ADVERTISEMENT

ಎರಡನೇ ದಿನ 11 ತಂಡಗಳ ಮುನ್ನಡೆ

ಕೊಡವ ಕುಟುಂಬಗಳ ನಡುವಿನ 22ನೇ ವರ್ಷದ ಕುಲ್ಲೇಟಿರ ಹಾಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 9:13 IST
Last Updated 17 ಏಪ್ರಿಲ್ 2018, 9:13 IST
ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್‌ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಲ್ಲೇಟಿರ ಕಪ್‌ ಹಾಕಿ ಟೂರ್ನಿಯಲ್ಲಿ ಸೋಮವಾರ ಮೇರಿಯಂಡ ಮತ್ತು ಪಂದ್ಯಂಡ ತಂಡಗಳ ನಡುವಿನ ಸೆಣೆಸಾಟ
ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್‌ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಲ್ಲೇಟಿರ ಕಪ್‌ ಹಾಕಿ ಟೂರ್ನಿಯಲ್ಲಿ ಸೋಮವಾರ ಮೇರಿಯಂಡ ಮತ್ತು ಪಂದ್ಯಂಡ ತಂಡಗಳ ನಡುವಿನ ಸೆಣೆಸಾಟ   

ನಾಪೋಕ್ಲು: ಇಲ್ಲಿನ ಚೆರಿಯಪರಂಬು ಜನರಲ್‌ ಕೆ.ಎಸ್‌.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ 22ನೇ ವರ್ಷದ ಕುಲ್ಲೇಟಿರ ಹಾಕಿ ಟೂರ್ನಿಯ ಸೋಮವಾರದ ಪಂದ್ಯಗಳಲ್ಲಿ 11 ತಂಡಗಳು ಜಯಗಳಿಸುವ ಮೂಲಕ ಮುಂದಿನ ಸುತ್ತು ಪ್ರವೇಶಿಸಿವೆ.

ಸೋಮವಾರ ನಡೆದ ಪಂದ್ಯಗಳಲ್ಲಿ ಮಂದನೆರವಂಡ, ಮೇರಿಯಂಡ, ಚೆರಿಯಪಂಡ, ಬೊಪ್ಪಂಡ, ಕಂಗಾಂಡ, ಬಲ್ಲಾಡಿಚಂಡ, ಮೂಕಳೆರ, ಮಾಚಿಮಂಡ, ಮಲ್ಚಿರ, ಮಾದಂಡ, ಪೆಮ್ಮುಡಿಯಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮಂದನೆರವಂಡ ಮತ್ತು ಕಾಂಗಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂದನೆರವಂಡ ತಂಡವು ಕಾಂಗಿರ ತಂಡವನ್ನು 6-5 ಗೋಲಿನಿಂದ ಟೈ ಬ್ರೇಕರ್ ಮೂಲಕ ಮಣಿಸಿತು. ಪಂದ್ಯಂಡ ಮತ್ತು ಮೇರಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇರಿಯಂಡ ತಂಡವು ಪಂದ್ಯಂಡ ತಂಡವನ್ನು 2-1 ಗೋಲಿನಿಂದ ಸೋಲಿಸಿತು. ಮೇರಿಯಂಡ ತಂಡದ ಪರ ರಾಯ್ ಅಯ್ಯಣ್ಣ ಹಾಗೂ ರೋಶನ್ ಮಾದಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಪಂದ್ಯಂಡ ತಂಡದ ಪರ ಮಿಲನ್ ಬೋಪಣ್ಣ ಒಂದು ಗೋಲು ದಾಖಲಿಸಿದರು.

ADVERTISEMENT

ಚೆರಿಯಪಂಡ ಮತ್ತು ಮುಲ್ಲೇಂಗಡ ತಂಡಗಳ ನಡುವೆ ನಡೆದ ಟೈ ಬ್ರೇಕರ್ ಪಂದ್ಯದಲ್ಲಿ ಚೆರಿಯಪಂಡ ತಂಡವು ಮುಲ್ಲೇಂಗಡ ತಂಡವನ್ನು 5-4 ಗೋಲಿನ ಅಂತರದಿಂದ ಮಣಿಸಿತು. ಬೊಪ್ಪಂಡ ಮತ್ತು ಮಾಚೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊಪ್ಪಂಡ ತಂಡವು ಮಾಚೇಟಿರ ತಂಡವನ್ನು 3-1 ಗೋಲಿನಿಂದ ಪರಾಭವಗೊಳಿಸಿತು. ಕಂಗಾಂಡ ಮತ್ತು ಮೇವಡ ತಂಡಗಳ ನಡುವಿನ ಪಂದ್ಯದಲ್ಲಿ ಕಂಗಾಂಡ ತಂಡವು ಮೇವಡ ತಂಡವನ್ನು 2-0 ಗೋಲಿನ ಅಂತರದಿಂದ ಸೋಲಿಸಿತು. ಬೊಳ್ಳಿಮಾಡ ಮತ್ತು ಬಲ್ಲಾಡಿಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಲ್ಲಾಡಿಚಂಡ ತಂಡವು ಬೊಳ್ಳಿಮಾಡ ತಂಡವನ್ನು 2-0 ಗೋಲಿನ ಅಂತರದಿಂದ ಸೋಲಿಸಿತು.

ಬಲ್ಲಾಡಿಚಂಡ ತಂಡದ ಪರ ರೋಶನ್ ತಮ್ಮಯ್ಯ ಎರಡು ಗೋಲು ದಾಖಲಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಮೂಕಳೆರ ಮತ್ತು ಕೊಡಂದೇರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂಕಳೆರ ತಂಡವು ಕೊಡಂದೇರ ತಂಡವನ್ನು 4-0 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಮೂಕಳೆರ ತಂಡದ ಪರ ಅಖಿಲ್ ತಮ್ಮಯ್ಯ ಎರಡು ಹಾಗೂ ಪೆಮ್ಮಯ್ಯ ಮತ್ತು ಕಾರ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು.

ಮಾಚಿಮಂಡ ಮತ್ತು ಬೊಟ್ಟೋಳಂಡ ತಂಡದ ನಡುವೆ ನಡೆದ ಪಂದ್ಯದಲ್ಲಿ ಮಾಚಿಮಂಡ ತಂಡವು ಬೊಟ್ಟೋಳಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ 3-2 ಗೋಲಿನಿಂದ ಸೋಲಿಸಿತು. ಮಲ್ಚಿರ ಮತ್ತು ಮೊಲ್ಲೇರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಚಿರ ತಂಡವು ಮೊಲ್ಲೇರ ತಂಡವನ್ನು 3-0 ಗೋಲಿನಿಂದ ಪರಾಭವಗೊಳಿಸಿತು.

ಪೊನ್ನಚಂಡ ಮತ್ತು ಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾದಂಡ ತಂಡವು ಪೊನ್ನಚಂಡ ತಂಡವನ್ನು 4-0 ಗೋಲಿನ ಅಂತರದಿಂದ ಮಣಿಸಿ ಗೆಲುವು ಸಾಧಿಸಿತು. ಮುಕ್ಕಾಟಿರ (ಕುಂಬಳದಾಳು) ಮತ್ತು ಪೆಮ್ಮುಡಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೆಮ್ಮುಡಿಯಂಡ ತಂಡವು ಮುಕ್ಕಾಟಿರ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.