನ ಕಾಲದಲ್ಲಿ ವೈಭದಿಂದ ನಡೆಯುತ್ತಿತ್ತು. ಶ್ರೀಶೈಲದ ಮಲ್ಲಿಕಾರ್ಜುನನಿಗಾಗಿ ನಾಗಾವಿಯಲ್ಲಿನ ನೇಕಾರ ಪ್ರತಿ ದಿವಸ ಒಂದು ಅಡಿಯಷ್ಟು ಪಟಗಾ ನೇಯುತ್ತಿದ್ದ. ವರ್ಷಪೂರ್ತಿ ಒಟ್ಟು 365 ಅಡಿಯಷ್ಟು ಉದ್ದಳತೆಯ ಪಟಗಾ ನೇಯುತ್ತಿದ್ದ ಎಂದು ಇತಿಹಾಸ ಹೇಳುತ್ತಿದೆ.

ಧಾರ್ಮಿಕ ಸಂಪ್ರದಾಯಗಳ ಪದ್ಧತಿಯಂತೆ ನಾಗಾವಿಯಲ್ಲಿ ಪಟಗಾ ನೇಯುವ ನೇಕಾರ ಕೆಲವು ಧಾರ್ಮಿಕ ವಿಧಿ ನಿಯಮಗಳನ್ನು ಪಾಲಿಸಿ ಶ್ರದ್ದಾಭಕ್ತಿಯಿಂದ ಪಟಗಾ ನೇಯುತ್ತಿದ್ದನು. ಮಹಾಶಿವರಾತ್ರಿ ದಿನ ನೇಕಾರನು ಶ್ರೀಶೈಲದಲ್ಲಿನ ಮಲ್ಲಿಕಾರ್ಜುನ ದೇವರ ಗರ್ಭಗುಡಿ ಗೋಪುರಕ್ಕೆ, ನಂದಿಗೆ, ಮುಖಮಂಟಪಕ್ಕೆ ಪಟಗಾ ಸುತ್ತುತ್ತಿದ್ದನು ಎಂದು 'ಶ್ರೀಶೈಲಂ ಇತಿಹಾಸ' (1974) ಮತ್ತು 'ಶ್ರೀಶೈಲಂ ಮಂದಿರ ಕೈಫಿಯತ್ತಿ'ನಲ್ಲಿ (1981) ದಾಖಲಾಗಿದ್ದು ಗರ್ಮನಾರ್ಹವಾಗಿದೆ.

ADVERTISEMENT

ಮಹಾಶಿವರಾತ್ರಿ ಉತ್ಸವ ಆಚರಣೆ ನಂತರದ ಹುಣ್ಣಿಮೆಯಂದು 'ಪಟಗಾ' ಕೆಳಗಿಳಿಸಿ ಅದನ್ನು ಅನೇಕ ತುಂಡುಗಳನ್ನಾಗಿ ಮಾಡಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವ ಪರಂಪರೆ, ಸಂಪ್ರದಾಯ, ಸಂಸ್ಕೃತಿ ಶ್ರೀಶೈಲದಲ್ಲಿತ್ತು. ಗೋಪುರಕ್ಕೆ ಕಟ್ಟುತ್ತಿದ್ದ 'ಪಟಗಾ' ಧ್ವಜವೆಂದು ಪೂಜ್ಯನೀಯ ಭಾವನೆಯ ಚಾಲ್ತಿಯಲ್ಲಿತ್ತು ಎಂದು ಇತಿಹಾಸ ತಿಳಿಸುತ್ತದೆ.

ನಾಗಾವಿಯಲ್ಲಿ ನೇಕಾರನೊಬ್ಬ ಶ್ರೀಶೈಲದ ಮಲ್ಲಿಕಾರ್ಜುನ ಗೋಪುರಕ್ಕೆ ಕಟ್ಟಲೆಂದು 'ಪಟಗಾ' ನೇಯುತ್ತಿದ್ದ ಎಂದು ಟಿ.ಶ್ರೀನಿವಾಸ ಎಂಬುವರು ತಮ್ಮ 'ದಿ ಜರ್ನಲ್ ಆಫ್ ಹೈದರಾಬಾದ್ ಆರ್ಕಲಾಜಿಕಲ್ ಸೂಸೈಟಿ' (1919-20) ಗ್ರಂಥದಲ್ಲಿ ಅಪೂರ್ವವಾದ ಮಾಹಿತಿ ದಾಖಲಿಸಿರುವುದು ಇತಿಹಾಸ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ನಾಗಾವಿಯಲ್ಲಿ 'ಪಟಗಾ' ನೇಯುತ್ತಿದ್ದ ನೇಕಾರ ಯಾರು ಎಂಬುದು ನಿಗೂಢವಾಗಿಯೆ ಉಳಿದಿದೆ.

ಮರಾಠಿಯ ಖ್ಯಾತ ಸಂಶೋಧಕ ಡಾ.ರಾಮಚಂದ್ರ ಚಿಂತಾಮಣಿ ಢೇರೆಯವರು ತಮ್ಮ 'ಶಿಖರ ಶಿಂಗಣಾಪುರ ಶಂಭು ಮಹಾದೇವ' ಸಂಶೋಧನಾ ಕೃತಿಯಲ್ಲಿ ನಾಗಾವಿ ಮತ್ತು ಶ್ರೀಶೈಕ್ಕಿದ್ದ ಧಾರ್ಮಿಕ ಸಂಬಂಧ, ಸಾಂಸ್ಕೃತಿಕ ಪರಂಪರೆ ಬಗ್ಗೆ ಮಲ್ಲಿಕಾರ್ಜುನ ಗರ್ಭಗುಡಿ ಗೋಪುರಕ್ಕೆ ಪಟಗಾ ಸುತ್ತುವ ಸಂಪ್ರದಾಯದಲ್ಲಿ ದಾಖಲಿಸಿದ್ದಾರೆ. ಅದನ್ನು ಸಾಹಿತಿ ಡಾ.ಸರಜೂ ಕಾಟ್ಕರ್ ಅವರು ಕನ್ನಡನಾಡಿಗೆ ಪರಿಚಯಿಸಿದ್ದಾರೆ. ಯಾರೂ ಕೇಳರಿಯದ ನಾಗಾವಿಯ ಹೊಸ ಇತಿಹಾಸ ಕಾಲಗರ್ಭದಿಂದ ಹೊರಗೆ ಬಂದು ಬೆಳಕು ಕಂಡಂತ್ತಾಗಿದೆ.

ಶ್ರೀಶೈಲದ ಮಲ್ಲಿಕಾರ್ಜುನ ಗರ್ಭಗುಡಿ ಗೋಪರಕ್ಕೆ 'ಪಟಗಾ' ನಾಗಾವಿಯಲ್ಲಿ ತಯಾರು ಮಾಡಲಾಗುತ್ತಿತ್ತು ಎಂಬುದಕ್ಕೆ ಮತ್ತು ಬಟ್ಟೆ ವ್ಯಾಪಾರಕ್ಕೆ ನಾಗಾವಿಯಲ್ಲಿನ ಶಾಸನವೊಂದು ಸಾಕ್ಷಿಯಾಗಿದೆ. ಕಲ್ಯಾಣ ಚಾಲುಕ್ಯ ದೊರೆ ವಿಕ್ರಮಾದಿತ್ಯನ ಕಾಲದ ಕ್ರಿ.ಶ 1093ರ ಶಾಸನ ನೀಡುವ ಮಾಹಿತಿಯಂತೆ ನಾಗಾವಿಯಲ್ಲಿ ಬಟ್ಟೆ ನೇಕಾರಿಕೆ ಮತ್ತು ವ್ಯಾಪಾರ ನಡೆಯುತ್ತಿತ್ತು. ವಿವಿಧ ವಸ್ತುಗಳ ಮಾರಾಟದ ಜೊತೆಗೆ ಬಟ್ಟೆ ವ್ಯಾಪಾರದ ಮೇಲಿನ ತೆರಿಗೆ ಹಣವನ್ನು ವಿಕ್ರಮಾದಿತ್ಯನ ದಂಡನಾಯಕ 'ಕಾಳಿಮರಸ'ನು (ಕಾಳಿದಾಸ) ರಾಮೇಶ್ವರ ದೇವರ ಮಂದಿರದ ಗೋಪುರ ಜೀರ್ಣೋದ್ದಾರಕ್ಕೆ ಬಿಟ್ಟಿದ್ದನು ಎಂದು ಶಾಸನದಿಂದ ತಿಳಿದು ಬರುತ್ತದೆ.

ಕ್ರಿ.ಶ 11 ಮತ್ತು 12ನೇ ಶತಮಾನದಲ್ಲಿ ನಾಗಾವಿಯಿಂದ ಶ್ರೀಶೈಲಕ್ಕೆ 'ಪಟಗಾ' ತೆಗೆದುಕೊಂಡು ಹೋಗುತ್ತಿದ್ದಿರಬೇಕು. ಕಲ್ಯಾಣ ಚಾಲುಕ್ಯರ ಆಳ್ವಿಕೆ ಕೊನೆಗೊಂಡು ಬಹಮನಿ ಸುಲ್ತಾನರು ಈ ಭಾಗದಲ್ಲಿ ಆಳ್ವಿಕೆಗೆ ಬಂದ ನಂತರ ಐತಿಹಾಸಿಕವಾಗಿ ತುಂಬಾ ಪ್ರಸಿದ್ಧಿ ಮತ್ತು ಮಹತ್ವದ ಸ್ಥಾನ ಪಡೆದಿದ್ದ ನಾಗಾವಿಯ ಇತಿಹಾಸವು ಮಸುಕಾಗಿದೆ.

ಈಗಲೂ ಸಹ ಪ್ರತಿ ವರ್ಷ ಮಹಾಶಿವರಾತ್ರಿ ಸಮಯದಲ್ಲಿ ಚಿತ್ತಾಪುರ ತಾಲ್ಲೂಕಿನ ಅನೇಕ ಗ್ರಾಮಗಳ ಜನರು ಶ್ರೀಶೈಲಕ್ಕೆ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ತೆರಳಿ ಪಾತಾಳಗಂಗೆಯಲ್ಲಿ ಮಿಂದು ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಬರುತ್ತಾರೆ. ನಾಗಾವಿಯ ಗತಇತಿಹಾಸ ಸಂಶೋಧನೆಗೊಳಪಡಿಸಿ ಕಾಲಗರ್ಭದಲ್ಲಿ ಹುದುಗಿರುವ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಪರಪಂರೆಯ ಗತವೈಭವ ಬೆಳಕಿಗೆ ತರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.