ADVERTISEMENT

ಕರಾಳ ದಿನವಾಗಿ ಆಚರಣೆ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 8:32 IST
Last Updated 4 ನವೆಂಬರ್ 2017, 8:32 IST

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಕೊಡವ ಸಮಾಜದ ವಿರೋಧವಿದೆ ಎಂದು ಇಲ್ಲಿನ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಹೇಳಿದರು. ಇಲ್ಲಿಯ ಮಾರುಕಟ್ಟೆ ಬಳಿ ಕೊಡವ ಸಮಾಜದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೀವ್ರ ವಿರೋಧದ ನಡುವೆಯೇ ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಮುಂದಾದರೆ ನಾವು ಕರಾಳ ದಿನ ಆಚರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜ್ಞಾನಿ ದಿ.ಅಬ್ದುಲ್ ಕಲಾಂ ಅವರಂತಹ ವ್ಯಕ್ತಿಗಳ ಜನ್ಮ ದಿನಾಚರಣೆ ಆಚರಿಸುವ ಬದಲು ಸರ್ಕಾರ ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿ ಆಚರಣೆ ನಡೆಸುತ್ತಿದೆ ಎಂದು ದೂರಿದರು. ಒಂದು ವರ್ಗದ ಓಲೈಕೆ ಮಾಡುವ ಮೂಲಕ ವೋಟ್ ಬ್ಯಾಂಕ್ ಆಗಿ ಪರಿವರ್ತಿಸುವ ಉದ್ದೇಶದಿಂದ ಜಯಂತಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ದೂರಿದರು.

ವೀರ ಸೇನಾನಿಗಳ ನಾಡಿನಲ್ಲಿ ಅಮಾನುಷವಾಗಿ ಕೊಡವ ಜನಾಂಗದವರನ್ನು ಹತ್ಯೆ ಮಾಡಿ ಬಲವಂತವಾಗಿ ಸಾವಿರಾರು ಜನರನ್ನು ಮತಾಂತರ ಮಾಡಿಸಿದ ಟಿಪ್ಪು ಜಯಂತಿ ನಮಗೆ ಬೇಡ. ವಿರೋಧದ ನಡುವೆ ಆಚರಣೆ ಮಾಡಿದರೆ ಅಂದು ಆಗುವ ಕಷ್ಟನಷ್ಟಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಎ.ಎ.ದೇವಯ್ಯ, ಐಲಪಂಡ ಮಂದಣ್ಣ, ಅಜ್ಜೆಟ್ಟೀರ ದೇವಯ್ಯ, ಚೌರೀರ ತಿಮ್ಮಯ್ಯ, ಕೇಕಡ ಸೋಮಣ್ಣ, ಮೇವಡ ಮಧುಮಾದಯ್ಯ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.