ADVERTISEMENT

ಕಾಯಕಲ್ಪದ ನಿರೀಕ್ಷೆಯಲ್ಲಿ ಜೈನ ಬಸದಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 6:47 IST
Last Updated 16 ಜುಲೈ 2017, 6:47 IST
ಶನಿವಾರಸಂತೆ ಸಮೀಪದ ಹೊಸೂರು ಕಲ್ಲಪ್ಪನಹಳ್ಳಿ ಗುಡ್ಡದ ಮೇಲೆ ಕಾಯಕಲ್ಪದ ನಿರೀಕ್ಷೆಯಲ್ಲಿ ನಿಂತಿರುವ ಪುರಾತನ ಜೈನ ಬಸದಿ
ಶನಿವಾರಸಂತೆ ಸಮೀಪದ ಹೊಸೂರು ಕಲ್ಲಪ್ಪನಹಳ್ಳಿ ಗುಡ್ಡದ ಮೇಲೆ ಕಾಯಕಲ್ಪದ ನಿರೀಕ್ಷೆಯಲ್ಲಿ ನಿಂತಿರುವ ಪುರಾತನ ಜೈನ ಬಸದಿ   

ಶನಿವಾರಸಂತೆ: ಇಲ್ಲಿಂದ 8 ಕಿ.ಮೀ ದೂರದ ಹೊಸೂರು ಗ್ರಾಮದ ಕಲ್ಲಪ್ಪನಹಳ್ಳಿ ಗುಡ್ಡದ ಮೇಲೆ ನಾಲ್ಕು ನೂರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಜೈನ ಬಸದಿಯೊಂದು ಬೆಳಕಿಗೆ ಬಂದು 14 ವರ್ಷಗಳು ಉರುಳಿ ಹೋದರೂ ಇಂದಿಗೂ ಕಾಯಕಲ್ಪದ ನಿರೀಕ್ಷೆಯಲ್ಲಿದೆ.

ಕಾಡು ಪೊದೆ, ಬಿದಿರು ಮೆಳೆಗಳಿಂದ ಸಂಪೂರ್ಣ ಮುಚ್ಚಿಹೋಗಿದ್ದ 16 ಅಡಿ ಉದ್ದ, 10 ಅಡಿ ಅಗಲ ಹಾಗೂ 8 ಅಡಿ ಎತ್ತರವಿರುವ ಈ ಜೈನ ಬಸದಿ 2003ರಲ್ಲಿ ಹೊಸೂರು ಗ್ರಾಮದ ಉತ್ಸಾಹಿ ಪರಿಸರ ಹೋರಾಟ ಹೇಮಾವತಿ ಸಂಘಟನೆ ಅಧ್ಯಕ್ಷ ಎಚ್.ಕೆ. ರಮೇಶ್ ಅವರಿಗೆ ತಿರುಗಾಡಲು ಹೋದಾಗ ಗುಡ್ಡದ ಮೇಲಿರುವ ಜೈನ ಬಸದಿ ಬಗ್ಗೆ ಕುತೂಹಲ ಕೆರಳಿತು.

ಗುಡ್ಡದ ಮೂರು ಭಾಗದಲ್ಲಿ ಬೆಟ್ಟ ಸಾಲುಗಳಿದ್ದು ಕಣ್ಮನ ಸೆಳೆವ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಗೆಳೆಯರ ಜತೆಗೂಡಿ ಬಸದಿಯ ಸುತ್ತಲಿನ ಕಾಡು ಪೊದೆ ಕಡಿದು ಸ್ವಚ್ಛಗೊಳಿಸಿದರು. ಬಸದಿಯ ಒಳಭಾಗದಲ್ಲಿ ಕಲ್ಲು ಚಪ್ಪಡಿಗಳನ್ನು ಕೀಳಲಾಗಿದೆ. ಯಾರೋ ಚಿನ್ನಾಭರಣಗಳ ನಿಧಿ ಇರಬಹುದೆಂದು ಭಾವಿಸಿ ಕಿತ್ತಿರಬಹುದೆಂಬ ಭಾವನೆಯನ್ನು ರಮೇಶ್ ವ್ಯಕ್ತಪಡಿಸುತ್ತಾರೆ.

ADVERTISEMENT

ರಮೇಶ್ ನೇತೃತ್ವದಲ್ಲಿ ಗ್ರಾಮದ ಕೆಲವು ಯುವಕರು ಬಸದಿಯ ಸುತ್ತ 4 ಅಡಿಯಷ್ಟು ಎತ್ತರ, 30 ಅಡಿ ಉದ್ದ ಹಾಗೂ 40 ಅಡಿ ಅಗಲದ ಕಲ್ಲು, ಮಣ್ಣಿನ ಕಟ್ಟೆ ನಿರ್ಮಿಸಿದ್ದಾರೆ. ಸಂಜೆ ಬಸದಿಯ ಎದುರು ನಿಂತಾಗ ಸೂರ್ಯಾಸ್ತದ ಸುಂದರ ದೃಶ್ಯವನ್ನು ಕಾಣಬಹುದಾಗಿದೆ.

ಹೊಸೂರು ಗ್ರಾಮದ ಬಸ್ ನಿಲ್ದಾಣದಿಂದ ಅರ್ಧ ಕಿ.ಮೀ ದೂರ ಬೆಟ್ಟವನ್ನೇರಿದರೆ ಇತ್ತೀಚೆಗೆ ಜೀರ್ಣೋ ದ್ಧಾರಗೊಂಡಿರುವ ಚೋಳರ ಕಾಲದ ಬಸವೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನಕ್ಕೂ ಐತಿಹಾಸಿಕ ಹಿನ್ನಲೆ ಇದ್ದು ಪ್ರತಿ ವರ್ಷ ಕವಟೆಕಾಯಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಮೈಸೂರು, ಬೆಂಗಳೂರು, ಹಾಸನ ಕಡೆಯಿಂದಲೂ ಭಕ್ತಜನರು ಬರುತ್ತಾರೆ ಎಂಬುದಾಗಿ ಗ್ರಾಮಸ್ಥರು ತಿಳಿಸುತ್ತಾರೆ.

ಬಸವೇಶ್ವರ ದೇವಸ್ಥಾನದಿಂದ 200 ಮೀಟರ್ ದೂರದಲ್ಲೇ ಜೈನ ಬಸದಿ ಇದೆ. ಬಸದಿಯ ಮುಖ್ಯ ದ್ವಾರದ ನೆತ್ತಿಯಲ್ಲಿ ತೀರ್ಥಂಕರರೊಬ್ಬರ ಕೆತ್ತನೆ, ಹೊಯ್ಸಳರ ಲಾಂಛನ ಇದೆ. ಗರ್ಭಗುಡಿಯಳಗೆ ನಕ್ಷತ್ರಾಕಾರದ ಮೇಲ್ಛಾವಣಿಯಿದ್ದು ಅಮೃತ ಶಿಲೆಯೆಂದು ಹೇಳಲಾಗುವ ಪೀಠ ಹಾಗೂ ಕೆಲವು ಊನಗೊಂಡ ವಿಗ್ರಹಗಳಿವೆ. ಬಸದಿ ಒಳಭಾಗವನ್ನು ಚಪ್ಪಡಿಯಂತಿರುವ ಸುಟ್ಟ ಇಟ್ಟಿಗೆ, ಸುಣ್ಣ ಬಳಸಿ ಕಟ್ಟಲಾಗಿದೆ.

ಬಸದಿ ಮುಂಭಾಗ ತೀರ್ಥಂಕರರ ಪ್ರತಿರೂಪ ಹೊಂದಿರುವ 3 ಶಿಲಾ ಶಾಸನಗಳಿದ್ದು ಕಟ್ಟೆಯಲ್ಲಿ ಇರಿಸಲಾಗಿದೆ. ಅನತಿ ದೂರದಲ್ಲಿರುವ ದಿಬ್ಬವನ್ನು ಪ್ರಕೃತಿ ವೀಕ್ಷಣಾ ಗೋಪುರ ಮಾಡುವ ಕನಸು ಕಂಡಿರುವ ರಮೇಶ್ ಮತ್ತು ಗೆಳೆಯರ ತಂಡ ಬಸದಿಯ ಸ್ಥಳವನ್ನು ಪ್ರವಾಸಿ ತಾಣವಾಗಿಸುವ ಪಣ ತೊಟ್ಟಿದೆ.

ಹಾಸನದ ಜೈನ ಧರ್ಮ ಪ್ರಮುಖರು ಹಾಗೂ ಸಾಹಿತಿ ಹಂಪನಾ ಈ ಬಸದಿಗೆ ಭೇಟಿ ನೀಡಿ ಪ್ರವಾಸಿ ತಾಣವಾಗಿಸು ವುದಾಗಿ ತಿಳಿಸಿದ್ದಾರೆ. ಸರ್ಕಾರ ಮತ್ತು ಪುರಾತತ್ವ ಇಲಾಖೆ ಪ್ರಕೃತಿಯ ಮಡಿಲಲ್ಲಿರುವ ಬಸದಿಯ ಇತಿಹಾಸದ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಸಿ ಬೆಳಕು ಚೆಲ್ಲಿಬೇಕು ಎಂಬುದು ರಮೇಶ್ ಮತ್ತು ಗ್ರಾಮಸ್ಥರ ಬೇಡಿಕೆಯಾಗಿದೆ.

* * 

ಜೀರ್ಣೋದ್ಧಾರದೊಂದಿಗೆ ಜೈನ ಬಸದಿ ಹಾಗೂ ಬಸವೇಶ್ವರ ದೇಗುಲದ ರಸ್ತೆ ಮೊದಲಿಗೆ ದುರಸ್ತಿಯಾಗಿ ಅಭಿವೃದ್ಧಿ ಹೊಂದಿದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದೀತು
ಈ.ಎಸ್. ದಿನೇಶ್, ಅಧ್ಯಕ್ಷ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹೊಸೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.