ADVERTISEMENT

ಆನೆ ಕಂದಕ ನಿರ್ವಹಣೆಗೆ ಜೆಸಿಬಿ ಬಳಕೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 8:45 IST
Last Updated 5 ಜುಲೈ 2017, 8:45 IST

ಮಡಿಕೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಮಿತಿಮೀರುತ್ತಿದ್ದು, ಅದನ್ನು ತಡೆಗಟ್ಟಲು ಜಿಲ್ಲಾ ಭಾರತೀಯ ಕಿಸಾನ್‌ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಗಿದೆ. ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ಕುಮಾರ್‌ ಅಧ್ಯಕ್ಷತೆಯಲ್ಲಿ ಈಚೆಗೆ ಸಭೆ ನಡೆಯಿತು.

ಅರಣ್ಯದಂಚಿನಲ್ಲಿ ರೈಲ್ವೆ ಹಳಿ ನಿರ್ಮಾಣ, ಆನೆ ಕಂದಕ ನಿರ್ವಹಣೆಗೆ ಎರಡು ಜೆಸಿಬಿ ಬಳಕೆ ಹಾಗೂ ದುಬಾರೆ, ಇರ್ಪು, ಕಾವೇರಿ ನಿಸರ್ಗಧಾಮಗಳ ಆದಾಯವನ್ನು ವನ್ಯಜೀವಿಗಳ ದಾಳಿಗೆ ಒಳಗಾದ ಗಾಯಾಳುಗಳಿಗೆ ಪರಿಹಾರ ನೀಡುವುದು ಹಾಗೂ ಕಾಡುಪ್ರಾಣಿ ಹಾವಳಿ ತಡೆಗಟ್ಟುವ ಯೋಜನೆಗೆ ಬಳಸಿಕೊಳ್ಳಲು ನಿರ್ಧರಿಸಲಾಯಿತು.

ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಚೊಟ್ಟೆಕಮಾಡ ರಾಜೀವ್ ಬೋಪಯ್ಯ ಮಾತನಾಡಿ, ‘ಜಿಲ್ಲೆಯಲ್ಲಿ ಕಾಡಾನೆ ಹಾವಳಿಯಿಂದ ರೈತರು, ಕಾರ್ಮಿಕರು ಬದುಕಲು ಸಾಧ್ಯವಾಗುತ್ತಿಲ್ಲ. ಸಾವು, ನೋವುಗಳು ಹೆಚ್ಚುತ್ತಿವೆ. ಮತ್ತೊಂದು ಕಡೆ ಬೆಳೆ ನಷ್ಟವಾಗುತ್ತಿದೆ. ಕಷ್ಟಪಟ್ಟು ಬೆಳೆದರೂ ಫಸಲು ಬೆಳೆಗಾರರ ಕೈಸೇರುತ್ತಿಲ್ಲ.

ADVERTISEMENT

ಅರಣ್ಯ ಇಲಾಖೆಯಿಂದ ತೋಡಿರುವ ಆನೆ ಕಂದಕ ಮುಚ್ಚಿ ಹೋಗಿದ್ದು, ಕಾಡಾನೆಗಳು ಸೀದಾ ನಾಡಿಗೆ ಬರುತ್ತಿವೆ’ ಎಂದು ಸಭೆಯಲ್ಲಿ ಅಲವತ್ತುಕೊಂಡರು. ‘ಉತ್ತರ ಕೊಡಗು, ದಕ್ಷಿಣ ಕೊಡಗಿ ತಲಾ ಒಂದೊಂದು ಜೆಸಿಬಿ ನೀಡಬೇಕು. ಆ ಜೆಸಿಬಿಗಳನ್ನು ಮುಚ್ಚಿರುವ ಕಂದಕವನ್ನು ತೆಗೆಯಲು ಬಳಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.  

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಂಜನ್ ಚಂಗಪ್ಪ ಮಾತನಾಡಿ, ‘ಆನೆ ಹಾವಳಿ ತಡೆಗೆ ರೈಲ್ವೆ ಹಳಿ ಬೇಲಿ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಇದನ್ನೇ ಅನುಷ್ಠಾನಕ್ಕೆ ತರಬೇಕು. ಅರಣ್ಯದೊಳಗೆ ಬಹಳಷ್ಟು ಕೆರೆಗಳು ನಿಷ್ಪ್ರಯೋಜಕವಾಗಿವೆ. ಕೆರೆಗಳು ಹೂಳು ತೆಗೆಯಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಅದಕ್ಕೆ ಮನೋಜ್‌ ಕುಮಾರ್‌ ಪ್ರತಿಕ್ರಿಯಿಸಿ, ‘ರೈಲ್ವೆ ಹಳಿ ಬೇಲಿ ನಿರ್ಮಿಸಲು ಅರಣ್ಯ ಇಲಾಖೆಗೆ ₨ 200 ಕೋಟಿ ಅನುದಾನದ ಅಗತ್ಯವಿದೆ. ಈ ಸಂಬಂಧ ಬೆಂಗಳೂರು ಮೆಟ್ರೊ ರೈಲ್ವೆ ಕಾಮಗಾರಿ ಮಾಡಿದ ಎಂಜಿನಿಯರ್‌ಗಳ ಸಲಹೆ ಪಡೆದು ರೈಲ್ವೆ ಬೇಲಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಕಡೆಗಳಲ್ಲಿ ಕೆರೆಗಳ ಹೂಳು ತೆಗೆಸಲಾಗುವುದು’ ಎಂದು ಭರವಸೆ ನೀಡಿದರು.

ಅರಣ್ಯದೊಳಗೆ ವನ್ಯಪ್ರಾಣಿಗಳಿಗೆ ಸೂಕ್ತ ಮೇವು, ನೀರು ಲಭ್ಯವಿಲ್ಲದ ಕಾರಣ ಗ್ರಾಮಗಳಿಗೆ ಆಹಾರ ಅರಸಿ ಕಾಡಾನೆಗಳು ಬರುತ್ತಿವೆ. ಅರಣ್ಯದೊಳಗೆ ಮೇವು ಲಭ್ಯವಾಗುವಂತೆ ಮಾಡಲು ಮಳೆಗಾಲದಲ್ಲಿ ಅರಣ್ಯ ಪ್ರದೇಶದಲ್ಲಿ ಆಹಾರ ಧಾನ್ಯಗಳನ್ನು ಬಿತ್ತಲು, ಮಾವು, ಹಲಸು ಸಸಿ ನೆಡುವಂತೆ ವಿರಾಜಪೇಟೆ ತಾಲ್ಲೂಕು ಕಿಸಾನ್ ಸಂಘದ ಅಧ್ಯಕ್ಷ ಮುಕ್ಕಾಟಿರ ಪ್ರವೀಣ್ ಭೀಮಯ್ಯ ಸಲಹೆ ನೀಡಿದರು.

ಸಭೆಯಲ್ಲಿ ಡಿಸಿಎಫ್‌ಗಳಾದ ಎಂ.ಎಂ.ಜಯ (ವನ್ಯಜೀವಿ ವಿಭಾಗ), ಸೂರ್ಯಸೇನ್ (ಮಡಿಕೇರಿ ವಿಭಾಗ), ಮರಿಯಾ ಕ್ರಿಸ್ತರಾಜ್‌ (ವೀರಾಜಪೇಟೆ ವಿಭಾಗ), ಕಿಸಾನ್ ಸಂಘದ ಪದಾಧಿಕಾರಿಗಳಾದ ಕೋಟೆರ ಕಿಸಾನ್ ಉತ್ತಪ್ಪ, ನೂರೇರ ಮನೋಜ್, ಮಲ್ಲಮಾಡ ಪ್ರಭು ಪೂಣಚ್ಚ, ಸಿ.ಡಿ.ಮಾದಪ್ಪ, ವಸಂತ್, ಮಾಚಿಮಾಡ   ಎಂ.ರವೀಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.