ADVERTISEMENT

ಉಪ್ಪಾಗೆ ಫಲಕ್ಕೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಿಶೇಷ
Published 3 ಸೆಪ್ಟೆಂಬರ್ 2012, 10:05 IST
Last Updated 3 ಸೆಪ್ಟೆಂಬರ್ 2012, 10:05 IST

ನಾಪೋಕ್ಲು: ಮಳೆಗಾಲದ ದಿನಗಳಲ್ಲಿ ಮಾಗುವ ಉಪ್ಪಾಗೆ ಹಣ್ಣುಗಳಿಗೆ ಈಗ ಬೇಡಿಕೆ ಹೆಚ್ಚಿದೆ.

ಸಾಮಾನ್ಯವಾಗಿ ಓಣಂ ಹಬ್ಬದ ಸಂದರ್ಭದಲ್ಲಿ ಉಪ್ಪಾಗೆ ಹಣ್ಣಿಗೆ ಅಧಿಕ ಬೇಡಿಕೆ. ಕಾಚಂಪುಳಿ ಎಂದು ಕೊಡಗು ಜಿಲ್ಲೆಯಲ್ಲಿ ಹೆಸರಾಗಿರುವ ಇದು ಕಾಡು ಉತ್ಪನ್ನ. ಇದರ ವೈಜ್ಞಾನಿಕ ಹೆಸರು ಗಾರ್ಸಿನಿಯಾ.

ಕಾಫಿಯ ತೋಟಗಳ ನಡುವೆ ಅಲ್ಲಲ್ಲಿ ಕಂಡುಬರುವ ಉಪ್ಪಾಗೆಯ ಮರಗಳು 60-80 ಅಡಿ ಎತ್ತರ ಹಾಗೂ ಅದಕ್ಕೆ ಸಮನಾದ ದಪ್ಪ ಮತ್ತು ವಿಸ್ತಾರಗಳನ್ನೊಳಗೊಂಡಂತೆ ಬೃಹದಾಕಾರವಾಗಿ ಬೆಳೆಯಬಲ್ಲದು. ಉತ್ತಮ ಫಸಲು ದೊರೆತರೆ ಒಂದು ದೊಡ್ಡ ಮರದಲ್ಲಿ 15 ರಿಂದ 20 ಕ್ವಿಂಟಲ್ ಹಣ್ಣುಗಳು ದೊರೆಯುತ್ತವೆ. ಕೊಡಗಿನಲ್ಲಿ ಕೃಷಿಕರು ಮಳೆಗಾಲದಲ್ಲಿ ಉಪ್ಪಾಗೆ ಹಣ್ಣನ್ನು ಸಂಗ್ರಹಿಸಿ ಒಣಗಿಸಿಡುತ್ತಾರೆ. ಇದನ್ನು ಕೊಡಗು ಜಿಲ್ಲೆಯಲ್ಲಿ ಹಾಗೂ ನೆರೆಯ ಕೇರಳ ರಾಜ್ಯದಲ್ಲಿ ಮಾಂಸಹಾರಕ್ಕೆ ಹುಳಿ ಪದಾರ್ಥವಾಗಿ ಬಳಸುತ್ತಾರೆ. ಕೆಲವು ಪದಾರ್ಥಗಳಿಗೆ ಉಪ್ಪಾಗೆಯ ಒಣಗಿಸಿದ ಸಿಪ್ಪೆಯನ್ನು ಉಪಯೋಗಿಸಿದರೆ ಹಣ್ಣಿನ ನೀರನ್ನು ಇಂಗಿಸಿ ತಯಾರಿಸಿದ ಹುಳಿನೀರು ಕೂಡ ಹೆಚ್ಚಾಗಿ ಬಳಸುತ್ತಾರೆ. ಇದರ ಬೀಜಗಳನ್ನು ಒಣಗಿಸಿ ಕುಟ್ಟಿ ಬೇಯಿಸಿದರೆ ಇದರಕೊಬ್ಬು ಖಾದ್ಯ ತೈಲವಾಗಿ ಲಭ್ಯ. ಇದು ಹಳದಿ ಬಣ್ಣದಿಂದ ತುಪ್ಪದಂತೆ ಗಟ್ಟಿಯಾಗುವ ಗುಣವನ್ನು ಹೊಂದಿದ್ದು ತಿಂಡಿತಿನಿಸುಗಳ ತಯಾರಿಗೆ ಯೋಗ್ಯವಾಗಿದೆ.

ಕೇರಳದಲ್ಲಿ ಓಣಂ ಹಬ್ಬದ ಸಮಯಕ್ಕೆ ಉಪ್ಪಾಗೆ ಸಿಪ್ಪೆಗೆ ಬೇಡಿಕೆ ಹೆಚ್ಚಾಗುತ್ತದೆ. ಪ್ರಸಕ್ತ ವರ್ಷ ಒಂದು ಕೆ.ಜಿ ಸಿಪ್ಪೆಗೆ 125 ರೂಪಾಯಿ ದರವಿದೆ. ಉತ್ತಮವಾಗಿ ತಯಾರಿಸಿದ ಹುಳಿ ನೀರಿಗೆ ಬಾಟಲಿಯೊಂದಕ್ಕೆ 600 ರೂಪಾಯಿ ದರವಿದೆ. ಉಪ್ಪಾಗೆಗೆ ಅಧಿಕ ಬೇಡಿಕೆ ಇದ್ದರೂ ಒಣಗಿಸುವ ಸಮಸ್ಯೆ ರೈತರನ್ನು ಕಾಡುತ್ತಿದೆ. ಉಪ್ಪಾಗೆ ಹಣ್ಣುಗಳನ್ನು ವೈಜ್ಞಾನಿಕವಾಗಿ ಒಣಗಿಸಲು ಡ್ರೈಯರ್‌ಗಳ ಬಳಕೆಯಾದಲ್ಲಿ ಸಾಕಷ್ಟು ಶ್ರಮ ಹಾಗೂ ಖರ್ಚನ್ನು ಉಳಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.