ADVERTISEMENT

ಕನ್ನಡ ಭಾಷಿಕರ ಸಂಖ್ಯೆ ಇಳಿಮುಖ: ಡಾ. ಮಹೇಶ್ ಜೋಷಿ ವಿಷಾದ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 5:51 IST
Last Updated 7 ಜೂನ್ 2017, 5:51 IST
ತಾಲ್ಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಸಾರ ಭಾರತಿ ದಕ್ಷಿಣ ವಲಯ ಮಹಾನಿರ್ದೇಶಕ ಡಾ. ಮಹೇಶ್ ಜೋಷಿ ಮಾತನಾಡಿದರು
ತಾಲ್ಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಸಾರ ಭಾರತಿ ದಕ್ಷಿಣ ವಲಯ ಮಹಾನಿರ್ದೇಶಕ ಡಾ. ಮಹೇಶ್ ಜೋಷಿ ಮಾತನಾಡಿದರು   

ಸೋಮವಾರಪೇಟೆ: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕನ್ನಡ ಭಾಷಿಕರ ಸಂಖ್ಯೆ ಇಳಿಕೆಯಾಗುತ್ತಿದ್ದು, ಶುದ್ಧ ಕನ್ನಡ ಮಾತನಾಡುವವರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಸಾರ ಭಾರತಿ ದಕ್ಷಿಣ ವಲಯ ಮಹಾನಿರ್ದೇಶಕ ಡಾ. ಮಹೇಶ್ ಜೋಷಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಇಲ್ಲಿನ ಒಕ್ಕಲಿಗರ ಸಮುದಾಯಭವನದಲ್ಲಿ ಆಯೋಜಿಸಲಾಗಿದ್ದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ  ಅವರು ಮಾತನಾಡಿದರು.

ಕನ್ನಡ ಭಾಷೆ ಅತ್ಯಂತ ಶಕ್ತಿಯುತ ವಾಗಿದೆ. ಆದರೆ, ಭಾಷೆಗೆ ಸಲ್ಲಬೇಕಾದ ಗೌರವ, ಅಭಿಮಾನ ಲಭಿಸುತ್ತಿಲ್ಲ. ಇದರಿಂದಾಗಿ ಭಾಷಾ ಶಕ್ತಿಯ ಅರಿವೂ ಕಡಿಮೆಯಾಗುತ್ತಿದೆ. ಕೇವಲ ಶೇ 28ರಷ್ಟಿದೆ. ಅದರಲ್ಲೂ ಈ ನೆಲದ ಭಾಷೆಯಾಗಿರುವ ಕನ್ನಡದ ಅಸ್ತಿತ್ವಕ್ಕಾಗಿ ಕರ್ನಾಟಕದಲ್ಲೇ ಹೋರಾಟ ಮಾಡ ಬೇಕಾದ ಅನಿವಾರ್ಯತೆ ಎದುರಾಗಿರು ವುದು ನಾಡಿನ ದುರಂತ ಎಂದು ಹೇಳಿದರು.

ADVERTISEMENT

ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿಸಿ ಜಾಗೃತಿ ಉಂಟು ಮಾಡಲು ಸಾಹಿತ್ಯ ಸಮ್ಮೇಳನಗಳು, ಹೆಚ್ಚಾಗಿ ಆಯೋಜಿಸುವ ಮೂಲಕ ಕನ್ನಡ ಪರಿಷತ್‌ಗಳು ಸಹಕಾರಿಯಾಗಿವೆ ಭಾಷಾ ಉಳಿವಿಗೆ ಹೆಚ್ಚಿನ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರೋಪ ಸಮಾರಂಭದಲ್ಲಿ ಆಶಯ ನುಡಿಯನ್ನಾಡಿದ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಮಲ್ಲೋರಹಟ್ಟಿ, ರಾಜ್ಯದಲ್ಲಿ ಜಾತಿ ಮೀರಿ ಕನ್ನಡ ಭಾಷೆ ಬೆಳೆಯಬೇಕಿದೆ. ನೀತಿ ಬೋಧನೆಯಿಲ್ಲದ ಶಿಕ್ಷಣದಿಂದ ಸಮಾಜಕ್ಕೆ ಯಾವುದೇ ಪ್ರಯೋಜನ ವಿಲ್ಲ. ಶರಣರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಕನ್ನಡ ಸಾಹಿತ್ಯ ವನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸ ಬೇಕಾದ ಅನಿವಾರ್ಯತೆ ಇದೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಜವರಪ್ಪ ವಹಿಸಿದ್ದರು.

ಕವಿಗೋಷ್ಠಿ
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಕಾರ್ಯಕ್ರಮ ದಲ್ಲಿ ಕವಿಗಳು ಕವನ ವಾಚನ ಮಾಡಿದರು.

'ಪಳೆಯುಳಿಕೆ ಮುಳ್ಳುಗಳಿವೆ ಜೋಪಾನ' ಎಂಬ ಕವನವನ್ನು ಮಧು ಮಾಚಯ್ಯ, ‘ಧರೆ ಬೆಳಗುವ ನಿಸ್ವಾರ್ಥಿ ಭಾಸ್ಕರನೇ’ ಎಂಬ ಕವನವನ್ನು ಕವಯತ್ರಿ ವಾಸಂತಿ, ‘ಜನ್ಮದಾತೆ’ ಕವನವನ್ನು ಕೆ.ಪಿ.ಸುದರ್ಶನ್ ಕೇಳುಗರ ಮನಮುಟ್ಟುವಂತೆ ಪ್ರಸ್ತುತಪಡಿಸಿದರು.

ನಿಜಕ್ಕೂ ನೀ ಸತ್ತು ಬದುಕಿದೆಯಲ್ಲ ಎಂಬ ಕವನವನ್ನು ರಾಣಿ ರವೀಂದ್ರ  ವಾಚಿಸಿದರು. ದಯವಿಟ್ಟು ಮಾನವೀಯತೆ ಉಳಿಸಿಕೊಡಿ ಎಂಬ ಕವನವನ್ನು ಅನಿತಾ ಶುಭಾಕರ್ ಪ್ರಸ್ತುತಪಡಿಸಿದರು. ಅದೇ ರಾಗ ಅದೇ ಹಾಡು ಭಾಗ-2ರ ಕವನವನ್ನು ಸಬಾಸ್ಟಿನ್ ವಾಚಿಸಿದರು. ಹರೆಯದ ಆಲಾಪಗಳು ಕವನವನ್ನು ಕೂಡಿಗೆಯ ತೀರ್ಥೇಶ್ ವಾಚಿಸಿದರು.

'ಸಂರಕ್ಷಣೆ' ಹೆಸರಿನ ಕವನವನ್ನು ತೇಜಸ್ ಮೂರ್ತಿ, ಕನ್ನಡ ಕಹಳೆ ಮೊಳಗಲಿ ಶೀರ್ಷಿಕೆಯ ಕವನವನ್ನು ಪುಟ್ಟಣ್ಣ ಆಚಾರ್ಯ, 'ಭ್ರಷ್ಟರು ನಾಡುಕಟ್ಟಲು ಬರುತ್ತಿದ್ದಾರೆ' ಎಂಬ ಕವನವನ್ನು ಪೂಜಾ ವಾಚಿಸಿದರು.

'ಚೀತ್ಕಾರ' ಶೀರ್ಷಿಕೆಯ ಕವನವನ್ನು ಎಚ್.ಬಿ.ಜಯಮ್ಮ, ಶ್ರೀಕೊಡವ ಮಾತೆಯ ಜೈಜವಾನ್ ಕವನವನ್ನು ಕವಿ ಪ್ರೇಮ್‌ಕುಮಾರ್ ವಾಚಿಸುವ ಮೂಲಕ ಸಭಿಕರ ಗಮನ ಸೆಳೆದರು.

ಹಿರಿಯ ಸಾಹಿತಿಗಳಾದ ನ.ಲ. ವಿಜಯ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯನ್ನು ಉದ್ದೇಶಿಸಿ ಕುಶಾಲನಗರದ ಲೇಖಕಿ ಸುನೀತಾ ಲೋಕೇಶ್ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಚ್.ಎಚ್. ಸುಂದರ್, ಉಪನ್ಯಾಸಕಿ ತಿಲೋತ್ತಮೆ ಉಪಸ್ಥಿತರಿದ್ದರು.

ನಿರ್ಣಯಗಳು
ಸಮ್ಮೇಳನದಲ್ಲಿ ಪ್ರಮುಖವಾಗಿ ಐದು ನಿರ್ಣಯಗಳನ್ನು ಅಂಗೀಕರಿಸಲಾಯಿತು.

* ಕನ್ನಡ ಮಾತೃಭಾಷೆಯಾದ ರಾಜ್ಯ ದಲ್ಲಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿವೆ. ತಾಲ್ಲೂಕಿನ ಕನ್ನಡ ಶಾಲೆಗಳೂ ಸಹ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಕ್ರಮ ಕೈಗೊಳ್ಳಬೇಕು ಎಂಬ ಪ್ರಮುಖ ನಿರ್ಣಯವನ್ನು ಕೈಗೊಳ್ಳಲಾಯಿತು.

* ತಾಲ್ಲೂಕು ಕೇಂದ್ರದ ಮುಖಾಂತರ ಹಾಸನ ಜಿಲ್ಲೆಯ ಕೊಣನೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿ ತಕ್ಷಣ ಪೂರ್ಣಗೊಳಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದ್ದು, ಇದರಿಂದ  ತಾಲ್ಲೂಕು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಲಾಗಿದೆ.

* ಕೊಡಗಿನ ಸಮಗ್ರ ಅಭಿವೃದ್ಧಿಗಾಗಿ ರೈಲು ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಒತ್ತು ನೀಡಬೇಕು.

* ತಾಲ್ಲೂಕಿನ ಗಡಿಭಾಗದ ಕೆಲವು ಪ್ರದೇಶಗಳನ್ನು ಸೇರಿಸಿಕೊಂಡು ಹಿಂದೆ ಇದ್ದ ವಿಧಾನ ಸಭಾ ಕ್ಷೇತ್ರವನ್ನಾಗಿ ಮಾಡಲು ಆಡಳಿತಾ ರೂಢ ಸರ್ಕಾರ ಕ್ರಮಕೈಗೊಳ್ಳಬೇಕು, 

* ತಾಲ್ಲೂಕು ಕೇಂದ್ರಕ್ಕೆ ರಾಜ್ಯ ಸಾರಿಗೆ ಸಂಸ್ಥೆಯ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

ಕಸಾಪ  ಗೌರವ ಕಾರ್ಯದರ್ಶಿ ಎಸ್.ಡಿ. ವಿಜೇತ್   ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು.

ಸಮ್ಮೇಳನ; ಸಾಧಕರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ
ಸೋಮವಾರಪೇಟೆ: ತಾಲ್ಲೂಕು  ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.

ಸಾಹಿತ್ಯ ಕ್ಷೇತ್ರದಲ್ಲಿ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ವೈದ್ಯಕೀಯ ಕ್ಷೇತ್ರದಿಂದ ಡಾ. ಶರ್ಮಿಳಾ ಫರ್ನಾಂಡೀಸ್, ಸಮಾಜ ಸೇವೆಯಲ್ಲಿ ಬಿ.ಎಂ. ಮಲ್ಲಯ್ಯ, ಜಯಪ್ಪ ಹಾನಗಲ್ಲು, ಗಂಗಾಧರ್ ಮಾಲಂಬಿ, ಯುವ ಪ್ರತಿಭೆ ದರ್ಶನ್ ಸಾಗರ್ ಅವರನ್ನು ಸನ್ಮಾನಿಸಲಾಯಿತು.

ಸಂಗೀತ ಕ್ಷೇತ್ರದಿಂದ ಸಂಧ್ಯಾ ರಾಂಪ್ರಸಾದ್, ಜನಪದ ಕ್ಷೇತ್ರದಿಂದ ಎಸ್.ಪಿ. ಮಾಚಯ್ಯ, ನಾಪಂಡ ಚಿಣ್ಣಪ್ಪ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಿಂದ ಮಾಲಂಬಿ ಗೌರಿ, ಕೃಷಿ ಕ್ಷೇತ್ರದಿಂದ ಹೊಯ್ಸಳ ಹರದೂರು, ಪತ್ರಿಕೋದ್ಯಮ ಕ್ಷೇತ್ರದಿಂದ ಶನಿವಾರಸಂತೆಯ ನರೇಶ್‌ಚಂದ್ರ, ಪೌರಕಾರ್ಮಿಕರಾದ ಕಾಳಮ್ಮ, ಶಿಕ್ಷಣ ಕ್ಷೇತ್ರದಿಂದ ಬಿ.ಬಿ. ವೀರಭದ್ರಪ್ಪ, ಜಲಜಾ ಶೇಖರ್ ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಮಲ್ಲೋರಹಟ್ಟಿ, ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್,  ದೂರದರ್ಶನ ದಕ್ಷಿಣ ವಲಯ ಮಹಾನಿರ್ದೇಶಕ ಡಾ. ಮಹೇಶ್ ಜೋಷಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್, ತಾಲ್ಲೂಕು ಘಟಕದ ಅಧ್ಯಕ್ಷ ಜವರಪ್ಪ, ಪ್ರಮುಖರಾದ ವಿ.ಪಿ. ಶಶಿಧರ್, ಎಸ್.ಎಂ. ಡಿಸಿಲ್ವಾ, ಎಸ್.ಸಿ. ರಾಜಶೇಖರ್, ಭುವನೇಶ್ವರಿ, ಶೀಲಾ ಡಿಸೋಜ, ನಳಿನಿ ಗಣೇಶ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.